ಪ್ರತಿಯೊಬ್ಬ ಕಾರ್ಯಕರ್ತನೂ ಶಾಸಕನಾಗಿ ಕೆಲಸ ಮಾಡಬೇಕು : ಕಂಜಿಪಿಲಿ
ಭಾರತೀಯ ಜನತಾ ಪಾರ್ಟಿ ಸಾಮಾನ್ಯ ವ್ಯಕ್ತಿಗೂ ಅವಕಾಶ ಕೊಡುತ್ತದೆ ಎಂಬುದನ್ನು ಹಲವಾರು ಬಾರಿ ನಾವು ನೋಡಿದ್ದೇವೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ಶಾಸಕ ಎಸ್. ಅಂಗಾರರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪನವರ ಕ್ಯಾಬಿನೆಟ್ನಲ್ಲಿ ಸಚಿವರನ್ನಾಗಿ ಮಾಡಿದ್ದಾರೆ.
ನಮ್ಮ ಬಹಳಷ್ಟು ವರ್ಷಗಳ ಹಾರೈಕೆಯಂತೆ ಸುಳ್ಯಕ್ಕೆ ಸಚಿವ ಸ್ಥಾನ ಸಿಗಬೇಕು, ಅಂಗಾರರು ಸಚಿವರಾಗಬೇಕು ಎಂಬುದು ಹಲವು ವರ್ಷಗಳ ನಮ್ಮ ನಿರೀಕ್ಷೆ ಇಂದು ಸಾಕಾರಗೊಂಡಿದೆ. ನಾವೆಲ್ಲರೂ ಮುಂದಿನ ದಿನಗಳಲ್ಲಿ ಶಾಸಕರು ನಮ್ಮ ಕ್ಷೇತ್ರದಲ್ಲಿ ಈ ಹಿಂದೆ ಮಾಡಿರುವ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಅದಕ್ಕಾಗಿ ಕಾರ್ಯಕರ್ತರೆ ಶಾಸಕರಾಗಿ ಕೆಲಸ ಮಾಡಬೇಕು.
ಶಾಸಕರು ಮುಂದಿನ ದಿನಗಳಲ್ಲಿ ಸುಳ್ಯದಲ್ಲೇ ಇರುವಂತಹ ಪರಿಸ್ಥಿತಿ ಇಲ್ಲ. ರಾಜ್ಯಾದ್ಯಂತ ಓಡಾಡಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ನಮ್ಮೆಲ್ಲಾ ಕಾರ್ಯಕರ್ತರು ಶಾಸಕ ಅಂಗಾರರಾಗಬೇಕಿದೆ. ಆ ಮುಖೇನ ಸುಳ್ಯದಲ್ಲಿ ಬಿಜೆಪಿ ಭದ್ರಕೋಟೆಯನ್ನು ಇನನ್ನಷ್ಟು ಬಲಪಡಿಸಬೇಕಾಗಿದೆ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು.
ಅವರು ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ನ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಕಾರ್ಯಕರ್ತರೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರುಗಳಾದ ಚಂದ್ರ ಕೋಲ್ಚಾರು, ಸುಧಾಕರ ಕಾಮತ್ ವಿನೋಬಾನಗರ, ನವೀನ್ ರೈ ಮೇನಾಲ, ನವೀನ್ ಸಾರಕೆರೆ, ಶಂಕರ್ ಪೆರಾಜೆ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಶಿವಾನಂದ ಕುಕ್ಕುಂಬಳ, ರಜತ್ ಅಡ್ಕಾರು, ನ.ಪಂ. ಮಾಜಿ ಸದಸ್ಯ ಗಿರೀಶ್ ಕಲ್ಲುಗದ್ದೆ, ಶ್ರೀಮತಿ ವಿನುತಾ ಪಾತಿಕಲ್ಲು, ಶ್ರೀಮತಿ ಆಶಾ ತಿಮ್ಮಪ್ಪ, ಶ್ರೀಮತಿ ಜಾಹ್ನವಿ ಕಾಂಚೋಡು, ಅಶೋಕ ಅಡ್ಕಾರು ಸೇರಿದಂತೆ ನಗರ ಪಂಚಾಯತ್ ಬಿಜೆಪಿ ಸದಸ್ಯರು, ತಾ.ಪಂ. ಬಿಜೆಪಿ ಸದಸ್ಯರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.