ಕಡಬ ತಾಲ್ಲೂಕಿನ ಯೇನೆಕಲ್ಲಿ ನವರಾಗಿದ್ದು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಚಿದ್ಗಲ್ ಮನೆತನದ ಶಿವರಾಮ ಏನೆಕಲ್ಲು ಮಾ.೩೧ ರಂದು ನಿವೃತ್ತಿ ಹೊಂದಲಿದ್ದಾರೆ.
ಹರಿಹರ ಪ್ರೌಢಶಾಲೆಯಲ್ಲಿ ೧೯೮೧ ರಲ್ಲಿ ವೃತ್ತಿ ಆರಂಭಿಸಿ. ೧೯೮೨ ರಿಂದ ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಅಧೀನದ ಬಿಳಿನೆಲ ಗೋಪಾಲಕೃಷ್ಣ ಪ್ರೌಢಶಾಲೆಗೆ ಸೇರಿಕೊಂಡರು. ಸುದೀರ್ಘ ೩೯ ವರ್ಷಗಳ ಸೇವೆಯನ್ನು ಸಲ್ಲಿಸಿ ಇದೀಗ ನಿವೃತ್ತರಾಗುತ್ತಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಏನೆಕಲ್ಲಿನಲ್ಲಿ ಪಡೆದಿರುವ ಇವರು ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಎಸ್ ಎಸ್ ಪಿ ಯು ಸುಬ್ರಹ್ಮಣ್ಯದಲ್ಲಿ ಪಡೆದಿರುತ್ತಾರೆ. ಸಿಪಿಎಡ್ ಶಿಕ್ಷಣವನ್ನು ಸತ್ಯಸಾಯಿ ಕಾಲೇಜು ಕುಶಾಲನಗರ ದಲ್ಲಿ ಪಡೆದಿದ್ದು ಬಿ
ಎ ಪದವಿಯನ್ನು ದೂರಶಿಕ್ಷಣ ಮುಖಾಂತರ ಪಡೆದಿರುತ್ತಾರೆ. ಸ್ವತಹ ಕಬಡ್ದಿ, ಖೋ ಖೋ, ವಾಲಿಬಾಲ್ ಆಟಗಾರರಾಗಿರುವ ಇವರು ಹಲವು ರಾಜ್ಯ, ರಾಷ್ಟ್ರಮಟ್ಟದ ಪಂದ್ಯಾಟಗಳನ್ನು ಸಂಘಟನೆ ಮಾಡಿದ್ದಾರೆ. ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಸಜ್ಜುಗೊಳಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ತರಬೇತುದಾರರಾಗಿ, ಸೆಲೆಕ್ಷನ್ ಕಮಿಟಿ ಮೆಂಬರ್ ಆಗಿ ಕೆಲಸ ಮಾಡುತಿದ್ದಾರೆ. ದ. ಕ ಜಿಲ್ಲಾ ದೈ. ಶಿ.ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದು. ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ. ದ . ಕ ಜಿಲ್ಲಾ ಕಬಡ್ಡಿ ಅಸೋಷಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ದ .ಕ ಜಿಲ್ಲಾ ಕ್ರೀಡಾ ನಿರ್ಣಾಯಕರ ಮಂಡಳಿಯ ಕಾರ್ಯದರ್ಶಿ ಯಾಗಿ, ದ. ಕ ಜಿಲ್ಲಾ ವಾಲಿಬಾಲ್ ಹ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿಯಾಗಿ ದುಡಿಯುತ್ತಿದ್ದಾರೆ. ರೈತ ಯುವಕ ಮಂಡಲ ಏನೆಕಲ್ಲು ಇದರ ಮಾಜಿ ಅಧ್ಯಕ್ಷರಾಗಿದ್ದು ಪ್ರಸ್ತುತ ಗೌರವ ಸಲಹೆಗಾರರಾಗಿದ್ದಾರೆ. ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಮಾಜಿ ಅಧ್ಯಕ್ಷರಾಗಿದ್ದು, ಬಚ್ಚನಾಯಕ ದೇವಸ್ಥಾನ ಏನೆಕಲ್ಲು ಇದರ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ನವನೀತ ಕ್ರೀಡಾ ಸಂಘ ಬಿಳಿನೆಲೆ ಇದರ ಕಾರ್ಯದರ್ಶಿಯಾಗಿ, ಕೆವಿಜಿ ಸುಳ್ಯ ಹಬ್ಬ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಅನುಗ್ರಹ ಎಜುಕೇಶನ್ ಟ್ರಸ್ಟ್ ಸುಬ್ರಹ್ಮಣ್ಯ ಇದರ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.
ದಿ. ಸಿ ಸೋಮಣ್ಣ ಗೌಡ ಮತ್ತು ದಿ. ಕೆಂಚಮ್ಮ ಅವರ ಪುತ್ರರಾಗಿರುವ ಇವರ ಪತ್ನಿ ವೇದಾವತಿ ಗೃಹಿಣಿ, ಮಗ ಸಚಿನ್ ಸಿ. ಕೆಎಂಎಫ್ ನಲ್ಲಿ ಮಾರುಕಟ್ಟೆ ಅಧಿಕಾರಿ. ಮತ್ತೊಬ್ಬ ಮಗ ಕಾರ್ತಿಕ್ ಸಿ. ಇಂಟೀರಿಯಲ್ ಡಿಸೈನ್ ನ ಡಿಸೈನ್ ಸ್ಪೇಸ್ ಎಂಬ ಸಂಸ್ಥೆ ನಡೆಸುತ್ತಿದ್ದಾರೆ. ಮಗಳು ಅಮೃತ ಸಿ ಸವಣೂರಿನ ವಿದ್ಯಾರಶ್ಮಿಯಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಾರೆ.