ಕೊಡಿಯಾಲಬೈಲು ಸ್ಮಶಾನದ ವಿಚಾರವಾಗಿ ಮತ್ತೆ ಪ್ರತಿಭಟನೆ

Advt_Headding_Middle

ಜನರಿಗೆ ಸ್ಪಂದಿಸಲು ಸಾಧ್ಯವಾಗುವುದಿಲ್ಲವಾದರೆ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ :  ಸ್ಥಳೀಯರ ಒತ್ತಾಯ
ಕೊಡಿಯಾಲಬೈಲು ಹಿಂದೂ ರುದ್ರಭೂಮಿಯಲ್ಲಿ ಉಬರಡ್ಕ ಗ್ರಾಮದಿಂದ ಹೊರಗಿನ ಶವಗಳನ್ನು ಸುಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೊಡಿಯಾಲಬೈಲು ನಿವಾಸಿಗಳು  ನಿನ್ನೆ ಪುನಹ ಪ್ರತಿಭಟನೆ ನಡೆಸಿದರು.
ಮೊನ್ನೆ ರಾತ್ರಿ ಮೊಗರ್ಪಣೆಯಲ್ಲಿ ಬಸ್ಸು ಬೈಕ್ ಅಪಘಾತದಲ್ಲಿ ಮೃತರಾದ ರಾಜು ಎಂಬವರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ನಿನ್ನೆ ಸಂಜೆ ಕೊಡಿಯಾಲಬೈಲಿನ ಹಿಂದೂ ರುದ್ರಭೂಮಿಗೆ ತರಲಾಗಿತ್ತು.  ಮೃತದೇಹ ಸ್ಮಶಾನಕ್ಕೆ ಬಂದುದನ್ನು  ತಿಳಿದ ಸ್ಥಳೀಯರು ನಾಗರಿಕ ಹೋರಾಟ ಸಮಿತಿಯ ಕಾರ್ಯದರ್ಶಿ ರಾಜೇಶ್ ರವರ ನೇತೃತ್ವದಲ್ಲಿ ಒಟ್ಟಾಗಿ ಸ್ಮಶಾನಕ್ಕೆ ಹೋಗುವ ದಾರಿಯ ಬಳಿ ಜಮಾಯಿಸಿದರು.

ಕೊಡಿಯಾಲಬೈಲು ಬಸ್ ನಿಲ್ದಾಣದ ಬಳಿ ಹಿಂದೂ ರುದ್ರಭೂಮಿ ಕಡೆಗೆ ತೆರಳುವ ರಸ್ತೆಯ ಬದಿಯಲ್ಲಿ ಜಮಾಯಿಸಿದ ಜನರು ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ ರವರಿಗೆ ಫೋನಾಯಿಸಿ  ತಮ್ಮ ಆಕ್ಷೇಪವನ್ನು ಹೇಳಿಕೊಂಡರು.

ಆ ವೇಳೆ ಉಪಾಧ್ಯಕ್ಷರು ” ಮೃತದೇಹ ಸ್ಮಶಾನಕ್ಕೆ ಬರುವ ವಿಚಾರ ತಮಗೆ ತಿಳಿದಿರಲಿಲ್ಲ. ಪಿಡಿಒರವರು ಅನುಮತಿ ಕೊಟ್ಟ ಮೇರೆಗೆ ಅವರು ಬಂದಿರಬೇಕು”  ಎಂದು ಹೇಳಿದರೆನ್ನಲಾಗಿದೆ. ಇದರಿಂದ  ಕೋಪಗೊಂಡ ಸ್ಥಳೀಯರು ” ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೆ ತಿಳಿಯದೆ ಪಿಡಿಒ ಶವಗಳನ್ನು ಬರಲು ಬಿಡದಿದ್ದರೆ ನೀವು ಯಾಕೆ  ಪಂಚಾಯತ್ ಸದಸ್ಯರುಗಳಾಗಿರಬೇಕು ? ರಾಜೀನಾಮೆ ನೀಡಿ ಹೋಗಿ ” ಎಂದು ಜನರು ಆಕ್ರೋಶದಿಂದ ಹೇಳಿದರೆಂದು ತಿಳಿದು ಬಂದಿದೆ.

