ವಿಶ್ವ ಅಂಚೆ ದಿನದ ಪ್ರಯುಕ್ತ ಬರಹ
ಧನಂಜಯ ಬಳ್ಳಡ್ಕ
ನಮ್ಮ ಬಾಲ್ಯದ ದಿನಗಳಲ್ಲಿ ಮಧ್ಯಾಹ್ನ 12 ರಿಂದ 1 ಗಂಟೆಯ ವರೆಗೆ ಪ್ರತೀ ಮನೆಯ ಮಹಿಳೆಯರು ಅಥವಾ ಮನೆಯ ಹಿರಿಯ ಸದಸ್ಯರು ಅಥವಾ ಮಕ್ಕಳು ಅಂಚೆಯಣ್ಣನಿಗೆ ದಾರಿ ಕಾಯುತ್ತಿದ್ದರು. ಆ ಸಮಯದಲ್ಲಿ ನಮ್ಮ ಸಂಬಂಧಿಗಳು ನಮ್ಮನ್ನು ಪ್ರೀತಿಸುವ ವ್ಯಕ್ತಿಗಳು ಕಳಿಸುವ ಸಂದೇಶವನ್ನು ಹೊತ್ತುಕೊಂಡು ಅಂಚೆಯಣ್ಣ ಮನೆಮನೆಗೆ ಬರುತ್ತಿದ್ದರು. ಈಗಲೂ ಆ ದಿನಗಳು ಕಣ್ಣಮುಂದೆ ಹಾದುಹೋಗುತ್ತದೆ. ಒಂದೊಂದು ಸಲ ಅಂಚೆಯಣ್ಣ ನಮ್ಮ ಮನೆ ದಾಟಿ ಮುಂದಿನ ಮನೆಗೆ ಹೋಗುವಾಗ ಅವರನ್ನು ಕರೆದು ನಮಗೆ ಕಾಗದ ಇಲ್ವಾ ಅಂತ ಕೇಳುತ್ತಿದ್ದುದುಂಟು. ಆ ಸಮಯದಲ್ಲಿ ಬಿಸಿಲಿನಲ್ಲಿ ನಡೆದುಕೊಂಡು ಬಂದ ಅಂಚೆಯಣ್ಣನಿಗೆ ಸಿಟ್ಟು ಬರುತ್ತಿತ್ತು. ಇದ್ದರೆ ಕೊಡುವುದಿಲ್ವಾ ನಿಮಗೆ ಅಂತ ಹೇಳುತ್ತಿದ್ದರು.
ನಾವು ಸಣ್ಣವರಿದ್ದಾಗ ನಮ್ಮ ಊರು ಉಬರಡ್ಕದಲ್ಲಿ ಒಬ್ಬ ಅಂಚೆಯಣ್ಣ ಇದ್ದರು. ಪೋಸ್ಟ್ ಮ್ಯಾನ್ ರಾಮಣ್ಣ ಅಂತ (ಟಪ್ಪಲ್ ರಾಮಣ್ಣ ಎಂದೇ ಖ್ಯಾತರು). ಕುತ್ತಮೊಟ್ಟೆಯವರು.
ಅವರು ನಿವೃತ್ತಿಯಾಗುವ ವರೆಗೆ ಕೆಲಸ ಮಾಡಿದರು. ಅವರ ಮಗ ಕೂಡಾ ಅದೇ ಕೆಲಸ ಮಾಡುತ್ತಿರುವುದು ಸಂತೊಷದ ವಿಚಾರ. ರಾಮಣ್ಣ ನಮ್ಮ ಊರಿನ ಅಚ್ಚುಮೆಚ್ಚಿನ ಅಂಚೆಯಣ್ಣ ಆಗಿದ್ದರು. ಆ ದಿನಗಳು ಈಗಲೂ ನೆನಪಾಗುತ್ತವೆ. ಜನರಿಗೆ ಕುತೂಹಲ ಹಾಗೂ ಕಾತರ ಇರುತ್ತಿತ್ತು. ನಮಗೆ ಇಷ್ಟಪಡುವ ವ್ಯಕ್ತಿಗಳು ಏನು ಸಂದೇಶ ಕಳಿಸಿದ್ದಾರೆ ಎಂದು ಕಾತರರಾಗಿರುತ್ತಿದ್ದೆವು. ಆಗ ಸಂಪರ್ಕಕ್ಕೆ ಕಾಗದ ಮಾತ್ರ ಒಂದು ಸಂವಹನದ ವ್ಯವಸ್ಥೆಯಾಗಿತ್ತು. ಮೊಬೈಲ್ ಇಲ್ಲದಿದ್ದ ಆ ಕಾಲದ ಜೀವನ ಶೈಲಿಯ ಆನಂದವನ್ನು ಅನುಭವಿಸಿದವರಷ್ಟೇ ಬಲ್ಲರು. ಆಗಿನ ಕಾಲದಲ್ಲಿ ಅಂಚೆಯಣ್ಣ ಅಂದರೆ ಪ್ರತಿಯೊಬ್ಬರ ಜೀವನದಲ್ಲೂ ಸಂತೋಷ ಕೊಡುವ ವ್ಯಕ್ತಿ ಹಾಗೂ ಮಹತ್ತರ ವ್ಯಕ್ತಿ ಆಗಿದ್ದ. ಪ್ರತಿಯೊಬ್ಬರ ಮೊಗದಲ್ಲಿ ನಗು ತರಿಸುವ ವ್ಯಕ್ತಿ ಅಂಚೆಯಣ್ಣನಾಗಿದ್ದರು. ಇಂದು ಕಾಲ ಬದಲಾಗಿದೆ, ವ್ಯವಸ್ಥೆಯೂ ಬದಲಾಗಿದೆ. ಆದರೆ ನಮ್ಮ ಅಂಚೆಯಣ್ಣಂದಿರ ಕಾಯಕದಲ್ಲಿ ಮಾತ್ರ ಅದೇ ಅಂದಿನ ಹುರುಪಿದೆ, ಹುಮ್ಮಸ್ಸಿದೆ. ಮೊಬೈಲ್ ಎಂಬ ಮಾಂತ್ರಿಕ ಬಂದು ಸಂಬಂಧಗಳೇ ಹಳಸುತ್ತಿರುವ ಈ ಸಂದರ್ಭದಲ್ಲಿ ಬಾಲ್ಯದ ನೆನಪಾಗಲು ಕಾರಣ ಇಂದು ವಿಶ್ವ ಅಂಚೆ ದಿನ. ಆ ದಿನಗಳನ್ನು ನೆನಪಿಸುತ್ತಾ ನಮ್ಮ ಪ್ರೀತಿಯ ದಿ. ಪೊಸ್ಟ್ ಮ್ಯಾನ್ ರಾಮಣ್ಣ ಅವರನ್ನು ಸ್ಮರಿಸುತ್ತಾ ನಿಮಗೆಲ್ಲರಿಗೂ ವಿಶ್ವ ಅಂಚೆ ದಿನದ ಶುಭಾಶಯಗಳು.
– ಧನಂಜಯ ಬಳ್ಳಡ್ಕ