” ವಿವೇಕಾನಂದರು ಯುವಜನತೆಗೆ ಪ್ರೇರಣೆಯಾಗಿದ್ದಾರೆ. ಯುವ ಮನಸ್ಸು ಉಲ್ಲಸಿತಗೊಂಡು ಸಮರ್ಥ ಮನಸ್ಕರಾಗಿ ಬೆಳೆದಾಗ ಯುವ ದಿನಾಚರಣೆಯು ಅರ್ಥಪೂರ್ಣವಾಗುವುದು. ಸಾಧನೆಯ ದಾರಿಯನ್ನು ಹುಡುಕಿ, ಸ್ವಸಾಮರ್ಥ್ಯದಿಂದ ಬೆಳೆಯಬೇಕು. ವಿವೇಕಾನಂದರ ಬದುಕಿನ ಸಂದೇಶಗಳು ಎಲ್ಲರಿಗೂ ದಾರಿದೀಪವಾಗಲಿ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.
ಅವರು ಜ.೧೨ ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ‘ಯುವ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಿಕ್ಷಕ ದೇವಿಪ್ರಸಾದ ಜಿ ಸಿ ಅವರು ಮಾತನಾಡಿ “ಯುವಕರ ಸ್ಫೂರ್ತಿ , ಚೈತನ್ಯ, ಪ್ರೇರಣಾ ಶಕ್ತಿಯಾದ ವಿವೇಕಾನಂದರು ವೀರಸನ್ಯಾಸಿ, ದೇಶಭಕ್ತ ಸಂತ. ನಮ್ಮ ನೆಲದ ಹಿಂದೂ ಸಂಸ್ಕೃತಿಯನ್ನು, ಆಧ್ಯಾತ್ಮಿಕ ಒಲವನ್ನು ವಿಶ್ವಕ್ಕೆ ಸಾರಿ ಭಾರತವನ್ನು ವಿಶ್ವ ಗುರುವೆನಿಸಿದರು. ಸದೃಢ, ರಾಮ ರಾಜ್ಯದ ಅಸ್ತಿತ್ವಕ್ಕೆ ಬುನಾದಿ ಹಾಕಿದವರು. ಅವರ ವಿಚಾರಧಾರೆಗಳು ಯುವಜನತೆಗೆ ಪ್ರೇರಣೆಯಾಗಲಿ” ಎಂದರು.
ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಮಾತನಾಡಿ “ಪ್ರತಿಯೊಬ್ಬರೂ ವಿವೇಕಾನಂದರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಗುರಿ ತಲುಪುವಲ್ಲಿ ಯಶಸ್ಸನ್ನು ಸಾಧಿಸಿ” ಎಂದರು. ವಿದ್ಯಾರ್ಥಿಗಳಾದ ಗೌರಿ ಕೆ ೬ನೇ, ಸಂದೇಶ್ ಕೆ. ಆರ್ ೮ನೇ, ಉದಿತ್ ಪಿ.ಪಿ ೯ನೇ ಮತ್ತು ಚಿನ್ಮಯಿ ಕೆ.ಜಿ ೧೦ ನೇ ವಿವೇಕಾನಂದರ ಜೀವನಾದರ್ಶಗಳನ್ನು ವಿವರಿಸಿದರು. ವಿದ್ಯಾರ್ಥಿಗಳಾದ ವೈಷ್ಣವ್ ಕೆ.ಎಂ ಸ್ವಾಗತಿಸಿ, ಕಿಶನ್ ಎಸ್.ಆರ್ ಧನ್ಯವಾದವಿತ್ತರು. ಹಯನ ಪಿ ಎ ನಿರೂಪಿಸಿದರು.