ಇಲಾಖೆಗಳಲ್ಲಿನ ಅನುದಾನಗಳ ಸದ್ಬಳಕೆಗೆ ಇ.ಒ. ಸೂಚನೆ
ತಾಲೂಕಿನ ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಳು ಆಗದೇ ಬಾಕಿ ಇರುವ ಅನುದಾನಗಳನ್ನು ತ್ವರಿತಗತಿಯಲ್ಲಿ ಕಾಮಗಾರಿಗಳಿಗೆ ಆರಂಭಿಸಿ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಎನ್. ಭವಾನಿಶಂಕರ್ ಹೇಳಿದರು.
ಸುಳ್ಯ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಿನ ಅಭಿವೃದ್ದಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಗಳಿಗೆ ಸೂಚಿಸಿದರು. ಕಾಮಗಾರಿಗೆ ಬರುವಂತಹ ಅನುದಾನಗಳು ಲಾಪ್ಸ್ ಆಗಬಾರದು. ಈ ಕಾರಣಕ್ಕಾಗಿ ತಾಲೂಕಿಗೆ ಬಂದಿರುವ ಕಾಮಗಾರಿಗಳ ಅನುದಾನಗಳು ಸಮರ್ಪಕವಾಗಿ ಎಲ್ಲಾ ಇಲಾಖೆಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾರ್ಯನಿರ್ವಾಹಣಾಧಿಕಾರಿ ಹೇಳಿದರು.
ನೆರೆಹಾವಳಿಯಲ್ಲಿ ಹಾನಿಗೀಡಾದ ಕುಟುಂಬಗಳಿಗೆ ಕೊಲ್ಲಮೊಗ್ರ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಶ್ವತ ಪರಿಹಾರ ಒದಗಿಸಲು ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಇದೆ. ಸರಕಾರಿ ಜಾಗ ಇರುವಲ್ಲಿ ಸ್ಥಳ ಗುರುತು ಮಾಡಿಕೊಡಿ ಎಂದು ಎನ್. ಭವಾನಿಶಂಕರ್ ಹೇಳಿದರು. ನ. ೩೦ರ ಒಳಗೆ ಸರಕಾರಿ ಜಾಗ ಗುರುತಿಸುವ ಪ್ರಕೀಯೆ ಆಗಬೇಕು ಎಂದು ತಾ.ಪಂ ಅಧ್ಯಕ್ಷರು ಸೂಚಿಸಿದರು. ಸುಳ್ಯ ಅಂಬೇಡ್ಕರ್ ಭವನಕ್ಕೆ ಮಂಜೂರುಗೊಂಡ ೮೫ಸೆಂಟ್ಸ್ ಜಮೀನಿನ ಮೇಲೆ ಖಾಸಾಗಿಯವರು ನ್ಯಾಯಲಯದಲ್ಲಿ ದಾವೆ ಹೂಡಿದ್ದಾರೆ. ಇದರ ಬಗ್ಗೆ ಕಂದಾಯ ಇಲಾಖೆಗೆ ಸಂಪೂರ್ಣ ಅಧಿಕಾರ ಇದೆ. ಸಮಾಜ ಕಲ್ಯಾಣ ಇಲಾಖೆಗೆ ಕೂಡ ಸರಿಯಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಬೇಕು ಎಂದು ಕಾರ್ಯನಿರ್ವಾಹಣಾಧಿಕಾರಿ ಹೇಳಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿ ವಿದ್ಯುತ್ ಸೌಲಭ್ಯಗಳು ಇಲ್ಲದ ಮನೆಗಳ ವಿವರಗಳನ್ನು ಮೆಸ್ಕಾಂ ಇಲಖೆಗೆ ಸಲ್ಲಿಸುವಂತೆ ಗ್ರಾ.