ಕಾರ್ಮಿಕ ವಿರೋಧಿ ನೀತಿ ಹಿಂಪಡೆಯಲು ಕಾರ್ಮಿಕರ ಪ್ರತಿಭಟನೆ
ಜಾಯಿಂಟ್ ಕಮಿಟಿ ಆಫ್ ಟ್ರೇಡ್ ಯೂನಿಯನ್ ಸುಳ್ಯ ಇದರ ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಲು ಮತ್ತು ತಡೆ ಹಿಡಿದಿರುವ ಕಾರ್ಮಿಕರ ಸವಲತ್ತುಗಳನ್ನು ಶೀಘ್ರ ಒದಗಿಸಲು ಒತ್ತಾಯಿಸಿ ಪ್ರತಿಭಟನೆ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಇಂದು ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಕೆ.ಪಿ.ಜಾನಿ ಮಾತನಾಡಿ, ಸಂವಿಧಾನದ ಈ ನಾಡಿನಲ್ಲಿ ಸಂವಿಧಾನವನ್ನು ಬಿಟ್ಟು ನಡೆದರೆ ಮುಂದೆ ಈ ದೇಶಕ್ಕೆ ಅಪಾಯವಿದೆ. ಈಗಿನ ಸರಕಾರಗಳು ಅದೇ ದಾರಿಯಲ್ಲಿ ನಡೆಯುತ್ತಿದೆ. ಹೊಸ ಹೊಸ ಕಾನೂನು ತಂದು ರೈತಾಪಿ ವರ್ಗ, ಕಾರ್ಮಿಕ ವರ್ಗವನ್ನು ತೊಂದರೆಗೀಡಾಗುವಂತೆ ಮಾಡುತ್ತಿದೆ. ಈಗ ಇರುವ ಸರಕಾರಗಳು ಅಧಿಕಾರಕ್ಕೆ ಬಂದಾಗ ನೀಡಿದ ಭರವಸೆಯನ್ನು ಕಂಡಾಗ ನಮ್ಮೆಲ್ಲರ ಬದುಕು ಹಸನಾಗಬಲ್ಲುದು ಎಂದು ತಿಳಿದೆವು. ಆದರೆ ಇಂದು ಸರಕಾರಗಳು ಮಾಡುತ್ತಿರುವುದೇನು? ಎಂದು ಅವರು ಪ್ರಶ್ನಿಸಿದರು.
ಭೂ ಸುಧಾರಣೆ ಮಸೂದೆಯ ಉದ್ದೇಶ ಏನು? ಇಂದು ಅದಕ್ಕೆ ತಿದ್ದುಪಡಿ ತಂದು ಕೃಷಿಕರಲ್ಲದವರಿಗೂ ಭೂಮಿ ಪಡೆದುಕೊಳ್ಳುವ ಅವಕಾಶ. ನಿಜವಾದ ಕೃಷಿಕ ತನ್ನ ಭೂಮಿಯನ್ನು ಕಳೆದುಕೊಳ್ಳುವ ಸ್ಥಿತಿ ಇದೆ. ವಿದ್ಯುತ್ ಖಾಸಗೀಕರಣ ಮಾಡಿ ರೈತರಿಗೆ ಉಚಿತವಾಗಿ ಸಿಗುವ ವಿದ್ಯುತ್ ಸಿಗದಂತೆ ಮಾಡಲಾಗುತ್ತಿದೆ. ಕಾರ್ಮಿಕ ವರ್ಗ ಇದುವರೆಗೆ ೮ ಗಂಟೆ ದುಡಿಯುವ ಕಾನೂನು ತಿದ್ದುಪಡಿ ಮಾಡಿ ೧೨ ಗಂಟೆ ದುಡಿಯುವಂತೆ ಮಾಡಿದ್ದಾರೆ. ಈ ಸರಕಾರದ ಉದ್ದೇಶ ಏನು? ಕಾರ್ಮಿಕರನ್ನು ಜೀತದಾಳುಗಳಾನ್ನಾಗಿಸುವುದೇ? ಎಂದು ಜಾನಿ ಪ್ರಶ್ನಿಸಿದರು.
ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದು ತಪ್ಪಾದರೆ ಭೂ ಸುಧಾರಣಾ ವರದಿ, ಕಾರ್ಮಿಕರ ವರದಿ ಜಾರಿ ಯಾಕೆ ತಪ್ಪಲ್ಲ. ಇದನ್ನು ಯಾಕೆ ವಿರೋಧಿಸುವುದಿಲ್ಲ ? ಇದನ್ನು ವಿರೋಧಿಸಿ ಕಾರ್ಮಿಕರನ್ನು ರೈತರನ್ನು ರಕ್ಷಿಸಿ, ರಾಜಕೀಯ ಬಿಟ್ಟು ನಮ್ಮ ಬೆಂಬಲಕ್ಕೆ ನಿಲ್ಲಿ ಎಂದು ಜಾನಿ ಹೇಳಿದರು.
