“ನಿಸರ್ಗದ ಜಲಧಾರೆಯ ಸೊಬಗು”..

Advt_Headding_Middle

 

✍️ ಡಿ.ಕೆ.ಕೊಡೆಂಕಿರಿ

ಮೊನ್ನೆ ದಿನಕರ್ ಸರ್ ಬಂದು ಧನಂಜಯರೆ ನಿಮ್ಮ ಹೆಸರೊಂದು ಬಿದ್ದಿದೆ ಎಂದರು. ನಾನು ಆಶ್ಚರ್ಯದಿಂದ…! ಅವರತ್ತ ನೋಡಿದೆ,ಈಗಿನ ಕಾಲದಲ್ಲಿ ಯಾವಾಗ ಎಲ್ಲೆಲ್ಲಿ ಹೆಸರು ಬೀಳುತ್ತದೆ ಯಾರಿಗೆ ಗೊತ್ತು..! ಹಾಗಾಗಿ ಅವರತ್ತ ದಿಟ್ಟಿಸಿದ್ದೆ. ಮತ್ತೆ ಅವರು ನಾಳೆಯ ನಮ್ಮ ಪ್ರವಾಸದ ಲಿಸ್ಟ್ ನಲ್ಲಿ ನಿಮ್ಮ ಹೆಸರು ಕೂಡ ಇದೆ ಎಂದಾಗ ನೆಮ್ಮದಿಯಾಗಿತ್ತು. ಖುಷಿಯಾಗಿ ಓಕೆ ಅಂದೆ.
ಮಾರನೇ ದಿನ ಎದ್ದು ನೋಡಿದರೆ ಧೋ.. ಎಂದು ಸುರಿಯುತ್ತಿರುವ ಧಾರಾಕಾರ ಮಳೆ. ಚಾ ಕುಡಿದು ಹೊರಟು ನಿಂತಾಗ ಅಮ್ಮ ಗುನುಗುತ್ತಿದ್ದರು. ಈ ಜಡಿಮಳೆಗೂ ಪ್ರವಾಸ ಬೇಕಿತ್ತಾ? ನಿಮಗೆ, ಸುಮ್ಮನೆ ಮನೆಯಲ್ಲಿ ಕೂರುವುದು ಬಿಟ್ಟು ಎಂದು. ಅಮ್ಮನಿಗೆ ಬಾಯ್.. ಹೇಳಿ ಮನೆಯಿಂದ ಹೊರಡುವಾಗ ಬರುತ್ತಿದ್ದ ಹನಿ-ಹನಿ ಮಳೆ ಶಾಲೆ ತಲುಪುತಿದ್ದಂತೆ ರಭಸವಾಗಿತ್ತು. ಸುರಿಯುವ ಮಳೆಯನ್ನು ಲೆಕ್ಕಿಸದೆ ಪ್ರವಾಸದ ಖುಷಿಯಲ್ಲಿ ಶಿಕ್ಷಕರೆಲ್ಲರೂ ಹೊರಟು ನಿಂತಿದ್ದರು. ಕಿರಣ್ ಅಣ್ಣ ಬಸ್ಸು ತಂದು ನಿಲ್ಲಿಸಿದಾಗ ಸೀಟಿಗಾಗಿ ಟವೆಲ್ ಬಿದ್ದಾಗಿತ್ತು..! ಶಾಲಾ ದಿನದಿಂದಲೇ ನಾವು ಹಿಂದಿನ ಬೆಂಚಿನ ಹುಡುಗರು. ಈಗ ಬಸ್ಸಿನಲ್ಲಿಯೂ ನಮಗೆ ಅದೇ ಸೀಟು ಒಳಿದಿತ್ತು. ಲೇಡಿಸ್ ಫಸ್ಟ್ ಎನ್ನುವ ಸಮಾನತೆಯ ತತ್ವದಂತೆ ಎದುರಿನ ಸೀಟುಗಳೆಲ್ಲವೂ ಮಹಿಳಾ ಶಿಕ್ಷಕಿಯರಿಗೆ ಮೀಸಲಾಗಿತ್ತು. ಅಧ್ಯಕ್ಷರ ಆಗಮನವಾಗುತ್ತಿದ್ದಂತೆ ಪ್ರವಾಸದ ಜವಾಬ್ದಾರಿ ಹೊತ್ತಿದ್ದ ದೈಹಿಕ ಶಿಕ್ಷಕ ದಿನಕರ್ ಸರ್ ಬಸ್ ಕಂಡಕ್ಟರಾಗಿ..! ಬದಲಾಗಿ ರೈಟ್.. ರೈಟ್.. ಎಂದು ವಿಜಲ್ ಹೊಡೆದಾಗ ಕಿರಣಣ್ಣನ ಬಸ್ ಹೊರಟಾಗಿತ್ತು. ಈಗ ನಾವು ಹೊರಟದ್ದು ಎಲ್ಲಿಗೆ? ಎಂದು ಹೇಳಲಿಲ್ಲವಲ್ಲ..! ಹೌದು ನಾವು ಪ್ರಕೃತಿಯ ಸೌಂದರ್ಯ ಸವಿಯುತ್ತ ಪಕ್ಕದ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಲ್ಲಳ್ಳಿ ಜಲಪಾತ ನೋಡಲೆಂದು ಶಾಲೆಯ ಶಿಕ್ಷಕರೆಲ್ಲರೂ ಒಟ್ಟಾಗಿ ಹೊರಟಿದ್ದು.
