ದುಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಮಾ.18ರಿಂದ 20ರವರೆಗೆ ಭಕ್ತಿ, ಸಡಗರದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಮಾ.18ರಂದು ನಡೆದ ಹಸಿರುವಾಣಿ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದರು.ಬಳಿಕ ಶ್ರೀ ದುಗ್ಗಲಾಯ ಮಕ್ಕಳ ಯಕ್ಷಗಾನ ಕಲಾ ಸಂಘದಿಂದ ವಿಜಯ ವಾಹಿನಿ ಯಕ್ಷಗಾನ ಬಯಲಾಟ ನಡೆಯಿತು.
ಮಾ.19ರಂದು ಬೆಳಿಗ್ಗೆ ಗಣಪತಿ ಹವನ, ದೈವಗಳಿಗೆ ತಂಬಿಲ ನಡೆದು,ಸತ್ಯನಾರಾಯಣ ದೇವರ ಪೂಜೆ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ನಡುಬೆಟ್ಟು ಚಾವಡಿಯಿಂದ ದುಗಲಡ್ಕ ಮೂಲಸ್ಥಾನಕ್ಕೆ ಭಂಡಾರ ಬಂದು ರುಧಿರ ಚಾಮುಂಡಿ ದೈವದ ನೇಮೋತ್ಸವ ನಡೆಯಿತು. ಸಚಿವರ,ಕ್ಷೇತ್ರದ ತಂತ್ರಿಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಮಾ.20ರಂದು ಬೆಳಿಗ್ಗೆ ಶ್ರೀ ದುಗ್ಗಲಾಯ ದೈವದ ನೇಮೋತ್ಸವ ನಡೆಯಿತು. ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿಗಳಾದ ವಾಸುದೇವ ತಂತ್ರಿಗಳು,ಆಡಳಿತ ಮೊಕ್ತೇಸರ ರಾಘವೇಂದ್ರ ಭಟ್ ಕಲ್ದಂಬೆ,ಸತ್ಯನಾರಾಯಣ ಕೊಳತ್ತಾಯ,ಆಡಳಿತ ಸಮಿತಿಯ ಅಧ್ಯಕ್ಷ ಸುಂದರ ರಾವ್,ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಕುಶಾಲಪ್ಪ ಗೌಡ ಕಜೆ, ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ಪ್ರಭಾವತಿ ರೈ,ಯುವ ಸೇವಾ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ,ಗುಳಿಗನ ಕಟ್ಟೆ ಸಮಿತಿ ಅಧ್ಯಕ್ಷ ದಿನೇಶ್ ಡಿ.ಕೆ.,ನ.ಪಂ.ಸದಸ್ಯೆ ಶಶಿಕಲಾ ನೀರಬಿದಿರೆ, ಮಾಜಿ ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ,ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ,ಊರವರು,ಸಾರ್ವಜನಿಕರು ಸಹಸ್ರಾರು ಮಂದಿ ಭಾಗವಹಿಸಿದ್ದರು.