ಗ್ರಾ.ಪಂ.ಅಧ್ಯಕ್ಷರಿಂದ ತಹಶೀಲ್ದಾರ್ ಗೆ ಮನವಿ
ಪೆರುವಾಜೆ ಗ್ರಾಮದ ಮುಕ್ಕೂರು ವಾರ್ಡ್ ನ ಪಡಿತರ ಫಲಾನುಭವಿಗಳಿಗೆ ಪಡಿತರ ಸಾಮಗ್ರಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಮುಕ್ಕೂರು ಸೊಸೈಟಿ ಶಾಖೆಯಲ್ಲಿಯೇ ಬಯೋಮೆಟ್ರಿಕ್ ವ್ಯವಸ್ಥೆ ಒದಗಿಸುವಂತೆ ಮುಕ್ಕೂರು ವಾರ್ಡ್ ಸದಸ್ಯ, ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅವರು ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಿದರು.
ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ಮಾ.6 ರಂದು ನಡೆದ ಪಿಂಚಣಿ ಅದಾಲತ್ನಲ್ಲಿ ಅವರು ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು.
ಪ್ರಸ್ತುತ ಮುಕ್ಕೂರಿನ ಪಡಿತರ ಫಲಾನುಭವಿಗಳು ಬಯೋಮೆಟ್ರಿಕ್ ಗಾಗಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ(ಸೊಸೈಟಿ) ತೆರಳಿ ತಂಬಿಂಗ್ ನೀಡಿ ಕೂಪನ್ ಪಡೆದುಕೊಳ್ಳಬೇಕಿದೆ. ಅನಂತರ ಮುಕ್ಕೂರು ಶಾಖೆಯಲ್ಲಿ ಪಡಿತರ ಸಾಮಗ್ರಿ ಪಡೆದುಕೊಳ್ಳಬೇಕಿದೆ. ಹೀಗಾಗಿ ಎರಡು ಮೂರು ದಿನ ಬಯೋಮೆಟ್ರಿಕ್ ಗಾಗಿ ಓಡಾಡಬೇಕಾದ ಸಮಸ್ಯೆ ಉಂಟಾಗಿದೆ.
ಇದರಿಂದಾಗಿ ಪಡಿತರ ಸಾಮಗ್ರಿಗಳಿಗೆ ಪಾವತಿಸಬೇಕಾದ ಮೊತ್ತಕ್ಕಿಂತ ಅಧಿಕ ಹಣ ಓಡಾಟಕ್ಕೆ ಖರ್ಚಾಗುತ್ತಿದೆ. ಹೆಚ್ಚಿನ ಫಲಾನುಭವಿಗಳು ಕೂಲಿ ಕಾರ್ಮಿಕರಾಗಿದ್ದು ಆರ್ಥಿಕ ಹೊರೆ ಕೂಡ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮುಕ್ಕೂರಿನ ಸೊಸೈಟಿ ಶಾಖಾ ಕಚೇರಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಕಲ್ಪಿಸಿ ಕೂಪನ್ ನೀಡಬೇಕು ಎಂದು ಗ್ರಾ.ಪಂ.ಅಧ್ಯಕ್ಷರು ಮನವಿ ಮೂಲಕ ಆಗ್ರಹಿಸಿದ್ದಾರೆ.