ಪತ್ರಿಕಾ ಹೇಳಿಕೆಯಲ್ಲಿ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪ
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ಈ ಬಾರಿಯ ಷಷ್ಠಿ ಮಹೋತ್ಸವ ಬ್ರಹ್ಮರಥೋತ್ಸವ ಸೇವೆಯನ್ನು ನೆರವೇರಿಸಲು ಭಕ್ತರಿಗೆ ಅವಕಾಶವನ್ನು ಕಲ್ಪಿಸುವಂತೆ ಇಂದು ದೇವಸ್ಥಾನಕ್ಕೆ ಮನವಿ ಅರ್ಪಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮನವಿದಾರರು
ಬ್ರಹ್ಮರಥ ಸೇವೆಯನ್ನು ರದ್ದುಪಡಿಸಿರುವ ನಿರ್ಧಾರಕ್ಕೆ ಖಂಡನೆ ವ್ಯಕ್ತಪಡಿಸಿದ್ದು, ಎಷ್ಟೋ ವರ್ಷಗಳಿಂದ ದೇವರಿಗೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತ ಭಕ್ತರಿಗೆ ಸೇವೆಯನ್ನು ನಿರಾಕರಿಸಿದಲ್ಲಿ ಕ್ಷೇತ್ರದ ಧಾರ್ಮಿಕ ಮಹತ್ವ ಹಾಗೂ ಪ್ರಸಿದ್ಧಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದಂತಾಗುತ್ತದೆ ಆರೋಪಿಸಿದ್ದಾರೆ.
ಕೇವಲ ಗಣ್ಯರಿಗೆ, ಪ್ರಮುಖರಿಗೆ ಮಾತ್ರ ಪಾಸುಗಳನ್ನು ಒದಗಿಸುವುದರ ಜತೆಗೆ ಸುಮಾರು ೧೦೦ ರಷ್ಟು ನಡೆಯಬಹುದಾದ ಬ್ರಹ್ಮರಥ ಸೇವೆಗಳಿಗೂ ಕೋವಿಡ್ ನಿಯಮಗಳಂತೆ ಆರೋಗ್ಯ ಪ್ರಮಾಣ ಪತ್ರವನ್ನು ಪಡೆದುಕೊಂಡು ತಲಾ ೧ ರಂತೆ ಪಾಸುಗಳನ್ನು ನೀಡುವಂತೆ ಹಾಗೂ ಸೇವೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಸೇವೆಯನ್ನು ರದ್ದುಪಡಿಸಿರುವ ನಿರ್ಧಾರವನ್ನು ಸಾರ್ವಜನಿಕರ ಹಾಗೂ ಭಕ್ತಾದಿಗಳ ಅಭಿಪ್ರಾಯನ್ನು ಪಡೆಯದೇ ಏಕಪಕ್ಷೀಯವಾಗಿ ಕೈಗೊಳ್ಳಲಾಗಿದ್ದು ಇದರಿಂದಾಗಿ ದೇವಸ್ಥಾನಕ್ಕೆ ೨೫ ಲಕ್ಷ ರೂಪಾಯಿಗಳ ನಷ್ಟ ಉಂಟಾಗಲಿದೆ ಎಂದು ತಿಳಿಸಿದ್ದಾರೆ .
