Breaking News

ಬದುಕು ಕಲಿಸಿದವರು….

Advt_Headding_Middle
Advt_Headding_Middle

ನೋಡು ಪ್ರಮೀಳಾ,ಬದುಕೆಂದರೆ ಹೂವಿನ ಹಾಸಿಗೆಯಲ್ಲ,ನೀನು ನಡೆಯುವ ದಾರಿಯಲ್ಲಿ ಕಷ್ಟಗಳೆಂಬ ಕಲ್ಲು ಮುಳ್ಳುಗಳು ತುಂಬಿರಬಹುದು,ಭಗವಂತನ ಮೇಲೆ ಭಾರ ಹಾಕಿ ಮುನ್ನಡೆದುಬಿಡು,ಆದರೆ ಸತ್ಯ,ಧರ್ಮ ನ್ಯಾಯ, ನಿಷ್ಠೆಗಳು ಸದಾ ನಿನ್ನ ಜೊತೆಗಿರಲಿ.ಯಾಕೆಂದರೆ ಕಷ್ಟಕಾಲದಲ್ಲಿ ಖಂಡಿತಾ ಇವುಗಳು ನಿನ್ನ ನೆರವಿಗೆ ಬರುತ್ತವೆ!!
ಹೀಗಂತ ,ಸುಮಾರು ಹದಿಮೂರು ವರುಷಗಳ ಹಿಂದೆ,ನನ್ನ ನೆಚ್ಚಿನ ಗುರುಗಳೋರ್ವರು ಶಿಕ್ಷಕ ತರಬೇತಿಯ ಕೊನೆಯ ದಿನಗಳಲ್ಲಿ ನನ್ನ ಅಟೋಗ್ರಾಫಲ್ಲಿ ಬರೆದ ಸಾಲುಗಳು ಈಗಲೂ ನನ್ನ ಮನಃಪಟಲದಲ್ಲಿ ಅಚ್ಚೊತ್ತಿ ನಿಂತಿದೆ. ಬಹುಶಃ ಅವರು ಹಾಕಿಕೊಟ್ಟ ಜೀವನ ಸೂತ್ರಗಳು,ಮೌಲ್ಯಗಳು, ಆದರ್ಶಗಳಿಗೆ ತಲೆಬಾಗಿ ನಡೆದುದಕ್ಕೋ ಏನೋ,ನಾನೂ ಇವತ್ತು ಸಮಾಜದಲ್ಲಿ ಒಂದು ಉತ್ತಮ ಸ್ಥಾನ ಗಳಿಸಲು ಸಾಧ್ಯವಾಗಿದೆ.
ಶಿಕ್ಷಕರೆಂದರೆ, ವಿದ್ಯಾರ್ಥಿಗಳಿಗೆ ಆತ್ಮೀಯ ಮಿತ್ರರಂತಿರಬೇಕು..ಈ ಮಾತು ಅಕ್ಷರಶಃ ನಿಜ‌.ಯಾವಾಗ ಶಿಕ್ಷಕರು ತನ್ನ ವಿದ್ಯಾರ್ಥಿಗಳ ಜೊತೆ ಸ್ನೇಹಿತರಂತಿರುತ್ತಾರೋ ಆಗ ವಿದ್ಯಾರ್ಥಿಗಳು ಕೂಡ ಮುಕ್ತ ಮನಸಿನಿಂದ ಶಿಕ್ಷಕರ ಜೊತೆ ಬೆರೆಯುತ್ತಾರೆ.ಇದು ಉತ್ತಮ ಶಿಕ್ಷಣಕ್ಕೆ ಮುನ್ನುಡಿ ಬರೆಯುವುದರೊಂದಿಗೆ, ಗುರು ಶಿಷ್ಯರ ಸಂಬಂಧ ಗಟ್ಟಿಯಾಗಿ,ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ…..
ಹೇಳಿ ಕೇಳಿ ನನ್ನದು ಭಾವುಕ ಮನಸಿನ ವ್ಯಕ್ತಿತ್ವ.ಆಗಿನ್ನೂ ಪ್ರಪಂಚ ಸರಿಯಾಗಿ ಅರ್ಥವಾಗದ ಸಮಯ.ಗೊಂದಲ,ಗೋಜಲುಗಳ ಬದುಕು.ಸಣ್ಣ ಪುಟ್ಟ ವಿಷಯಗಳಿಗೂ ತೀರಾ ತಲೆಕೆಡಿಸಿಕೊಂಡು ಬದುಕೇ ಮುಗಿದು ಹೋಯ್ತೇನೋ ಅಂತ ಅಳುತ್ತಾ ಕುಳಿತುಕೊಳ್ಳುವಾಗಲೆಲ್ಲಾ ಸಾಂತ್ವನದ ಮಾತುಗಳನ್ನಾಡಿ, ಅಮ್ಮನಂತೆ,ಅಕ್ಕನಂತೆ, ಗೆಳತಿಯಂತೆ ಪ್ರೀತಿ ತೋರಿಸಿ, ನಾನಿಡುವ ಹೆಜ್ಜೆಗಳು ತಡವರಿಸದಂತೆ ಕಾಯ್ದ ನನ್ನ ಪ್ರೀತಿಯ ಗುರುಗಳು ಶ್ರೀಮತಿ ಸಿಲ್ವಿಯಾ ಡಿಕೋಸ್ತ….
ಅದೆಷ್ಟು ಸರಳ ಸಜ್ಜನಿಕೆಯ ವ್ಯಕ್ತಿತ್ವ ಎಂದರೆ ,ನೆನಪಾದಾಗಲೆಲ್ಲ ನನ್ನ ಮನ ಗೌರವಪೂರ್ವಕವಾಗಿ ಬಾಗುತ್ತದೆ.

ಬದುಕಿನಲ್ಲಿ ಸೋತಾಗ ಧೈರ್ಯ ತುಂಬಿದ, ನನ್ನವರು ಯಾರೂ ಇಲ್ಲ ಅಂತ ಕೊರಗುವಾಗ ,ನಾನಿದ್ದೇನೆ ನಿನಗೆ,ನಿನ್ನ ನೋವು ನಲಿವುಗಳನ್ನು ನನ್ನ ಜೊತೆ ಹಂಚಿಕೋ ಎಂದ ನನ್ನ ಪ್ರೀತಿಯ ಗುರುಗಳನ್ನು ನಾ ಹೇಗೆ ಮರೆಯಲಿ ?

ಪ್ರಸ್ತುತ ಮಂಗಳೂರಿನ ಸೈಂಟ್ ಆನ್ಸ್ ಶಿಕ್ಷಕಿ ತರಬೇತಿ ಸಂಸ್ಥೆಯಲ್ಲಿ ಸಮಾಜವಿಜ್ಞಾನ ಪ್ರಾಧ್ಯಾಪಕಿ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ,ತನ್ನ ಆದರ್ಶನೀಯ ಗುಣನಡವಳಿಕೆಯಿಂದಲೇ ನನ್ನ ಮನದಲ್ಲಿ ಪವಿತ್ರ ಸ್ಥಾನ ಪಡೆದುಕೊಂಡು,ಶಾಶ್ವತವಾಗಿ ನೆಲೆನಿಂತ, ನನ್ನ ಗುರುಗಳು ಶ್ರೀಮತಿ ಸಿಲ್ವಿಯಾರವರನ್ನು ಈ ದಿನ ಪ್ರೀತಿಯಿಂದ,ಗೌರವದಿಂದ,ಭಕ್ತಿಯಿಂದ ನೆನೆಯುತ್ತೇನೆ….!!
ಭಗವಂತ ನಿಮಗೆ ಸದಾಕಾಲವೂ ಆಯುಷ್ಯ,ಆರೋಗ್ಯ ,ಸುಖ , ನೆಮ್ಮದಿ ಕರುಣಿಸಿ ಕಾಪಾಡಲಿ ಮಿಸ್,ನನ್ನಲ್ಲಿ ಭರವಸೆ ತುಂಬಿದ ನಿಮ್ಮ ಮೊಗದ ಸುಂದರ ನಗು ಸದಾ ಕಾಲವೂ ಹಾಗೇ ಇರಲಿ…..!

ಪ್ರೀತಿಯ ನೆನಪುಗಳೊಂದಿಗೆ,
ನಿಮ್ಮ ನೆಚ್ಚಿನ ವಿದ್ಯಾರ್ಥಿನಿ

_ಪ್ರಮೀಳಾ ರಾಜ್
ಶಿಕ್ಷಕ ಸಾಹಿತಿಗಳು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ,ನಿಡುಬೆ,ಐವರ್ನಾಡು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.