ಅಪ್ರಾಪ್ತೆಯೊಬ್ಬಳನ್ನು ಬಳಸಿಕೊಂಡು ವೇಶ್ಯಾವಾಟಿಕೆಯ ದಂಧೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ ಯುವತಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಪೋಕ್ಸೋ ಕಾಯ್ದೆ ದಾಖಲಿಸಲಾಗಿದೆ.
ಪಂಬೆತ್ತಾಡಿ ಗ್ರಾಮದ ನಿವಾಸಿ ಗುಲಾಬಿ ನಾಯ್ಕ್ (29ವರ್ಷ), ಬ್ರಹ್ಮಾವರ ಕೀಳಿಂಜೆ ನಿವಾಸಿ ಶಶಿಧರ (42 ವರ್ಷ), ಕುಂದಾಪುರದ ಹೊಸೂರು ನಿವಾಸಿ ಮಂಜುನಾಥ (26 ವರ್ಷ), ಉಡುಪಿಯ ರೋವೆಲ್ ಸೂರಜ್ (47 ವರ್ಷ) ಎಂಬವರು ಬಂಧಿತರು.
ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಂಗಿ ಮತ್ತು ಅಕ್ಕನ ಜೊತೆ ಸೇರಿ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದಳೆಂದೂ, ಆಕೆಯನ್ನು ಗುಲಾಬಿ ನಾಯ್ಕ್ ಮತ್ತು ಸೂರಜ್ ಎಂಬವರು ಉಡುಪಿ, ಮಣಿಪಾಲದಲ್ಲಿ ಆಗಾಗ ಈ ದಂಧೆಗೆ ಬಳಸಿಕೊಳ್ಳುತ್ತಿದ್ದರೆಂದೂ ಹೇಳಲಾಗಿದೆ. ಜ. 2೦ರಂದು ಆ ಅಪ್ರಾಪ್ತೆಯನ್ನು ಶಶಿ ಎಂಬಾತನೊಂದಿಗೆ ತೆರಳುವಂತೆ ಸೂಚಿಸದರೆಂದೂ, ಆಗ ಆಕೆ ಈ ದಿನ ಬೇಡ, ನನಗೆ ಇವತ್ತು ಆಗುವುದಿಲ್ಲ ಎಂದು ಹೇಳಿದ್ದು, ಈ ವಿಚಾರಕ್ಕಾಗಿ ಅವರ ನಡುವೆ ವಾಗ್ವಾದ, ಜಗಳ ನಡೆದು ಆಕೆಯನ್ನು ಇವರು ಬಲವಂತದಿಂದ ಕಾರಿನ ಹಿಂಬದಿ ಸೀಟಿನಲ್ಲಿ ತುರುಕಿ, ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡುತ್ತಾ ಉಡುಪಿಯತ್ತ ಹೊರಟರೆಂದು ಆರೋಪಿಸಲಾಗಿದೆ.
ತಟಪಾಡಿ ಬಳಿ ಬರುತ್ತಿದ್ದಂತೆ ಈ ಅಪ್ರಾಪ್ತ ಯುವತಿ ಜೋರಾಗಿ ಕಿರುಚಿಕೊಂಡಾಗ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ, ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ವೇಳೆ ವೇಶ್ಯಾಟಿಕೆ ದಂಧೆಯ ವಿಚಾರ ಬೆಳಕಿಗೆ ಬಂದಿದ್ದು, ಕೇಸು ದಾಖಲಾಗಿದೆ.