ಇದಲ್ಲದೆ ದೇವಳದ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಯೋಜನೆಗಳು ಕುಂಟುತ್ತಾ ಸಾಗುತಿದ್ದು ಸಾರ್ವಜನಿಕರಿಗೆ, ಸ್ಥಳೀಯರಿಗೆ ಹಾಗೂ ಯಾತ್ರಿಕರಿಗೆ ಬಹಳಷ್ಟು ತೊಂದರೆಗಳಾಗುತ್ತಿವೆ. ರಸ್ತೆ ಅಗಲೀಕರಣ ಮತ್ತು ಕಾಂಕ್ರಿಟೀಕರಣ ಕಾಮಗಾರಿಗಳು ಮೂಲ ಯೋಜನೆ, ನಕಾಶೆ ಹಾಗೂ ಅಂದಾಜುಪಟ್ಟಿಗಳಿಗಿಂತ ಭಿನ್ನವಾಗಿ ನಡೆಯುತ್ತಿದೆ. ರಸ್ತೆಯ ಅಗಲ, ಫೂಟ್ ಪಾತ್ ಹಾಗೂ ಚರಂಡಿ ಮತ್ತು ಭೂಸ್ವಾಧೀನ ಮೂಲಕ ವಶಪಡಿಸಿಕೊಂಡ ಸ್ಥಳಗಳ ಅಳತೆಗಳಲ್ಲಿ ಬಹಳ ವ್ಯತ್ಯಾಸಗಳಾಗಿದ್ದು ಈ ಬಗ್ಗೆ ತನಿಖೆ ನಡೆಸಬೇಕಾಗಿದೆ. ರಸ್ತೆ ಕಾಮಗಾರಿಯ ಅವಧಿಯು ಪೂರ್ಣಗೊಂಡಿದ್ದರೂ ಕಾಮಗಾರಿಗಳು ಕೊನೆಗೊಂಡಿಲ್ಲ. ಸರಿಯಾದ ಪೂರ್ವಸಿದ್ಧತೆಗಳಿಲ್ಲದೇ ಕಾಮಗಾರಿ ನಡೆಸಿ ಹಲವಾರು ಕಾಮಗಾರಿಗಳು ಅಪೂರ್ಣವಾಗಿ ಸಾರ್ವಜನಿಕರಿಗೆ ನಿರಂತರ ತೊಂದರೆಗಳಾಗುತ್ತವೆ ಎಂದವರು ತಿಳಿಸಿದ್ದಾರೆ.
ಸುಮಾರು ೩ ವರ್ಷಗಳ ಹಿಂದೆಯೇ ನಿರ್ಮಾಣವಾದ ೧೩ ಕೋಟಿ ವೆಚ್ಚದ ಒಳಚರಂಡಿ ಯೋಜನೆಯ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿ ಅಲ್ಲಲ್ಲಿ ಶಿಥಿಲಗೊಂಡಿದ್ದು, ನಿರ್ವಹಣೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ರಸ್ತೆ ಅಗಲೀಕರಣ ಕಾಮಗಾರಿ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಗಳ ಕಾರಣ ಅಲ್ಲಲ್ಲಿ ಒಳಚರಂಡಿಯ ಪೈಪು ಲೈನ್ಗಳು ಒಡೆದು ಹೋಗಿ ಕಾಂಕ್ರಿಟ್ ತ್ಯಾಜ್ಯದ ಹೂಳುಗಳು ತುಂಬಿ ಕೊಳಚೆ ನೀರು ಅಲ್ಲಲ್ಲಿ ಹರಿದು ಹೋಗಿ ದುರ್ನಾತ ಬೀರುತಿದ್ದು ಸಾರ್ವಜನಿಕರಿಗೆ, ಯಾತ್ರಿಕರಿಗೆ ಸಂಚರಿಸಲು ಅಸಹ್ಯಕರ ವಾತಾವರಣ ಸೃಷ್ಟಿಯಾಗಿದೆ.
ದೇವಳಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ಯಾತ್ರಿಕರಿಗೆ ತಮ್ಮ ವಾಹನಗಳನ್ನು ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಿರದಿದ್ದರೂ ಪಾರ್ಕಿಂಗ್ ಮಾಡಲು ದುಬಾರಿ ಶುಲ್ಕ ವಸೂಲಿಮಾಡುವ ಟೆಂಡರ್ ನಡೆಸಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಸಾರ್ವಜನಿಕರ ವಿರೋಧವಿದ್ದು ಇದನ್ನು ತಕ್ಷಣ ರದ್ದು ಪಡಿಸಬೇಕಿದೆ. ಶ್ರೀ ಕ್ಷೇತ್ರವು ಧಾರ್ಮಿಕ ಕ್ಷೇತ್ರವಾಗಿದ್ದು ಪ್ರವಾಸಿ ತಾಣವಲ್ಲ . ನೂರಾರು ಕೋಟಿ ಭಕ್ತರ ಹರಕೆಯ ಆದಾಯವಿರುವ ಹಿಂದೂ ಧಾರ್ಮಿಕದತ್ತಿ ಇಲಾಖೆಗೆ ಸೇರಿದ ಈ ದೇವಸ್ಥಾನದಿಂದ ಯಾತ್ರಿಕರಿಗೆ ಆದಷ್ಟು ಉಚಿತ ಸೌಲಭ್ಯಗಳನ್ನು ನೀಡಬೇಕಿದೆ. ಕಳೆದ ನೂರಾರು ವರ್ಷಗಳಿಂದ ಇದ್ದ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ರದ್ದು ಮಾಡಿ ಪ್ರವಾಸಿ ತಾಣಗಳಲ್ಲಿರುವಂತೆ ದುಬಾರಿ ಶುಲ್ಕ ವಿಧಿಸಿ ಭಕ್ತರನ್ನು ಶೋಷಣೆ ಮಾಡುವುದು ಸರಿಯಲ್ಲ.
ದೇವಸ್ಥಾನದಲ್ಲಿ ಹಲವಾರು ಟೆಂಡರ್ ಪ್ರಕ್ರಿಯೆಗಳು ನಿಗದಿತ ಅವಧಿಯೊಳಗಾಗಿ ನಡೆಯುತ್ತಿಲ್ಲ. ದೇವಸ್ಥಾನಕ್ಕೆ ಸುಮಾರು ೧೦೦ ಕ್ಕೂ ಅಧಿಕ ಭದ್ರತಾ ಸಿಬಂಧಿಗಳನ್ನು ಒದಗಿಸುವ ಟೆಂಡರ್ ಪ್ರಕ್ರಿಯೆ ಕಳೆದ ೩ವರ್ಷಗಳಿಂದ ನಡೆದಿಲ್ಲ. ದೇವಳದ ನೂತನ ವಸತಿಗೃಹಗಳಿಗೆ ಹಾಗೂ ಇನ್ನಿತರ ನಿರ್ವಹಣೆಗಾಗಿ ನೂರಾರು ನೌಕರರ ಅವಶ್ಯಕತೆಯಿದ್ದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದರಿಂದ ನೂರಾರು ಮಂದಿ ಸ್ಥಳೀಯ ಉದ್ಯೋಗಕಾಂಕ್ಷಿ ಯುವಕ ಯುವತಿಯರಿಗೆ ಅವಕಾಶವಿಲ್ಲದಂತಾಗಿದೆ. ನೂತನ ವಸತಿಗೃಹ ಉದ್ಘಾಟನೆಗೊಂಡಿದ್ದರೂ ಯಾತ್ರಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ ದೇವಳದಲ್ಲಿ ಹತ್ತಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ನೌಕರರಿಗೆ ಸರಿಯಾದ ವೇತನ ಶ್ರೇಣಿ ಹಾಗೂ ಸರಕಾರಿ ಸೌಲಭ್ಯಗಳು ಸಿಗದೆ ಶೋಷಣೆಗೆ ಒಳಗಾಗಿದ್ದಾರೆ.
ದೇವಳಕ್ಕೆ ವಾರ್ಷಿಕ ಸುಮಾರು 2 ಕೋಟಿ ರೂಪಾಯಿಗಳಿಗೂ ಅಧಿಕ ಆದಾಯವಿದ್ದ ಹಣ್ಣು ಕಾಯಿ ಹಾಗೂ ಚಿನ್ನ ಬೆಳ್ಳಿ ಹರಕೆ ವಸ್ತುಗಳ ಅಂಗಡಿಗಳು ವಿವಿಧ ಬಾಡಿಗೆ ವಂಚನೆ ಪ್ರಕರಣಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಕಾರಣ ಮುಚ್ಚಲ್ಪಟ್ಟಿವೆ. ಯಾತ್ರಿಕರಿಗೆ ಹಣ್ಣುಕಾಯಿ , ಪೂಜಾ ಸಾಮಾಗ್ರಿ ಹಾಗೂ ಚಿನ್ನ ಬೆಳ್ಳಿ ಹರಕೆ ವಸ್ತುಗಳ ಸೌಲಭ್ಯ ಇಲ್ಲದಾಗಿದೆ ಹಾಗೂ ಸರಕಾರಕ್ಕೆ ವಾರ್ಷಿಕ ಸುಮಾರು ೨ ಕೋಟಿ ನಷ್ಟ ಉಂಟಾಗುತ್ತಿದೆ. ಈ ಅಂಗಡಿಗಳನ್ನು ತಕ್ಷಣವೇ ಪುನರಾರಂಭಿಸಬೇಕು ಹಾಗೂ ಬಾಕಿ ವಸೂಲಿ ಪ್ರಕರಣಗಳ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.
