ಸುಳ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನದ ಕುರಿತು ಇಂದು ತಾ.ಪಂ.ನಲ್ಲಿ ನಡೆದ ಎಸ್.ಸಿ., ಎಸ್.ಟಿ. ಸಭೆಯಲ್ಲಿ ಪ್ರತಿಧ್ವನಿಸಿದ ಹಾಗೂ ದಲಿತ ನಾಯಕರ ಮಾತಿಗೆ ಅಸಮಾಧಾನಗೊಂಡ ತಹಶೀಲ್ದಾರ್ ಆಡಿದ ಮಾತಿಗೆ ದಲಿತ ಮುಖಂಡರು ಆಕ್ರೋಶಿತರಾದ ಘಟನೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ತಹಶೀಲ್ದಾರ್ ಅನಿತಾಲಕ್ಷ್ಮೀ ವಹಿಸಿದ್ದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಇ.ಒ.ಭವಾನಿಶಂಕರ್, ಸಮಾಜಕಲ್ಯಾಣಾಧಿಕಾರಿ ಚಂದ್ರಶೇಖರ ಪೇರಾಲು, ಇಲಾಖಾಧಿಕಾರಿಗಳು ಸಭೆಯಲ್ಲಿದ್ದರು. ಸುಳ್ಯದಲ್ಲಿ ಅಂಬೇಡ್ಕರ್ ಭವನ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಪಾಲನಾ ವರದಿಯ ಮೇಲೆ ಚರ್ಚೆ ನಡೆದಾಗ ಮಾಜಿ ಜಿ.ಪರಿಷತ್ತು ಸದಸ್ಯ ದೇವಪ್ಪ ನಾಯ್ಕರು ಅಂಬೇಡ್ಕರ್ ಭವನಕ್ಕೆ ಹೋಗುವ ರಸ್ತೆಯ ಸಮಸ್ಯೆ ನ್ಯಾಯಾಲಯದಲ್ಲಿ ಇದೆ. ಹೀಗೆ ಹೋದರೆ ಅದು ಮುಗಿಯುವುದಿಲ್ಲ. ಅದನ್ನು ಸೌಹಾರ್ದಯುತವಾಗಿ ಮುಗಿಸಲು ನೋಡೋಣ ಎಂದು ಹೇಳಿದರು.
ಆಗ ಸಮಾಜಕಲ್ಯಾಣಾಧಿಕಾರಿ ಕಟ್ಟಡ ಆಗುವುದಕ್ಕೂ ರಸ್ತೆಗೂ ಸಮಸ್ಯೆ ಬರುವುದಿಲ್ಲ. ಅನುದಾನ ಬಂದಂತೆ ಕಟ್ಟಡ ಮಾಡಬಹುದು ಎಂದು ಹೇಳಿದರು. ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್ ಕಟ್ಟಡ ಹಾಗೂ ಅನುದಾನದ ಕುರಿತು ಮಾಹಿತಿ ನೀಡಿದರು. 2009 ರಿಂದಲೇ ಕೆಲಸ ಆರಂಭಗೊಂಡಿದ್ದರೂ ಇನ್ನೂ ಪೂರ್ತಿಗೊಂಡಿಲ್ಲ ಎಂದು ನಂದರಾಜ್ ಸಂಕೇಶ ಹೇಳಿದರೆ, ಇದು ಮೀಸಲು ಕ್ಷೇತ್ರವಾಗಿರುವುದರಿಂದ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆನಂದ ಬೆಳ್ಳಾರೆ ಹೇಳಿದರು.
ತಹಶೀಲ್ದಾರ್ ಅನಿತಾಲಕ್ಷ್ಮೀ ಯವರು ಕಟ್ಟಡದ ಕುರಿತು ಮತ್ತು ಅಲ್ಲಿಯ ರಸ್ತೆ ಸಮಸ್ಯೆ ಕುರಿತು ಸ್ಥಳ ಭೇಟಿ ಮಾಡುತ್ತೇನೆ ಎಂದು ಹೇಳಿದಾಗ, ನಿಮ್ಮ ಜೊತೆಯಲ್ಲಿ ನಾವು ಬರುತ್ತೇವೆ ಜನಗಳನ್ನು ಸೇರಿಸುತ್ತೇವೆ ಎಂದು ನಂದರಾಜರು ಹೇಳಿದರು. ಅವರ ಮಾತಿಗೆ ಅಸಮಾಧಾನಗೊಂಡ ತಹಶೀಲ್ದಾರ್ರು ಜನ ಸೇರಿಸುವ ಕುರಿತು ಮಾತನಾಡುವುದು ಸರಿಯಲ್ಲ, ಆ ರೀತಿಯೆಲ್ಲಾ ಮಾತನಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಹಶೀಲ್ದಾರರ ಮಾತಿಗೆ ಪ್ರತ್ಯುತ್ತರ ನೀಡಿದ ಆನಂದ ಬೆಳ್ಳಾರೆಯವರು 12 ವರುಷದಿಂದ ಅಂಬೇಡ್ಕರ್ ಭವನ ಆಗದಿರುವ ಕುರಿತು ನಮಗೆ ನೋವಿದೆ, ನಮ್ಮ ಸಮಸ್ಯೆ ಪರಿಹಾರದ ದೃಷ್ಟಿಯಿಂದ ಜನ ಸೇರಿಸುತ್ತೇವೆ ಎಂದು ಏರು ಧ್ವನಿಯಲ್ಲಿ ಮಾತನಾಡಿದರು. ಜನ ಸೇರಿಸುವುದರಿಂದ ಸಮಸ್ಯೆ ಸರಿಯಾಗುವುದಿಲ್ಲ ಎಂದು ಅನಿತಾಲಕ್ಷ್ಮೀ ಹೇಳಿದರು. ಈ ಕುರಿತು ಕೆಲಹೊತ್ತು ಚರ್ಚೆ ನಡೆದು ನಾನು ಸ್ಥಳ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದ ಮೆರೆಗೆ ಆ ಚರ್ಚೆಗೆ ತೆರೆಬಿತ್ತು.