ಕೋವಿಡ್ 19 ರಿಂದಾಗಿ ಭಾರತದ ಆರ್ಥಿಕತೆಯಲ್ಲಿ ಭಯಾನಕವಾದ ನಿರುದ್ಯೋಗ ತಲೆದೋರಿದ್ದು, ಇದರಿಂದಾಗಿ ಆದಾಯ, ಅನುಭೋಗ, ಹೂಡಿಕೆ, ಉಳಿತಾಯ ಕುಸಿದು ಬಹುತೇಕ ಭಾರತೀಯರ ಜೀವನ ಮಟ್ಟ ನಿಕೃಷ್ಟ ಹಂತಕ್ಕೆ ತಲುಪಿದೆ.
ಇಂತಹ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಹೊರತಾಗಿ ದೇಶದಲ್ಲಿ ಜನರಲ್ಲಿ ಮತ್ತು ಆರಾಧನಾ ಕೇಂದ್ರಗಳಲ್ಲಿರುವ ಮಿಗುತೆ ಚಿನ್ನ ಮತ್ತು ಹಿಡುವಳಿದಾರರಲ್ಲಿರುವ ಹೆಚ್ಚುವರಿ ಭೂಮಿಯನ್ನು ಮಾರಾಟ ಮಾಡಿ ಸ್ವಾವಲಂಬಿ ಭಾರತವನ್ನು ಕಟ್ಟಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಬಿ. ಪ್ರಭಾಕರ ಶಿಶಿಲ ಪ್ರತಿಪಾದಿಸಿದರು.
ಕೇಂದ್ರ ಸರಕಾರದ ವಾರ್ತಾ ಮತ್ತು ಮಾಹಿತಿ ವಿಭಾಗ ಸಂಯೋಜಿಸಿದ ರಾಷ್ಟ್ರೀಯ ಮಟ್ಟದ ವೀಡಿಯೋ ಸೆಮಿನಾರ್[ವೆಬಿನಾರ್]ನಲ್ಲಿ ದಿಕ್ಸೂಚಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅವರು-ಸಣ್ಣ ಕೈಗಾರಿಕೆಗಳ, ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳ ಹೆಚ್ಚಳ, ಮೂಲ ಸವಲತ್ತುಗಳ ನಿರ್ಮಾಣದಿಂದ ವಿದೇಶೀ ಬಂಡವಾಳವನ್ನು ಆಕರ್ಷಿಸುವುದು, ಸಣ್ಣ ಕೈಗಾರಿಕಾ ರಂಗವನ್ನು ದೇಶೀಯ ಹೂಡಿಕೆದಾರರಿಗೆ ಮೀಸಲಿಡುವುದು. ಒಬ್ಬ ವ್ಯಕ್ತಿ ಮತ್ತು ಒಂದು ಆರಾಧನಾ ಕೇಂದ್ರ ಹೊಂದಿರಬಹುದಾದ ಗರಿಷ್ಠ ಪ್ರಮಾಣದ ಚಿನ್ನದ ಮಿತಿಯನ್ನು ನಿಗದಿಪಡಿಸಿ ಹೆಚ್ಚುವರಿ ಚಿನ್ನವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು, ಭೂಸುಧಾರಣೆಯ ಕಟ್ಟುನಿಟ್ಟಿನ ಅನುಷ್ಠಾನದಿಂದ ಹೆಚ್ಚುವರಿ ಭೂಮಿಯನ್ನು ಭೂ ರಹಿತರಿಗೆ ಹಂಚುವುದು- ಇತ್ಯಾದಿ ಕ್ರಮಗಳಿಂದ ಭಾರತ ಆಂತರಿಕವಾಗಿ ಬಲಾಢ್ಯವಾಗಿ ಸ್ವಾವಲಂಬಿ ದೇಶವಾಗುವುದು ಎಂದವರು ಹೇಳಿದರು.
ಕೇಂದ್ರ ವಾರ್ತಾ ಮತ್ತು ಮಾಹಿತಿ ಹಿರಿಯ ಅಧಿಕಾರಿ ಜಿತು ನಿಡ್ಲೆ, ಶಿವಮೊಗ್ಗ ಸರಕಾರಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ. ದುಗ್ಗಪ್ಪ ಮತ್ತು ಅರ್ಥಶಾಸ್ತ್ರ ಪ್ರಾಧ್ಯಾಪಿಕೆ ಪ್ರೊ. ಜಯಂತಿ ಹಾಗೂ ವಿದ್ಯಾರ್ಥಿನಿ ವೃಂದದವರು ಪ್ರಶೋತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.