ಕೊಡಗಿನ ಸೋಮವಾರಪೇಟೆ ಉಪವಿಭಾಗದ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್ಟೇಬಲ್ ದಯಾನಂದ ಬಿ.ಎಸ್.ರವರನ್ನು ಅವರ ಅಮೂಲ್ಯ ಸೇವೆಯನ್ನು ಪರಿಗಣಿಸಿ 2020-21 ನೇ ಸಾಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿಗೆ ಆಯ್ಕೆ ಮಾಡಲಾಗಿದೆ.
ದಯಾನಂದ ಬಿ.ಎಸ್.ರವರು ಚೆಂಬು ಗ್ರಾಮದ ಬೊಳ್ಳೂರು ಮನೆ ಶೇಷಪ್ಪ- ಸುಶೀಲ ದಂಪತಿಯ ಪುತ್ರ. ಕಲ್ಲುಗುಂಡಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಅರಂತೋಡಿನ ಎನ್ನೆಂಪಿಯು ಕಾಲೇಜಿನಲ್ಲಿ ಪ್ರೌಢ ಮತ್ತು ಪಿಯು ವ್ಯಾಸಂಗ, ಸುಳ್ಯದ ಎನ್ನೆಂಸಿಯಲ್ಲಿ ಪದವಿ ವ್ಯಾಸಂಗ ಮುಗಿಸಿದ ಅವರು ೧೯೯೬ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕಗೊಂಡಿದ್ದರು. ಬಳಿಕ ಶ್ರೀಮಂಗಲ ಪೊಲೀಸ್ ಠಾಣೆ, ಕುಟ್ಟ ಪೊಲೀಸ್ ಠಾಣೆ, ಕುಶಾಲನಗರ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ೨೦೧೪ರಿಂದ ಸುಂಟಿಕೊಪ್ಪ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರಪೇಟೆಯ ಡಿ.ವೈ.ಎಸ್.ಪಿ.ಕಚೇರಿಯಲ್ಲಿ ಅಪರಾಧ ಪತ್ತೆ ವಿಭಾಗದಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿರುವ ಇವರು ಹಲವಾರು ಕೊಲೆ, ದರೋಡೆ, ಮನೆ ಕಳವು, ಗಾಂಜಾ ಮಾರಾಟ, ಅಂತರಾಜ್ಯ ಲಾಟರಿ ಮಾರಾಟ ಮೊದಲಾದ ಅಪರಾಧಗಳ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನೆರೆ ಪ್ರವಾಹ ಸಂದರ್ಭದಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ್ಧಾರೆ. ಉತ್ತಮ ಕ್ರೀಡಾಪಟುವೂ ಆಗಿರುವ ಇವರು ಪೊಲೀಸ್ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಎಲ್ಲಾ ಹಿನ್ನಲೆಯಲ್ಲಿ ಅವರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿ ನೀಡಲಾಗುತ್ತಿದೆ.