ನ.ಪಂ.ಅಧ್ಯಕ್ಷ ಮತ್ತು ಮುಖ್ಯಾಧಿಕಾರಿ ಮಧ್ಯೆ ವೈಮನಸ್ಸು

Advt_Headding_Middle
Advt_Headding_Middle

 

ನ.ಪಂ. ಸಭೆಯಲ್ಲಿ ಬಹಿರಂಗ : ಸಭೆಯ ಅರ್ಧಭಾಗ ಇದೇ ವಿಷಯ ಚರ್ಚೆ

 

ಸುಳ್ಯ ನಗರ ಪಂಚಾಯತ್ ಆಡಳಿತದ ಅಭಿವೃದ್ಧಿಯ ಬಗ್ಗೆ ಕನಸು ಕಂಡಿರುವ ಸುಳ್ಯದ ಜನತೆಯ ಬಹು ಮುಖ್ಯ ಕಚೇರಿ ನಗರ ಪಂಚಾಯತ್ ಸುಳ್ಯ ಇದರ ಸಾಮಾನ್ಯ ಸಭೆಯ ವೇದಿಕೆ ಇಂದು ಅಧ್ಯಕ್ಷ ಮತ್ತು ಮುಖ್ಯಾಧಿಕಾರಿಗಳ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪದ ವೇದಿಕೆಯಾಗಿ ಮಾರ್ಪಟ್ಟಿತ್ತು. ಸಭೆಯ ಸರಿ ಸುಮಾರು ಅರ್ಧ ಭಾಗ ಇದೇ ವಿಚಾರದಲ್ಲಿ ಚರ್ಚೆ ನಡೆದು ಬಳಿಕ ವಿಪಕ್ಷ ಸದಸ್ಯರ ಮಧ್ಯ ಪ್ರವೇಶದಿಂದ ಒಂದು‌ ಹಂತದ ತೆರೆ ಬಿತ್ತು.

 

ಸಭೆ ಆರಂಭದಲ್ಲಿ ಅಧ್ಯಕ್ಷ, ಸದಸ್ಯರೆಲ್ಲರೂ ಸಭೆಗೆ ಬಂದರೂ ಮುಖ್ಯಾಧಿಕಾರಿಗಳು ಬಂದಿರಲಿಲ್ಲ.‌ ಸಭೆ ಇನ್ನೂ ಆರಂಭವಾಗಬೇಕೆನ್ನುವಾಗ ಮುಖ್ಯಾಧಿಕಾರಿ ಎಂ. ಆರ್. ಸ್ವಾಮಿ ಸಭಾಂಗಣಕ್ಕೆ ಬಂದು ಒಮ್ಮೆ ಸದಸ್ಯರು ಕುಳಿತುಕೊಳ್ಳುವತ್ತ ಹೋದರು. ಬಳಿಕ ತಿರುಗಿ ವೇದಿಕೆ ಬಳಿ ಬಂದು ಮುಖ್ಯಾಧಿಕಾರಿ ಗಳಿರುವ ಚಯರನ್ನು ಎಳೆದು ಕೆಳಗೆ ಅಧಿಕಾರಿಗಳು ಕುಳಿತುಕೊಳ್ಳುವಲ್ಲಿ ಇಟ್ಟು ಕುಳಿತರು. ಮುಖ್ಯಾಧಿಕಾರಿ ತಮ್ಮ ಖಾಯಂ ಜಾಗ ಬಿಟ್ಟು ಪರ್ಯಾಯ ಸ್ಥಳದಲ್ಲಿ ಕುಳಿತಿದ್ದರಿಂದ ಅಧ್ಯಕ್ಷ – ಮುಖ್ಯಾಧಿಕಾರಿ ನಡುವೆ ನಡೆದ ಗುದ್ದಾಟ ಸಭೆಯಲ್ಲಿ ಗೊಣಗಲ್ಪಟ್ಟಿತು.