ಮೇಲಿನ ಎಲ್ಲಾ ಬೇಡಿಕೆಗಳ ಬಗ್ಗೆ ತಕ್ಷಣ ಕ್ರಮ ಕೈಗೊಂಡು ವ್ಯವಸ್ಥೆಗಳನ್ನು ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಭಕ್ತಾದಿಗಳು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಹುದೆಂದು ಈ ಮೂಲಕ ತಿಳಿಯಪಡಿಸುತ್ತೇವೆ.
ವಾರ್ಷಿಕ ಸುಮಾರು ನೂರು ಕೋಟಿ ರೂಪಾಯಿಗಳ ಆದಾಯ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ವ್ಯವಹಾರ ಹೊಂದಿರುವ ರಾಜ್ಯದಲ್ಲೇ ಮೊದಲನೆ ಸ್ಥಾನದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪೂರ್ಣ ಪ್ರಮಾಣದ ಆಡಳಿತ ವ್ಯವಸ್ಥಾಪಣಾ ಸಮಿತಿ ನೇಮಕ ಮಾಡದೆ ಕೇವಲ ಅಭಿವೃದ್ಧಿ ಸಮಿತಿ ರಚಿಸಿರುವುದು ಕಾನೂನು ಬಾಹಿರ ಹಾಗೂ ಸರಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಮಾಸ್ಟರ್ ಪ್ಲಾನ್ ಮೇಲ್ವಿಚಾರಣ ಸಮಿತಿಯ ಸಭೆಯು ಕಳೆದ ೧ ವರ್ಷದಿಂದ ನಡೆದಿಲ್ಲ. ಅಧಿಕಾರಿಗಳು ಸಾರ್ವಜನಿಕ ಭಕ್ತಾಧಿಗಳನ್ನು ನಿರ್ಲಕ್ಷಿಸಿ ಅಧಿಕಾರದ ದುರುಪಯೋಗ ಹಾಗೂ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ.
ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ .
ಈ ಬಗ್ಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ ಎಚ್ ಅವರಿಗೆ ಮನವಿ ಸಲ್ಲಿಸಲಾಗಿದ್ದು ಈ ಸಂದರ್ಭ
ಹರೀಶ್ ಇಂಜಾಡಿ, ರವೀಂದ್ರ ರುದ್ರಪಾದ, ಸುಬ್ರಹ್ಮಣ್ಯ ಭಟ್, ನವೀನ್ ಕುಮಾರ್ , ಬಾಲಕೃಷ್ಣ ಮರೀಲ್ , ಮಾಧವ ದೇವರಗದ್ದೆ, ಗೋಪಾಲ ಕೃಷ್ಣ ಭಟ್, ಶ್ರೀಮತಿ ಭಾರತಿ, ಸೌಮ್ಯ, ಶಿವರಾಮ ರೈ, ಕೃಷ್ಣ ಮೂರ್ತಿ ಭಟ್, ಪವನ್ ಎಂ.ಡಿ, ಶೋಭಿತ್, ಉಷಾ ಪ್ರಸನ್ನ, ಕವನ್ ರೈ, ಲೋಲಾಕ್ಷ, ಕಿಶೋರ್ ಅರಂಪಾಡಿ, ರತ್ನಕುಮಾರಿ, ಪದ್ಮಯ್ಯ ಗೌಡ ಜಾಡಿಮನೆ ಉಪಸ್ಥಿತರಿದ್ದರು.