ಅಂದೊಂದು ಕಾಲವಿತ್ತು… ನಾವು ಬೆಳಗ್ಗೆ ಶಾಲೆಗೆ ಹೋಗಿ ಸಂಜೆ ಪುನಃ ಮನೆಗೆ ಬರುವಾಗ ಕೈಯಲ್ಲಿ ಕೋಲು ಹಿಡಿದುಕೊಂಡು ಕಲ್ಲು ಬಿಸಾಡುತ್ತ ಚಾಕಲೇಟ್ ತಿನ್ನುತ್ತಾ ಮಾತನಾಡುತ್ತ ನಡೆದುಕೊಂಡು ಬರುವಾಗ ಕಾಲೋನಿ ತಲುಪುತ್ತಿದ್ದಂತೆ ಜಾನುವಾರುಗಳು ಸಾಲು ಸಾಲಾಗಿ ದಾರಿಯಲ್ಲಿ ಕಂಡು ಬಂದಾಗ ನಾವೆಲ್ಲ ಖುಷಿ ಇಂದ ಜಾನುವಾರು ಜಾತ್ರೆ ಪ್ರಾರಂಭ ಆಯಿತು ಅನ್ನುವ ಖುಷಿಯಲ್ಲಿ ಮೈಮರೆತು ದಾರಿ ಬಿಟ್ಟು ಮಜಲುಗಳಿಗೆ ತೆರಳಿ ಗುಂಪಾಗಿ ಇರುತ್ತಿದ್ದ ಜಾನುವಾರುಗಳು,
ಬೈ ಹುಲ್ಲು, ಸೆಗಣಿ, ಗೋಮೂತ್ರದ ಮದ್ಯೆ ಕುಣಿದು ಕುಪ್ಪಳಿಸಿ ಆಡುತ್ತಾ ಮನೆಗೆ ತಲುಪುವಾಗ ಆರು ಗಂಟೆ ಆಗಿ ಅಮ್ಮನ ಕೈಯಲ್ಲಿದ್ದ ಪುಳಿತ್ತ ಅಡರಿನಲ್ಲಿ ಎರಡು ಪೆಟ್ಟು ತಿಂದರು ಕೂಡ ಆ ಸಮಯದಲ್ಲಿದ್ದ ಖುಷಿ, ಸಂಸ್ಕೃತಿ, ಆಚರಣೆಗಳು, ಸಂಪ್ರದಾಯ, ಜಾನುವಾರು ಜಾತ್ರೆ ಅನ್ನುವುದೇ ಇನ್ನು ಮರುಕಳಿಸಲು ಕಷ್ಟ ಸಾಧ್ಯ ಅನ್ನುವುದೇ ನೋವಿನ ಸಂಗತಿ…
ಹಿಂದಿನ ಕಾಲದಿಂದಲೂ ಜಾನುವಾರುಗಳನ್ನು ದೂರದ ಊರುಗಳಿಂದ ಕಾಲ್ನಡಿಗೆಯ ಮೂಲಕ ಕುಲ್ಕುಂದದ ಈ ಭೂಮಿಗೆ ತಂದು ಕುಲ್ಕುಂದದ ಮಜಲುಗಳಲ್ಲಿ ಜಾನುವಾರುಗಳನ್ನು ಬಿಟ್ಟು ಈ ಭೂಮಿಯನ್ನು ಶುದ್ಧ ಮಾಡಿಸುವ ಪುಣ್ಯದ ಕೆಲಸವನ್ನು ಮಾಡಲಾಗುತ್ತಿತ್ತು.. ಕಾರ್ತಿಕ ಶುದ್ಧ ಹುಣ್ಣಿಮೆಯಂದು ಗೇಟ್ವಾರ್ ಮೂಲಕ ಆರಂಭ ಆಗುವ ಈ ಜಾನುವಾರು ಜಾತ್ರೆ ಮುಂದಿನ ಅಮಾವಾಸ್ಯೆ ವರೆಗೆ ನಡೆದು ತಾವು ತಂದಿದ್ದ ಜಾನುವಾರುಗಳನ್ನು ರೈತರಿಗೆ, ಕೃಷಿಕರಿಗೆ ಮಾರಾಟ ಮಾಡಿ ನಂತರ ತಮ್ಮ ತಮ್ಮ ಊರಿಗೆ ತೆರಳುತ್ತಿದ್ದರು…
ಆ ಸಮಯದಲ್ಲಿ ಕುಲ್ಕುಂದ ಮಜಲುಗಳಲ್ಲಿ ಸುಡು ಬಿಸಿಲಿನ ನಡುವೆ ಜಾನುವಾರುಗಳನ್ನು ಮಾರಾಟ ಮಾಡುವಾಗ ಅವರ ನಡುವೆ ಆಗುವ ಸಂಭಾಷಣೆ, ಚರ್ಚೆಗಳು, ನಂತರ ಇಬ್ಬರು ಕೈ ಕೊಟ್ಟು ಬಟ್ಟೆ ಅಥವಾ ಬೈ ಹುಲ್ಲಿನ ಮೂಲಕ ಕೈಗಳನ್ನು ಮುಚ್ಚಿ ಬೆರಳುಗಳ ಮೂಲಕ ಮಾಡುವ ಸನ್ನೆಗಳು ಬಲು ರೋಚಕ…. ಈ ನಡುವೆ ಬೀಡಾ, ಚಹಾ, ಹೋಟೆಲ್, ಚುರುಮುರಿ, ಮಂಡಕ್ಕಿ, ಎಳನೀರು, ಐಸ್ ಕ್ಯಾಂಡಿ, ಅಲ್ಲದೆ ಪಾತ್ರೆಗಳು, ಸ್ವೆಟರ್, ಕಂಬಳಿ ಯ ವ್ಯಾಪಾರಿಗಳು ಕೂಡ ಕೊಂಚ ಬ್ಯುಸಿಯಾಗಿರುತ್ತಿದ್ದರು… ಎಷ್ಟೇ ಹೇಳಿದರು ಜಾನುವಾರು ಜಾತ್ರೆ ಇತಿಹಾಸದ ಪುಟ ಸೇರಿ ಆಗಿದೆ. ಅದೇನೆ ಇರಲಿ ಇಂದು ಜಾನುವಾರು ಜಾತ್ರೆ ಅನ್ನುವುದು ನೆನಪು ಮಾತ್ರ… ಯಾವುದೋ ಕೆಲ ಕಾರಣಗಳಿಗಾಗಿ ಜಾನುವಾರುಗಳಿಗೆ ಆಗುತ್ತಿದ್ದ ತೊಂದರೆಗಾಗಿ ಜಾನುವಾರು ಜಾತ್ರೆ ನಿಲ್ಲಿಸಲಾಯಿತು. ಬದಲಾಗಿ ಈಗ ಪ್ರತೀ ವರ್ಷ ಸಾಂಕೇತಿಕವಾಗಿ ಗೋವಿನ ಪೂಜೆಯ ಮೂಲಕ ಈ ಭೂಮಿಯನ್ನು ಶುದ್ಧ ಮಾಡುವ ಪುಣ್ಯದ ಕಾರ್ಯ ನಡೆಯುತ್ತಿದೆ…
ಮುಂದಿನ ದಿನಗಳಲ್ಲಿ ಎಲ್ಲರು ಒಂದಾಗಿ, ಸಂಘಟಿತರಾಗಿ ಗೋವಿನ ಪೂಜೆ ಆದರೂ ವಿಜೃಂಭಣೆಯಿಂದ ನಡೆಯುವಂತೆ ಆಗಲಿ ಅನ್ನುವುದೇ ನಮ್ಮೆಲ್ಲರ ಆಶಯ…
ಜೈ ಗೋಮಾತೆ 🐄
✍️ – ರಿಕೇಶ್ ಕುಲ್ಕುಂದ