187 ವರ್ಷಗಳ ಹಿಂದೆ 1837 ಮಾ. 3೦ರಂದು ಬ್ರಿಟಿಷರ ವಿರುದ್ಧ ಸಂಘಟಿತರಾಗಿ ಸುಳ್ಯ ಆಸುಪಾಸಿನ ಊರುಗಳಿಂದ ದಂಡೆತ್ತಿ ಹೋದ ಜನರು ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡ ಘಟನೆಯ ಸ್ಮರಣಾರ್ಥ ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಭವನ ಮತ್ತು ಸ್ವಾತಂತ್ರ್ಯ ಉದ್ಯಾನವನ್ನು ನಿರ್ಮಸಲಾಗುವುದು ಎಂದು ಸಚಿವ ಎಸ್.ಅಂಗಾರ ಹಾಗೂ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರರವರು ಇಂದು ಘೋಷಿಸಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು ಮುಂದಿನ ಆಗಸ್ಟ್ ೧೫ಕ್ಕೆ ೭೫ ವರ್ಷಗಳಾಗುವ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸಲು ನಿರ್ಧರಿಸಿದ್ದು, ಉಪ್ಪಿನ ಸತ್ಯಾಗ್ರಹ ನಡೆದ ದಿನವಾದ ಮಾ. ೧೫ರಿಂದ ಆ. ೧೫ರವರೆಗೆ ೭೫ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಅದರ ಅನ್ವಯ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಹಿನ್ನಲೆಯುಳ್ಳ ಬೆಳ್ಳಾರೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಇಂದು ಏರ್ಪಡಿಸಲಾಗಿತ್ತು.
ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಇರುವ ಬ್ರಿಟೀಷರ ಕಾಲದ ಖಜಾನೆ ಕಟ್ಟಡದ ಪಕ್ಕದಲ್ಲಿ ಶಾಮಿಯಾನ ಹಾಕಿ ವೇದಿಕೆ ನಿರ್ಮಿಸಿ ಏರ್ಪಡಿಸಲಾದ ಕಾರ್ಯಕ್ರಮವನ್ನು ಸಚಿವ ಎಸ್.ಅಂಗಾರ ಉದ್ಘಾಟಿಸಿದರು. ಎನ್ಎಂಸಿ ವಿಶ್ರಾಂತ ಪ್ರಾಂಶುಪಾಲರಾದ ಡಾ. ಪ್ರಭಾಕರ ಶಿಶಿಲರು ೧೮೩೭ರ ಸ್ವಾತಂತ್ರ್ಯ ಹೋರಾಟದ ವಿವರಗಳನ್ನು ನೀಡಿದರು. ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಜಿ.ಪಂ. ಸದಸ್ಯರುಗಳಾದ ಎಸ್.ಎನ್. ಮನ್ಮಥ ಹಾಗೂ ಹರೀಶ್ ಕಂಜಿಪಿಲಿ, ತಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ತಾ.ಪಂ. ಸದಸ್ಯೆ ಶ್ರೀಮತಿ ನಳಿನಾಕ್ಷಿ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ, ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು, ಪುತ್ತೂರು ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ, ನೆಹರೂ ಯುವ ಕೇಂದ್ರದ ಅಧಿಕಾರಿ ರಘುವೀರ್ ಸೂಟರ್ಪೇಟೆ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಸಂಜಯ್ ನೆಟ್ಟಾರು ಉಪಸ್ಥಿತರಿದ್ದರು. ತಹಶೀಲ್ದಾರ್ ಅನಿತಾಲಕ್ಷ್ಮಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ವಂದಿಸಿದರು. ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಾರೆ ಗ್ರಾ.ಪಂ. ಮತ್ತು ಸ್ನೇಹಿತರ ಕಲಾ ಸಂಘದವರು ಕಾರ್ಯಕ್ರಮದ ಯಶಸ್ಸಿಗೆ ದುಡಿದಿದ್ದರು. ಬೆಳ್ಳಾರೆ ಜೂನಿಯರ್ ಕಾಲೇಜು ಮತ್ತು ಕೆಪಿಎಸ್ ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆರೋಗ್ಯ ಇಲಾಖೆಯವರು ಎಲ್ಲಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಧ್ಯಾಹ್ನ ಭೋಜನದ ವ್ಯವಸ್ಥೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೌನೇಶ್ ವಿಶ್ವಕರ್ಮ ನೇತೃತ್ವದ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನೀಡಿತು., ಬಳಿಕ ಆದರ್ಶ ಗೋಖಲೆ ಮತ್ತು ನರೇಂದ್ರ ರೈ ದೇರ್ಲರವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.