ಕಾರ್ಮಿಕ ಮುಖಂಡ ಕೆ.ಪಿ. ರಾಬರ್ಟ್ ಡಿಸೋಜ ಮಾತನಾಡಿ, ಆಂತರಿಕ ತುರ್ತು ಪರಿಸ್ಥಿತಿ ಯನ್ನು ಕೇಂದ್ರ ಸರಕಾರ ತಂದು ದುಡಿಯುವ ವರ್ಗದವರಿಗೆ ಅನ್ಯಾಯ ಮಾಡುತ್ತಿದೆ. ಅಧಿಕಾರಕ್ಕೆ ಬಂದಾಗ ಉದ್ಯೋಗ ಸೃಷ್ಟಿಯ ಭರವಸೆ ನೀಡಿತ್ತು. ಆದರೆ ನೀಡಿದ ಭರವಸೆಯನ್ನು ಈಡೇರಿಸದೆ, ಕೆಲಸ ಇದ್ದವರಿಗೂ ಸಂಬಳ ನೀಡದೇ ಸುಮ್ಮನೇ ಕುಳಿತಿದೆ. ಹೊಸ ಹೊಸ ಕಾನೂನು ತಂದು ದುಡಿಯುವ ವರ್ಗವನ್ನು ದುರ್ಭಲಗೊಳಿಸಿ ಬದುಕಲು ಸಾಧ್ಯವಿಲ್ಲದಂತೆ ಮಾಡಿದೆ. ಬೀಡಿ ಕಾರ್ಮಿಕರು, ಬಿಸಿಯೂಟ ಕಾರ್ಮಿಕರು ಹೀಗೆ ಹಲವು ವರ್ಗದವರು ಕಡಿಮೆ ಸಂಬಳಕ್ಕೆ ದುಡಿಯುವ ಪರಿಸ್ಥಿತಿ. ಇವರಿಗೆಲ್ಲ ಯಾಕೆ ಬದುಕುವ ರೀತಿಯ ಸಂಬಳ ನೀಡುತ್ತಿಲ್ಲ ? ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜ್ ಹೆಚ್.ಕೆ., ಪ್ರಧಾನ ಕಾರ್ಯದರ್ಶಿ ಬಿಜು ಆಗಸ್ಟಿನ್, ಕೋಶಾಧಿಕಾರಿ ವಿಶ್ವನಾಥ್ ನೆಲ್ಲಿಬಂಗಾರಡ್ಕ, ಶ್ರೀಧರ್ ಕೆ.ಎ., ಪ್ರಸಾದ್ ಕಲ್ಲುಗುಂಡಿ, ಅಬೂಬಕ್ಕರ್ ಜಟ್ಟಿಪಳ್ಳ, ಉಮೇಶ್ ಬೂಡು, ವೆಂಕಟೇಶ್, ಶಿವರಾಮ ಗೌಡ ಕೇರ್ಪಳ, ಕೃಷ್ಣ ಮೇಸ್ತ್ರಿ ಕೇರ್ಪಳ, ಆನಂದ ಗೌಡ ನಾರ್ಣಕಜೆ, ರಿಕ್ಷಾ ಯೂನಿಯನ್ನ ಮಹಮ್ಮದ್, ಅಬೂಬಕ್ಕರ್, ಜೋಮನ್ ಜಯನಗರ, ಮಂಜುನಾಥ್ ಬಳ್ಳಾರಿ, ಅಶೋಕ್ ಎಡಮಲೆ ಮೊದಲಾದವರಿದ್ದರು.
ರೈತ ಸಂಘ ಬೆಂಬಲ
ಈ ಪ್ರತಿಭಟನೆಗೆ ರೈತ ಸಂಘ ಬೆಂಬಲ ನೀಡಿದ್ದು, ಸಂಘದ ಪದಾಧಿಕಾರಿಗಳಾದ ಲೋಲಜಾಕ್ಷ ಭೂತಕಲ್ಲು, ದಿವಾಕರ ಪೈ ಅರಂಬೂರು, ಸೆಬಾಸ್ಟಿಯನ್ ಮಡಪ್ಪಾಡಿ, ಮಂಜುನಾಥ್ ಮಡ್ತಿಲ ಮತ್ತಿತರರಿದ್ದರು.
ಬೀಡಿ ಕಾರ್ಮಿಕರು, ಬಿಸಿಯೂಟ ಕಾರ್ಮಿಕರು, ಕಟ್ಟಡ ಕಾರ್ಮಿಕರು, ರಿಕ್ಷಾ ಯೂನಿಯನ್, ಬ್ಯಾಂಕ್ ಕಾರ್ಮಿಕರು ಮೊದಲಾದವರಿದ್ದರು.