ಕರಾವಳಿಯಲ್ಲಿ ಕುಲೆಗಳಿಗೆ ಮದುವೆ ಮಾಡುವ ಸಂಪ್ರದಾಯ ಚಾಲ್ತಿಯಲ್ಲಿರುವುದು ಗೊತ್ತೇ ಇದೆ. ಇದು ಹೇಗೆ ಮತ್ತು ಯಾಕಾಗಿ ಎಂಬುದರ ಬಗ್ಗೆ ಹಲವರಿಗೆ ಕುತೂಹಲ ಇದೆ. ಇಂತಹ ಕುತೂಹಲಿಗರಿಗಾಗಿಯೇ ಇದೀಗ ಕುಲೆ ಮದುವೆಯೊಂದು ಸಿದ್ಧವಾಗಿದೆ!
ಅಂದ ಹಾಗೆ, ಇದು ತುಳು ಸಿನೆಮಾದ ವಿಷಯ. ಕೋಸ್ಟಲ್ವುಡ್ ಸಿನೆಮಾದಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಖ್ಯಾತ ನಿರ್ದೇಶಕ ಕೆ.ಸೂರಜ್ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಮಾ.೨೬ರಂದು ರಿಲೀಸ್ ಆಗಲಿರುವ ಇಂಗ್ಲೀಷ್ ಸಿನೆಮಾ ಇದೀಗ ಕುಲೆ ಕಲ್ಯಾಣದ ಕಥೆ ಹೇಳಲು ಸಿದ್ಧವಾಗಿದೆ.
ಸದ್ಯ ಸಿನೆಮಾದ ಪ್ರಚಾರ ಕೂಡ ಕರಾವಳಿಯಲ್ಲಿ ವಿಭಿನ್ನವಾಗಿಯೇ ನಡೆಯುತ್ತಿದೆ. ಸಭೆ-ಸಮಾರಂಭ ನಡೆಯುವಲ್ಲಿಗೆ ಕುಲೆ ಭೇಟಿ ನೀಡಿ ಸಿನೆಮಾದ ಬಗ್ಗೆ ಪ್ರಚಾರ ನಡೆಸುತ್ತಿದೆ. ಬೈಕ್ – ಕಾರಲ್ಲಿ ಕೂಡ ಕುಲೆ ಕಾಣಿಸಿಕೊಂಡು ಸಿನೆಮಾದ ಬಗ್ಗೆ ಪ್ರಚಾರ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ.
ಮಾರ್ಚ್೨೨, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಕನ್ನಡ ಸಿನೆಮಾ ನಿರ್ಮಿಸಿದ ಖ್ಯಾತ ಉದ್ಯಮಿ, ಹರೀಶ್ ಶೇರಿಗಾರ್-ಶರ್ಮಿಳಾ ಶೇರಿಗಾರ್ ನಿರ್ಮಾಣದಲ್ಲಿ ಇಂಗ್ಲೀಷ್ ಸಿದ್ಧವಾಗಿದೆ. ಕೊರೋನಾ ಕಾರಣದಿಂದ ಒಂದಷ್ಟು ಸಮಸ್ಯೆ ಸವಾಲು ಗೊಂದಲ ಎದುರಿಸುತ್ತಿರುವ ಕರಾವಳಿಯ ಮನೆಮಂದಿಗೆ ಹಾಸ್ಯದ ಜತೆಗೆ ಸಂದೇಶದ ರಸದೌತಣ ನೀಡುವ ಇರಾದೆಯೊಂದಿಗೆ ಇಂಗ್ಲೀಷ್ ತೆರೆಗೆ ಬರಲು ಅಣಿಯಾಗಿದೆ.
ಸಿನೆಮಾದಲ್ಲಿ ಪೃಥ್ವಿ ಅಂಬರ್, ನವ್ಯಾ ಪೂಜಾರಿ ಮುಖ್ಯಭೂಮಿಕೆಯಲ್ಲಿದ್ದು, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ವಿಸ್ಮಯ ವಿನಾಯಕ್ ಸೇರಿದಂತೆ ಇನ್ನೂ ಹಲವರು ಬಣ್ಣಹಚ್ಚಿದ್ದಾರೆ. ಕನ್ನಡ ಪ್ರತಿಭಾವಂತ ನಟ ಅನಂತ್ನಾಗ್ ಅವರು ಅತಿಥಿ ಪಾತ್ರದಲ್ಲಿದ್ದಾರೆ ಎಂಬುದು ಸಿನೆಮಾದ ಹೆಗ್ಗಳಿಕೆ.
ಮಂಗಳೂರಿನ ರಾಮಕಾಂತಿ, ಪಿವಿಆರ್, ಸಿನೆಪೊಲಿಸ್, ಬಿಗ್ ಸಿನೆಮಾ, ಸುರತ್ಕಲ್ನ ನಟರಾಜ್ ಸಹಿತ ಕರಾವಳಿಯ ಬಹುತೇಕ ಎಲ್ಲ ಸಿನಿ ಮಂದಿರದಲ್ಲಿ ಕುಲೆ ಕಲ್ಯಾಣವು ತೆರೆದುಕೊಳ್ಳಲಿದೆ. ವಿಶೇಷವೆಂದರೆ ಮಂಗಳೂರು ಮಾತ್ರವಲ್ಲದೆ ಮುಂಬೈ, ಬೆಂಗಳೂರು, ಕಾಸರಗೋಡು ಸೇರಿದಂತೆ ವಿದೇಶಗಳಲ್ಲೂ ಸಿನೆಮಾ ತೆರೆಕಾಣಲಿದೆ.