ಊರವರ ಸಹಕಾರದಿಂದ ಪೋಲೀಸರ ವಶ
ರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಮನೆ ನುಗ್ಗಲು ಯತ್ನಿಸುತ್ತಿದ್ದ ವ್ಯಕ್ತಿ ಊರವರ ಸಹಕಾರದಿಂದ ಪೋಲೀಸ್ ವಶವಾದ ಘಟನೆ ವರದಿಯಾಗಿದೆ. ಎ.3ರಂದು ರಾತ್ರಿ 1.30ರ ಸುಮಾರಿಗೆ ಸುಳ್ಯ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಸುಬ್ರಹ್ಮಣ್ಯ ಭಟ್ ಮಹಿಮಾರವರ ಮನೆಗೆ ನುಗ್ಗಲು ಯತ್ನಿಸಿದ. ಆತ ಮನೆಯ ಕಾರಿಡಾರಲ್ಲಿ ಇರುವುದು ಮನೆಯವರ ಗಮನಕ್ಕೆ ಬಂದು ಅವರು ಕಳ್ಳ ಕಳ್ಳ ಎಂದು ಬೊಬ್ಬೆ ಹಾಕಿ ಅಕ್ಕಪಕ್ಕದ ಮನೆಯವರನ್ನು ಕರೆದರಲ್ಲದೆ, ಬಾಗಿಲು ತೆರೆದು ಹೊರ ಹೋಗಿ ಆತನನ್ನು ಹಿಡಿಯಲು ಯತ್ನಿಸಿದರು.
ಶಂಕಿತ ಕಳ್ಳನನ್ನು ಹಿಡಿಯುವ ವೇಳೆ ಗಾಯಗೊಂಡ ಅನಂತ್ ಭಟ್
ಆ ವೇಳೆ ಆತ ಸುಬ್ರಹ್ಮಣ್ಯ ಭಟ್ರ ಮೇಲೆ ಧಾಳಿಗೆ ಯತ್ನಿಸಿ ಇವರು ತಪ್ಪಿಸಿ ಕೊಂಡಾಗ ಕಂಪೌಂಡ್ ಹಾರಿ ಪಕ್ಕದ ರಬ್ಬರ್ ಗುಡ್ಡೆಯಲ್ಲಿ ಅಡಗಿದ. ಅಷ್ಟರಲ್ಲಿ ಅಲ್ಲಿ ಸೇರಿದ ಪಕ್ಕದ ಮನೆಯ ಶೇಖರ್ ಚೋಡಿಪಣೆ, ಅನಂತ್ ಭಟ್ ಮತ್ತಿತರರು ಪೋಲೀಸರಿಗೆ ತಿಳಿಸಿದರಲ್ಲದೆ, ಅವರು ಬಂದ ಕೂಡಲೇ ಅನುಮಾನಾಸ್ಪದ ವ್ಯಕ್ತಿಯನ್ನು ಹಿಡಿಯಲು ಮುಂದಾದರು. ಆ ವೇಳೆ ಅನಂತ ಭಟ್ರವರ ಕಾಲಿಗೆ ಏಟು ತಗಲಿತು. ಇವರ ಉರುಡಾದ ವೇಳೆ ಪೋಲೀಸರು ಆತನನ್ನು ಹಿಡಿದರು. ವಿಚಾರಣೆಯ ವೇಳೆ ಆತ ಗದಗ ಮೂಲದವನೆಂದೂ, ಮಾನಸಿಕ ಅಸ್ವಸ್ಥನೆಂದೂ ತಿಳಿದು ಬಂದು ಆತನನ್ನು ಬಿಟ್ಟರೆಂದು ತಿಳಿದು ಬಂದಿದೆ. ಆದರೆ ಆತನನ್ನು ಬಿಟ್ಟ ಬಗ್ಗೆ ಆತನನ್ನು ಹಿಡಿಯಲು ಸೇರಿದ ಮನೆಯವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.