ಪಂ ಪಿಡಿಒಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ತಾಲೂಕಿನಲ್ಲಿ ಸುಮಾರು ೨೨೪ ವಿದ್ಯುತ್ ಸಂಪರ್ಕ ಇಲ್ಲದ ಕುಟುಂಬಗಳು ಇವೆ ಎಂದು ಕಾರ್ಯನಿರ್ವಾಹಣಾಧಿಕಾರಿ ಹೇಳಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಎ.ಇ ಮನೆ ನಂಬರ್ ಮತ್ತು ಇತರ ದಾಖಲೆಗಳು ಹಾಗೂ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಬಾಕಿಯಾಗಿದೆ ಎಂದು ಹೇಳಿದರು. ತಾಲೂಕಿನಲ್ಲಿರುವ ವಿದ್ಯುತ್ ಎಚ್.ಟಿ ಲೈನ್ಗಳು ಅಪಾಯದಲ್ಲಿದೆ. ಇದರಿಂದ ಅವಘಡಗಳು ಸಂಭಸಿದ ಉದಾಹರಣೆಗಳಿವೆ. ಈ ಸಂದರ್ಭದಲ್ಲಿ ಎಚ್.ಟಿ ಲೈನ್ಗಳ ಪರಿಶೀಲನೆ ಮಾಡಬೇಕಾದ ಅಗತ್ಯ ಇದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವೀ ಕಾಂಚೋಡು ಹೇಳಿದರು.
ತಾಲೂಕಿನ ಪಶು ಆಸ್ಪತ್ರೆಯಲ್ಲಿ ಸಿಬ್ಬಂಧಿಗಳ ಕೊರತೆಯಿಂದ ಕೆಲಸಗಳು ತಡವಾಗುತ್ತಿದೆ. ೧೧,೫೨೦ ದನಗಳಿಗೆ ಚಿಕಿತ್ಸೆ ನೀಡುವ ಒಟ್ಟಿಗೆ ಕಾಲುಬಾಯಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುತ್ತಿದೆ. ಎಂದು ಇಲಾಖೆಯ ಸಹಾಯಕ ನಿರ್ದೇಶಕ ನಿತೀನ್ ಪ್ರಭು ಹೇಳಿದರು.
ಶಿಕ್ಷಣ ಇಲಾಖೆ ಈ ಬಾರಿ ತೆರೆಯುವುದು ಅಸಾಧ್ಯ ಈ ನಿಟ್ಟಿನಲ್ಲಿ ಖಾಸಾಗಿ ಶಾಲೆಗಳಲ್ಲಿ ಅನ್ಲೈನ್ ತರಗತಿಗಳು ನಡೆಯುತ್ತಿದೆ. ಅಲ್ಲದೇ ಚಂದನವಾಹಿನಿಯಲ್ಲಿ ಬೆಳಗ್ಗಿನ ಸಮಯದಲ್ಲಿ ಉತ್ತಮವಾಗಿ ಪ್ರಸಾರವಾಗುತ್ತಿದೆ ಎಂದು ಶಿಕ್ಷಣಾಧಿಕಾರಿ ಮಹಾದೇವ ಹೇಳಿದರು. ಈ ಸಮಯದಲ್ಲಿ ಮೆಸ್ಕಾಂ ಇಲಾಖೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಳಿದರು. ಗ್ರಾಮಗಳಲ್ಲಿ ನಡೆಯುವ ಮಕ್ಕಳ ಸ್ನೇಹಿ ಗ್ರಾ.ಪಂ ಅಭಿಯಾನ ಮತ್ತು ಓದುವ ಬೆಳಕು ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆ ಸಹಕಾರ ನೀಡಬೇಕು ಎಂದು ಕಾರ್ಯನಿರ್ವಹಣಾಧಿಕಾರಿ ಹೇಳಿದರು.
ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವೀ ಕಾಂಚೋಡು, ಕಾರ್ಯನಿರ್ವಹಣಾಧಿಕಾರಿ ಎನ್. ಭವಾನಿಶಂಕರ್. ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.