 

ಸಭೆ ಆರಂಭವಾಗುತ್ತಿದ್ದಂತೆ ಮುಖ್ಯಾಧಿಕಾರಿ ಕೆಳಗಡೆ ಕುಳಿತಿದ್ದ ಮುಖ್ಯಾಧಿಕಾರಿ ಯವರನ್ನು ನೋಡಿ, ವಿಪಕ್ಷ ನಾಯಕ ಎಂ.ವೆಂಕಪ್ಪ ಗೌಡರು, ಮುಖ್ಯಾಧಿಕಾರಿ ಯವರೇ ನಿಮ್ಮ ಮುನಿಸು ಏನೆ ಇರಬಹುದು. ಅದರ ಬಗ್ಗೆ ಹೇಳಲು ಅವಕಾಶ ನೀಡೋಣ. ನೀವು ನಿಮ್ಮ ಜಾಗದಲ್ಲಿ ಬಂದು ಕುಳಿತು ಕೊಳ್ಳಿ ಎಂದು ಕೇಳಿಕೊಂಡರು. ಬಳಿಕ ಮುಖ್ಯಾಧಿಕಾರಿ ಯವರು ತಮ್ಮ ಮೊದಲಿನ ಜಾಗಕ್ಕೆ ಬಂದು ಕುಳಿತರು.

ಆಗ ಮಾತನಾಡಿದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ರು ಆಡಳಿತಾತ್ಮಕ ವಿಚಾರದಲ್ಲಿ ನೀವು ನಮಗೆ ಸಲಹೆ ನೀಡಬೇಕು. ನಿನ್ನೆ ಸಂಜೆ ತನಕ ಯಾವುದೇ ಗೊಂದಲಗಳಿರಲಿಲ್ಲ.‌ ಇಂದು ನಡೆದಿರುವುದು. ಟ್ಯಾಕ್ಸ್ ಸಂಗ್ರಹವಾಗದಿರುವ ಕುರಿತು ಕೇಳಿದ್ದೇ.‌ ನಾನು ಯಾರನ್ನೋ ರಕ್ಷಿಸುತ್ತಿದ್ದೇನೆ. ಯಾರದೋ ಪರವಾಗಿ ಮಾತನಾಡುತ್ತೇನೆ ಎಂಬ ಸಂಶಯ ಮುಖ್ಯಾಧಿಕಾರಿ ಗಳಿಗಿದೆ ಎಂದು ಮಾತು ಮುಂದುವರೆಸಿ,ನಾವು ಹೇಳಿದ ಯಾವುದೇ ಕೆಲಸ ಮಾಡುತ್ತಿಲ್ಲ. ಸಾಮಾನ್ಯ ಸಭೆಗೆ ನಾನು ಹಾಜರಾಗುವುದಿಲ್ಲ ಎಂದು ಮುಖ್ಯಾಧಿಕಾರಿಯವರು ಹೇಳುತ್ತಿದ್ದಾರೆಂದು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಅಧ್ಯಕ್ಷರು ತಮ್ಮ ಕೆಲಸ ಮಾಡದೆ ಕೆಲವು ಸಿಬ್ಬಂದಿಗಳ ಗುಸುಗುಸು ಚಾಡಿ ಮಾತುಗಳಿಗೆ ಆದ್ಯತೆ ನೀಡಿ ಅದರಲ್ಲಿಯೂ ನಗರ ಪಂಚಾಯತಿಯ ಬಹುತೇಕ ವಿಭಾಗಗಳನ್ನು ನಿರ್ವಹಿಸುವ ಸಿಬ್ಬಂದಿ ಶಶಿಕಲಾ ರವರ ಚಾಡಿ ಮಾತನ್ನು ಕೇಳುತ್ತಿದ್ದಾರೆ ಎಂದು ಆಕ್ರೋಶಿತಗೊಂಡು,ನಮ್ಮ ಮೇಲೆ ಸವಾರಿ ಮಾಡುತ್ತಾರೆ ನಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದರು. ನಗರ ಪಂಚಾಯತ್ ಎದುರಿನಲ್ಲಿ ತುಂಬಿರುವ ಕಸವನ್ನು ತೆರವು ಮಾಡಲು, ಮೀನು ಮಾರುಕಟ್ಟೆಯ ನಷ್ಟವನ್ನು ತಪ್ಪಿಸಲು ಪ್ರಯತ್ನಿಸದೆ ಅಧಿಕಾರಿಗಳ ಮೇಲೆ ಸವಾರಿ‌ ಮಾಡುತ್ತಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಮುಖ್ಯಾಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ.ಆಡಳಿತದ ಜೊತೆ, ಸಿಬ್ಬಂದಿಗಳ ಸಹಕರಿಸುತ್ತಿಲ್ಲ, ಅಧಿಕಾರಿ ಮತ್ತು ಸಿಬ್ಬಂದಿಗಳ ಮಧ್ಯೆ ಹೊಂದಾಣಿಕೆ ಇಲ್ಲ ಎಂದು ಹೇಳಿದರು. ಹೀಗೆ ಅಧ್ಯಕ್ಷರ ಮತ್ತು ಮುಖ್ಯಾಧಿಕಾರಿಯ ಮಧ್ಯೆ ಹಲವು ಹೊತ್ತು ಮಾತಿನ ಚಕಮಕಿ ಮುಂದುವರಿಯಿತು. ಅಧ್ಯಕ್ಷ-ಮುಖ್ಯಾಧಿಕಾರಿ ಮಧ್ಯೆಯ ವಾಗ್ವಾದ ನೋಡಿ ಪ್ರತಿಪಕ್ಷ ಸದಸ್ಯ ವೆಂಕಪ್ಪ ಗೌಡ ಇಬ್ಬರನ್ನು ಸಮಾಧಾನಪಡಿಸುವ ಕೆಲಸ ಮಾಡಿದರು. ತಾವಿಬ್ಬರೂ ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವವರಾಗಿದಿರಿ. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಕೆಲಸ ಕಾರ್ಯಗಳನ್ನು ಪರಸ್ಪರ ಸಹಕರಿಸಿ ಮಾಡುವಂತೆ ಸಮಾಧಾನಪಡಿಸಿದರು. ಈ ವೇಳೆ ನಪಂ ಸದಸ್ಯ ಉಮ್ಮರ್ ಕೆಎಸ್ ರವರು ಎದ್ದುನಿಂತು ಇಬ್ಬರನ್ನು ತರಾಟೆಗೆ ತೆಗೆದುಕೊಂಡರು. ಕೊರೋನಾ ಸಂಕಷ್ಟದಿಂದ ನಗರದ ಜನತೆ ಕಂಗಾಲಾಗಿದ್ದಾರೆ. ಕುಡಿವ ನೀರಿನ ಸಮಸ್ಯೆಯಿಂದ ಜನತೆ ಪರದಾಡುತ್ತಿದ್ದಾರೆ. ನಮ್ಮನ್ನು ಅಭಿವೃದ್ಧಿಯ ಸಭೆಗೆ ಕರೆದು ತಾವು ತಾವೇ ಈ ರೀತಿ ಕಚ್ಚಾಡಿ ಕೊಂಡಿದ್ದರೆ ಇಲ್ಲಿ ನಮ್ಮ ಪಾತ್ರ ಏನು ಎಂದು ಕೇಳಿದರು. ಮತ್ತೋರ್ವ ವಿಪಕ್ಷ ಸದಸ್ಯ ಶರೀಫ್ ಕಂಠಿ ಮಾತನಾಡಿ ನಾವು ರಾಜಕೀಯ ವ್ಯಕ್ತಿ ಗಳಾಗಿದ್ದರೆ ನಮಗಿಂತ ಹೆಚ್ಚಿನ ರಾಜಕೀಯ ಸಿಬ್ಬಂದಿಗಳ ನಡುವೆ ನಡೆಯುತ್ತಿದೆ ಎಂದು ಹೇಳಿದರು. ಮೊದಲು ಇದನ್ನು ಸರಿಪಡಿಸಿ ಆಗ ಮಾತ್ರ ನಗರ ಪಂಚಾಯತ್ ಸರಿಯಾಗಿ ನಡೆಯಲು ಸಾಧ್ಯ ಎಂದು ಹೇಳಿದರು. ಈ ವೇಳೆ ಬೇಸತ್ತ ಆಡಳಿತ ಪಕ್ಷ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ವಾಗ್ವದಕ್ಕೆ ತೆರೆ ಎಳೆದ ಅಧ್ಯಕ್ಷರು ಅಧಿಕಾರಿ, ಸಿಬ್ಬಂದಿಗಳ ಮಧ್ಯೆ ಇರುವ ಭಿನ್ನಾಭಿಪ್ರಾಯದ ಬಗ್ಗೆ ಚರ್ಚಿಸಿ‌ ಪರಿಹಾರ ಕಂಡು ಕೊಳ್ಳಲು ಎ.27ರಂದು ಎಲ್ಲಾ ಸದಸ್ಯರ, ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿಶೇಷ ಸಭೆ ನಡೆಸಲಾಗುವುದು ಎಂದು ಹೇಳಿದರು. ಸಭೆಯ ಮಧ್ಯೆ ಸದಸ್ಯರು ಕೇಳಿದ ಹಲವು ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಸರಿಯಾದ ಉತ್ತರ ಸಿಗಲಿಲ್ಲ.‌ ಕಸದ ವಿಷಯ ಬಂದಾಗ ಮುಖ್ಯಾಧಿಕಾರಿ‌ ಮತ್ತು ಇಂಜಿನಿಯರ್‌ ಶಿವಕುಮಾರ್ ಮಧ್ಯೆಯೇ ಚರ್ಚೆ ನಡೆಯಿತು. ತೆರಿಗೆ ವಿಷಯದಲ್ಲಿ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಶಶಿಕಲಾ ಮಧ್ಯೆ ವಾಗ್ವಾದ ನಡೆಯಿತು. ಹೀಗಾದರೆ ಸಭೆ ನಡೆಸುವುದು ಹೇಗೆ ಎಂದು ಅಧ್ಯಕ್ಷ ವಿನಯಕುಮಾರ್ ಅಸಹನೆ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು. ಆಡಳಿತ ಅಧಿಕಾರಿಗಳ ಮಧ್ಯೆಯ ಭಿನ್ನಾಭಿಪ್ರಾಯಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿಗಳ ಜೊತೆ ಹೊಂದಾಣಿಕೆ ಇಲ್ಲದಿದ್ದರೆ ಆಡಳಿತ ಪಕ್ಷಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಅಧಿಕಾರ ವಹಿಸಿ ಆರು ತಿಂಗಳಾದರೂ ಯಾವುದೇ ಅಭಿವೃದ್ಧಿ ಕೆಲಸ ನಗರ ಪಂಚಾಯತ್ ನಿಂದ ಆಗುತ್ತಿಲ್ಲ ಎಂದು ಜನರು ಭರವಸೆ ಕಳೆದುಕೊಂಡಿದ್ದಾರೆ ಎಂದು ವಿಪಕ್ಷ ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ ಹೇಳಿದರು. ನಂತರ ಸಭೆಯಲ್ಲಿ ಮೀನು ಮಾರುಕಟ್ಟೆಯ ವಿಷಯದ ಬಗ್ಗೆ, ಕಟ್ಟಡ ತೆರಿಗೆಯ ಬಗ್ಗೆ, ಕುಡಿಯುವ ನೀರಿನ ಬಗ್ಗೆ ಚರ್ಚೆಗಳು ನಡೆಯಿತು. ವೇದಿಕೆಯಲ್ಲಿ ನ ಪಂ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯಕ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.