  ” ಸ್ಥಳಕ್ಕೆ ಕೂಡಲೇ ಬಂದು ಈ ಸಮಸ್ಯೆಯನ್ನು ಇತ್ಯರ್ಥ ಮಾಡಿ ಕೊಡಬೇಕು”  ಎಂದು ಸ್ಥಳೀಯರು ಆಗ್ರಹಿಸಿದರು. ಪಂಚಾಯತ್ ಸಿಬ್ಬಂದಿಯನ್ನು ಕಳುಹಿಸುವುದಾಗಿ ಉಪಾಧ್ಯಕ್ಷರು ಹೇಳಿದಾಗ  ” ಬರುವುದಿದ್ದರೆ ನೀವು ಬನ್ನಿ.  ಸಿಬ್ಬಂದಿ ಬಂದರೆ ನಮ್ಮ ಸಮಸ್ಯೆ ಪರಿಹರಿಸಲಾಗುವುದಿಲ್ಲ ” ಎಂದು ಸ್ಥಳೀಯರು ಹೇಳಿದರು.

*ಉಪಾಧ್ಯಕ್ಷರ ಆಗಮನ* ಸ್ಥಳೀಯರ ಆಗ್ರಹದ ಮೇರೆಗೆ ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ ರವರು ಸ್ಮಶಾನಕ್ಕೆ ಭೇಟಿ ಕೊಟ್ಟರು. ಆ ವೇಳೆಗೆ ಕತ್ತಲಾಗಿತ್ತು.  ಪ್ರತಿಭಟನೆಯ ಸ್ಥಳ  ಕೇಳಗೆ ರಸ್ತೆ ಬದಿಯಿಂದ ಮೇಲ್ಗಡೆ ಸ್ಮಶಾನದ ಎದುರು ಭಾಗಕ್ಕೆ ಸ್ಥಳಾಂತರಗೊಂಡಿತ್ತು.