ಬಸ್ ಸುಬ್ರಹ್ಮಣ್ಯದ ಮೈನ್ ರೋಡ್ಗಿಳಿಯುತ್ತಿದ್ದಂತೆ ನಮ್ಮ ಕತ್ತು ನೆಟ್ಟಗಾಗಿ ಜಿರಾಫೆಯಂತೆ ಉದ್ದವಾಗಿತ್ತು. ದಿನಾ ನೋಡುತ್ತಿದ್ದ ಅಂಗಡಿಗಳನ್ನೆಲ್ಲ ಬಸ್ಸಿನೊಳಗೆ ಕುಳಿತವರು ಕಿಟಕಿಗಳಿಂದ ಇಣುಕಿ ಇಣುಕಿ ನೋಡುತ್ತಿದ್ದರು. ಯಾಕೆಂದರೆ ನಾವು ಪ್ರವಾಸಕ್ಕೆ ಹೋಗುತ್ತಿರುವುದು ಅವರಿಗೂ ಗೊತ್ತಾಗಬೇಕಲ್ವಾ..!! ಪ್ರವಾಸ ಹೋಗುವುದೆಂದರೆ ಪ್ರತಿಯೊಬ್ಬರಿಗೂ ಒಂದು ರೀತಿ ಜಂಬ ಕೂಡ ಅಲ್ವಾ..?
ಬಸ್ಸು ಕುಲ್ಕುಂದ ತಲುಪಿ ತಿರುವು ಪಡೆದುಕೊಂಡು ಡ್ರೈವರ್ ಬ್ರೇಕ್ ಹಾಕಿದಾಗ ಮತ್ತೆ ಖಾಲಿ ಇದ್ದ ನಾಲ್ಕು ಸೀಟು ಭರ್ತಿಯಾಯ್ತು. ಕಂಡಕ್ಟರ್ ಇನ್ನು ಯಾರು ಬರುವವರು ಇಲ್ಲವಲ್ಲ ಎಂದು ಕೇಳಿ ರೈಟ್… ಎಂದಾಗ ಪುನ: ಬಸ್ ನಮ್ಮನ್ನು ಹೊತ್ತು ಸಾಗುತ್ತಿತ್ತು. ಮಹಿಳಾ ಮೀಸಲಾತಿಯಂತೆ ಬಸ್ಸಿನ ಎದುರು ಸೀಟಿನಲ್ಲಿ ಕುಳಿತಿದ್ದವರು ಹರಟೆಯಲ್ಲಿ ಮಗ್ನರಾಗಿದ್ದರು. ಹಿಂದೆ ಸೀಟಿನಲ್ಲಿದ್ದ ನಾನು ಇದ್ದ ಆರೇಳು ಶಿಕ್ಷಕರೊಂದಿಗೆ ಮಾತು ಆರಂಭಿಸಿದ್ದೆ.
