ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶೈವ – ವೈಷ್ಣವ ವಿವಾದ ಅಲ್ಲ . ಅದು ಹಿಂದುಗಳ ಏಕತೆಯ ವಿಚಾರ. ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾಯ ದೇವರಿಗೆ ಬೇಕಾದ ರೀತಿಯಲ್ಲಿ ಪೂಜೆ ನಡೆಸಬೇಕು. ಅಂತರ್ಯಾಮಿ ಪೂಜೆ ಸಲ್ಲದು. ದೇವಸ್ಥಾನದ ದಿಟಂ ಪ್ರಕಾರವೇ ಪೂಜೆ ಸಲ್ಲಿಸಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಆಗ್ರಹಿಸಿದ್ದಾರೆ.
ಅವರು ನಿನ್ನೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಸ್ತುತ ಶಿವ ದೇವರನ್ನು ಕೆಳಗಿನ ಕಕ್ಷೆಯಲ್ಲಿರಿಸಿ ಪೂಜೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಶೈವಾಂಶ ಪದ್ಧತಿಯಲ್ಲಿ ನಡೆಯಬೇಕಾದಲ್ಲಿ ಸಂಪ್ರದಾಯಕ್ಕೆ ವಿರುದ್ಧವಾಗಿ ವೈಷ್ಣವ ಪದ್ದತಿಯ ಪೂಜೆ ಸಲ್ಲಿಸುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 700 ವರ್ಷಗಳಿಂದ ಆರಂಭವಾದ ಮಾಧ್ವ ವೈಷ್ಣವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಅದಕ್ಕಿಂತ ಮೊದಲು ಇಲ್ಲಿ ಪೂಜೆ ಸಲ್ಲಿಸುತ್ತಿರಲಿಲ್ಲವೇ ಅದು ಯಾವ ಪದ್ದತಿಯಲ್ಲಿತ್ತು ಎಂದವರು ಪ್ರಶ್ನಿಸಿದರು. ಶಿವಳ್ಳಿಯವರ ಪೈಕಿ ಶೇ.೭೫ ರಷ್ಟು ಮಂದಿ ಎಲ್ಲ ದೇವರನ್ನು ಪೂಜಿಸುತ್ತಾರೆ. ಆದರೆ ಶೇ.25 ಮಂದಿ ರಷ್ಟು ಮಾತ್ರ ಮಾಧ್ವ ಬ್ರಾಹ್ಮಣರು ಎಲ್ಲಾ ದೇವರನ್ನು ಪೂಜಿಸುವುದಿಲ್ಲ. ಆದ್ದರಿಂದಲೇ ಸುಬ್ರಹ್ಮಣ್ಯದಲ್ಲೂ ಪೂಜಾ ಪದ್ಧತಿ ಬದಲಾಗಿದೆ . ಇಲ್ಲಿ ದಿಟಂ ಪ್ರಕಾರವೇ ಪೂಜೆ ನಡೆಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಹಿತರಕ್ಷಣಾ ವೇದಿಕೆಯ ಮೋನಪ್ಪ ಮಾನಾಡು, ಶ್ರೀನಾಥ್ ಟಿ ಎಸ್, ಪ್ರಶಾಂತ್ ಮಾಣಿಲ, ಗುರುಪ್ರಸಾದ್ ಉಪಸ್ಥಿತರಿದ್ದರು.