ಆ ವೇಳೆ ನಾಗರಿಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಸುರೇಶ್ ಎಂ ಎಚ್ ರವರು ಕೂಡ ಸ್ಥಳಕ್ಕೆ ಬಂದಿದ್ದರು.  ಕಾರ್ಯದರ್ಶಿ ರಾಜೇಶ್,  ಗೌರವ ಸಲಹೆಗಾರ ಉದಯಕುಮಾರ್, ಸ್ಥಳೀಯರಾದ ಪುಷ್ಪರಾಣಿ  ಮತ್ತಿತರರು, 25 ಕ್ಕೂ ಹೆಚ್ಚು ಮಂದಿ ಸ್ಥಳೀಯರು  ಸ್ಥಳದಲ್ಲಿ ಸೇರಿದ್ದರು.
” ಇಲ್ಲಿ ನಿರಂತರ ಶವ ಸುಡುತ್ತಿರುವುದರಿಂದ ಸ್ಥಳೀಯರಿಗೆ ಆಗುತ್ತಿತುವ ತೊಂದರೆಯ ಬಗ್ಗೆ ನಾವು ಪಂಚಾಯತ್ ಗೆ ಮನವಿ ಕೊಟ್ಟಿದ್ದೇವೆ. ಆದರೆ ಪಂಚಾಯತ್ ನಿಂದ ಏನೂ ಕ್ರಮ ಕೈಗೊಂಡಿಲ್ಲ. ವಾರ್ಡಿನ ಯಾವ ಸದಸ್ಯರೂ ಇಲ್ಲಿ ಬಂದು ನಮ್ಮನ್ನು ವಿಚಾರಿಸಿಲ್ಲ. ಸುಳ್ಯದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತೀರಿ. ಇಲ್ಲಿಗೆ ಬರುವುದಿಲ್ಲ ” ಎಂದು  ಸ್ಥಳೀಯ ಜನರು ಹೇಳಿದಾಗ ” ಇವತ್ತು ಪಂಚಾಯತ್ ಮೀಟಿಂಗ್ ನಡೆದು ಈ ಬಗ್ಗೆ ಚರ್ಚಿಸಲಾಗಿದೆ. ದಿನಕ್ಕೆ ಹೆಚ್ಚೆಂದರೆ ಎರಡು ಶವ ಮಾತ್ರ ಇಲ್ಲಿ ಸುಡಬಹುದೆಂದು ನಿರ್ಧರಿಸಲಾಗಿದೆ. ನಿರ್ಣಯದ ಪ್ರತಿಯನ್ನು ಹಿಂಬರಹವಾಗಿ ನೀಡಲು ತಿಳಿಸಿದ್ದೇವೆ. ಒಂದೆರಡು ದಿನದಲ್ಲಿ ನಿಮಗೆ ಹಿಂಬರಹ ನಿಮಗೆ ಬರುತ್ತದೆ. ” ಎಂದು ಉಪಾಧ್ಯಕ್ಷರು ಉತ್ತರಿಸಿದರು.
” ಶವ ಸುಟ್ಟ  ವಾಸನೆ ಬರುವುದನ್ನು ಮತ್ತು ಶವ ಸುಟ್ಟ ಹೊಗೆ  ಪಕ್ಕದ ಮನೆಗಳಿಗೆ ಬರುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲವಾದರೆ ಇಲ್ಲಿ ಶವಗಳನ್ನು ಯಾಕೆ ಸುಡುವ ವ್ಯವಸ್ಥೆ ಮಾಡುತ್ತೀರಿ ? ಹೊರಗಿನ ಶವಗಳನ್ನು ಮಾತ್ರವಲ್ಲ. ಗ್ರಾಮದ ಒಳಗಿನ ಶವಗಳನ್ನೂ ಸುಡಲಾಗದಂತಹ   ಪರಿಸ್ಥಿತಿ ಬರುತ್ತದೆ ” ಎಂದು ನಾಗರಿಕ ಹೋರಾಟ ಸಮಿತಿ ಪ್ರಮುಖರು  ಎಚ್ಚರಿಸಿದರು. ನಾವು ಈಗಾಗಲೇ ಪಂಚಾಯಿತಿಗೆ ಹಲವು ಬಾರಿ ಮನವಿಗಳನ್ನು ಮಾಡಿದ್ದರೂ ನಮಗೆ ಸೂಕ್ತ ಸ್ಪಂದನೆ ಕಂಡು ಬರುತ್ತಿಲ್ಲ. 1ತಿಂಗಳಿಂದ ನಮ್ಮ ಅಹವಾಲನ್ನು ನಾವು ಹೇಳಿಕೊಳ್ಳುತ್ತಿದ್ದರೂ ಸ್ಪಂದನವಿಲ್ಲದಿದ್ದರೆ  ಈ ವಾರ್ಡಿನ ಪಂಚಾಯತ್ ಸದಸ್ಯರು ನಮಗೆ ಯಾಕೆ ಬೇಕು ” ಎಂದು ಜನರು ಆಕ್ರೋಶ ವ್ಯಕ್ತಪಡಿಸತೊಡಗಿದಾಗ ಪಂಚಾಯತ್ ನಲ್ಲಿ  ಇದರ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿ ಉಪಾಧ್ಯಕ್ಷರು ಅಲ್ಲಿಂದ ತೆರಳಿದರು.

