ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಹಾಗೂ ಯುವಕ ಮಂಡಲ ಕನಕಮಜಲು ಇದರ ಆಶ್ರಯದಲ್ಲಿ ಅಂತರ್ ಜಿಲ್ಲಾ ಆಯ್ದ ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಕನಕಮಜಲಿನ ಶ್ರೀ ನ.ರಾ.ಗೌ.ಸ.ಮಾ.ಹಿ.ಪ್ರಾ.ಶಾಲಾ ಕ್ರೀಡಾಂಗಣದಲ್ಲಿ ಮಾ.10ರಂದು ಸಂಜೆ ಜರುಗಲಿದೆ.
ಪಂದ್ಯಾಟವನ್ನು ಜಿ.ಪಂ. ಸದಸ್ಯೆ ಶ್ರೀಮತಿ ಪುಷ್ಪಾವತಿ ಬಾಳಿಲ ಅವರು ಉದ್ಘಾಟಿಸಲಿದ್ದಾರೆ. ಕನಕಮಜಲು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯ ತೀರ್ಥರಾಮ ಬಾಳಾಜೆ, ಯುವ ಸಬಲೀಕರಣ, ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ತಾಂತ್ರಿಕ ಕೃಷಿ ಅಧಿಕಾರಿ ಮೋಹನ ನಂಗಾರು, ಬಿ.ಎಸ್ಸೆನ್ನೆಲ್ ನಿವೃತ್ತ ತಾಂತ್ರಿಕ ಸಿಬ್ಬಂದಿ ಗೋಪಾಲಗೌಡ ನರಿಯೂರು,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಸ್ತೂರಿ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಆಟಗಾರ ಸಚಿನ್ ಪ್ರತಾಪ ಐವರ್ನಾಡು ಅವರಿಗೆ ಸನ್ಮಾನ ನಡೆಯಲಿದೆ.
ಹೊನಲು ಬೆಳಕಿನಲ್ಲಿ ನಡೆಯುವ ವಾಲಿಬಾಲ್ ಪಂದ್ಯಾಟದಲ್ಲಿ SDM ಕಾಲೇಜು ಉಜಿರೆ, ಶಾರದಾ ಕಾಲೇಜು ತಲಪಾಡಿ ಮಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ, ತೆಂಕನಿಡಿಯೂರು ಕಾಲೇಜು ಉಡುಪಿ, ಬ್ಯಾರೀಸ್ ಕಾಲೇಜು ಕೋಡಿ-ಕುಂದಾಪುರ, ಆಳ್ವಾಸ್ ಕಾಲೇಜು ಮೂಡಬಿದಿರೆ ಸೇರಿದಂತೆ ಆರ್ ತಂಡಗಳು ವಿವಿಧ ಪ್ರಾಯೋಜಕತ್ವದಲ್ಲಿ ಕಣಕ್ಕಿಳಿಯಲಿವೆ.
ಪಂದ್ಯಾಟದ ಪ್ರಥಮ ಬಹುಮಾನ ರೂ.12000 ನಗದು , ದ್ವಿತೀಯ ಬಹುಮಾನ ರೂ.8000 ನಗದು, ತೃತೀಯ ಬಹುಮಾನ ರೂ.6000 ನಗದು, ಚತುರ್ಥ ಬಹುಮಾನ ರೂ.4000 ನಗದು, ಹಾಗೂ ವೈಯುಕ್ತಿಕ ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಕನಕಮಜಲು ಪ್ರಾ.ಕೃ. ಪ.ಸ.ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಜಾಲ್ಸೂರು ಸ್ಕಂದಶ್ರೀ ಅರ್ಥ್ ಮೂವರ್ಸ್ ಅಜ್ಜಾವರ ಇದರ ಮಾಲಕ ಗಣೇಶ್ ಕೋಳ್ತಿಮಾರ್, ಪಿ.ಡಬ್ಲ್ಯೂ. ಡಿ. ಗುತ್ತಿಗೆದಾರ ಅವಿನ್ ಮಳಿ, ನಿರ್ಣಾಯಕರಾದ ಮೋನಪ್ಪ ಪಟ್ಟೆ ಉಪಸ್ಥಿತರಿದ್ದು, ವಿಜೇತರುಗಳಿಗೆ ಬಹುಮಾನ ವಿತರಿಸಲಿದ್ದಾರೆ.