*ಪೋಲೀಸರ ಆಗಮನ*
ಇದೇ ವೇಳೆಗೆ  ಸ್ಮಶಾನದ ಎದುರುಗಡೆ ಜನ ಜಮಾಯಿಸಿರುವುದನ್ನು ನೋಡಿ ಶವದಹನಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ಸುಳ್ಯದಿಂದ ಪೊಲೀಸರು  ಸ್ಥಳಕ್ಕೆ ಆಗಮಿಸಿದರು.  ಅವರಲ್ಲಿ ಎಂ.ಎಚ್.ಸುರೇಶರು   ” ನಾವು ಈಗ ಬಂದಿರುವ ಶವದ ಅಂತ್ಯಸಂಸ್ಕಾರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ.  ನಮ್ಮ ಪ್ರತಿಭಟನೆ ಏನಿದ್ದರೂ ಪಂಚಾಯತಿನವರ ವಿರುದ್ಧ.  ಪಂಚಾಯತ್ ನವರಿಗೆ, ತಹಶೀಲ್ದಾರರಿಗೆ ಮನವಿಗಳನ್ನು ನೀಡಲಾಗಿದೆ.  ಸೂಕ್ತ ಕ್ರಮ ಕೈಗೊಂಡು ನಮ್ಮ ಮನೆಗಳಿಗೆ ಹೊಗೆ ಬಾರದಂತೆ ಮತ್ತು ವಾಸನೆ ಬಾರದಂತೆ ಕ್ರಮ ಕೈಗೊಳ್ಳಬೇಕು ಮತ್ತು ಹೊರಗಿನ ಶವಗಳನ್ನು ಇಲ್ಲಿ ತಂದು ಸುಡಬಾರದು.  ಸುಳ್ಯ ನಗರದಲ್ಲಿ 3 ಸ್ಮಶಾನಗಳಿವೆ.   ಸುಳ್ಯ ಗ್ರಾಮದೊಳಗಿನವರನ್ನು  ಅಲ್ಲಿಗೆ ತೆಗೆದುಕೊಂಡು ಹೋಗಲಿ. ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ ಅಲ್ಲಿಯ ಸ್ಥಳೀಯಾಡಳಿತ  ಸರಿಯಾದ ವ್ಯವಸ್ಥೆ ಮಾಡಲಿ. ಅದು ಬಿಟ್ಟು ಎಲ್ಲಾ ಶವಗಳನ್ನು ಇಲ್ಲಿ ತಂದು ಸುಟ್ಟು  ಅಕ್ಕಪಕ್ಕದಲ್ಲಿರುವ ಮನೆಯವರಿಗೆ ಸಮಸ್ಯೆ ಉಂಟುಮಾಡುವುದು ಸರಿಯಲ್ಲ ಅಲ್ಲವೇ ? ” ಎಂದು ಹೇಳಿದರು. ” ನಾವೂ ನಾಳೆ ಸಾಯುವವರೇ.   ಆದ್ದರಿಂದ ಸ್ಮಶಾನದೊಳಗೆ ಬಂದ ಶವಗಳನ್ನು ಸುಡಲು ನಾವು ಅಡ್ಡಿ ಮಾಡುವವರಲ್ಲ. ಪಂಚಾಯತ್ ನವರು ನಮ್ಮ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಅಹವಾಲು ” ಎಂದು ಸುರೇಶ್, ರಾಜೇಶ್ ಮತ್ತಿತರರು ಹೇಳಿದರು.
ಸ್ಮಶಾನದ ಬಾಗಿ ಬಳಿ ಈ ಘಟನೆಗಳು ನಡೆಯುತ್ತಿರುವಾಗ ಒಳಗೆ ಮೃತದೇಹದ ಅಂತ್ಯಕ್ರಿಯೆ ನಡೆಯುತ್ತಿತ್ತು. ಕೊಪ್ಪಳದಿಂದ ಬಂದಿದ್ದ  ಮೃತರ ಸಂಬಂಧಿಕರ ಆಕ್ರಂದನ  ಕರುಳು ಕಿವಿಚುವಂತೆ ಕೇಳಿಬರುತ್ತಿತ್ತು.
ಶವ ದಹನಕ್ಕೆ ಊರವರ ವಿರೋಧ ಇಲ್ಲದಿರುವುದನ್ನು ಮನಗಂಡ ಬಳಿಕ ಪೊಲೀಸರು ಅಲ್ಲಿಂದ ತೆರಳಿದರು.
ಪಂಚಾಯತ್ ನವರು ಈ ಸ್ಮಶಾನದಲ್ಲಿ ಶವ ಸುಡುವ ವಿಚಾರವಾಗಿ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ನಿರ್ಧಾರವನ್ನು ನಾಗರಿಕ ಹೋರಾಟ ಸಮಿತಿ ಕೈಗೊಂಡಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.