ಹಿಂದಿನ ಕಾಲದ ಮಕ್ಕಳ ಜೊತೆಗಿನ ಶಾಲಾ ಪ್ರವಾಸದ ರೋಚಕ ಕತೆಗಳನ್ನು ನೆನೆದು ಪುನರ್ಮನನ ಮಾಡಿಕೊಂಡು ಈಗಿನ ಶಾಲಾ ಪ್ರವಾಸ ಗಳೊಂದಿಗೆ ಹೋಲಿಕೆ ಮಾಡುತ್ತಾ ಹಿರಿಯ ಶಿಕ್ಷಕರೆಲ್ಲರೂ ಕಿರಿಯರಾಗಿದ್ದರು. ಶಾಲಾ ಮುಖ್ಯ ಶಿಕ್ಷಕಿಯವರಾದ ವಿದ್ಯಾರತ್ನ ಮೇಡಂ ಹಿರಿಯರಾಗಿದ್ದ ಕಾರಣಕ್ಕೊ ಏನೋ, ಅವರಿಗೂ ಬಸ್ಸಿನಲ್ಲಿ ಕೊನೆಯ ಸೀಟಿನಿಂದ ಎರಡು ಸೀಟ್ ಮುಂದೆ ಆಸನದ ವ್ಯವಸ್ಥೆಯಾಗಿತ್ತು. ಹೆಚ್.ಎಂ. ಕೂಡ ಪುರಾಣ ಪ್ರವಾಸ ಕಥೆಗಳ ತಮಾಷೆಯ ಕ್ಷಣಗಳನ್ನು ನೆನಪಿಸಿಕೊಂಡಾಗ ಎಲ್ಲರೂ ನಗುತ್ತಾ ಖುಷಿಯಲ್ಲಿ ಇಂದಿನ ಪ್ರವಾಸ ಸಾಗುತ್ತಿತ್ತು.
ಕುಲ್ಕುಂದ ಮೂಲಕ ದಟ್ಟ ಕಾನನದ ನಡುವಿನ ಮಾರ್ಗದಲ್ಲಿ ಸಾಗುತ್ತಿದ್ದ ಬಸ್ಸು ಬಿಸಿಲೆ ಗಡಿಚೌಡೇಶ್ವರಿ ದೇವಿಯ ದೇವಸ್ಥಾನದೆದುರು ನಿಂತಿತ್ತು. ಗುಡಿಯೆದುರು ಸ್ವಚ್ಛಂದವಾಗಿ ಹರಿಯುತ್ತಾ ಕಿರು ಜಲಪಾತದಂತೆ ಕಂಗೊಳಿಸುತ್ತಿದ್ದ ತೊರೆಯ ನೀರು ಫ್ರಿಡ್ಜ್ ನೊಳಗಿದ್ದ ನೀರಿನಂತೆ ತಂಪಾಗಿತ್ತು. ದೇವಿಗೆ ಭಕ್ತಿಯಿಂದ ಕೈಮುಗಿದು ಬಸ್ಸು ಹತ್ತಿದೆವು. ಮುಂದೆ ಸಾಗುತ್ತಿದ್ದಂತೆ ಬಸ್ಸಿನ ಹಿಂದೆಯಿಂದ ಹೊಸ ಕಾರು ಒಂದು ಬರುತ್ತಿದ್ದದನ್ನು ನೋಡಿದ ಯೋಗನಾಥರು ಅದನ್ನು ಖರೀದಿಸಲು ಸಜ್ಜಾದವರಂತೆ ಅದರ ಗುಣಲಕ್ಷಣಗಳೆಲ್ಲವನ್ನೂ ನಮ್ಮೊಳಗೆ ಚರ್ಚಿಸಿ ಆಗಿತ್ತು. ಕಾರಿನ ಮಾಲೀಕನೂ ಕೂಡ ಆ ಕಾರು ಕೊಂಡುಕೊಳ್ಳುವಾಗಲೂ ಅದರ ಬಗ್ಗೆ ಅಷ್ಟು ವಿಚಾರಿಸಿರಲಿಕ್ಕಿಲ್ಲ. ಆ ಕಾರಿನ ಹಿಂದೆಯಿಂದ ಬಂದಂತಹ ಕಾರೊಂದು ನಮ್ಮ ಬಸ್ಸನ್ನು ಹಿಂದಿಕ್ಕಿ ಮುಂದೆ ಹೋಯಿತು. ಮುಂದೆ ಹೋಗುತ್ತಿದ್ದಂತೆ ಬಸ್ಸು ನಿಲ್ಲಿಸುವಂತೆ ಡ್ರೈವರಿಗೆ ಕೈಸನ್ನೆ ಮಾಡಿ ಕಾರು ರಸ್ತೆ ಬದಿಯಲ್ಲಿ ನಿಂತಿತ್ತು. ಈ ಕಾಡಿನಲ್ಲಿ ಬಸ್ಸು ನಿಲ್ಲಿಸಿದ್ದು ಯಾರು.? ಎಂದು ಆಶ್ಚರ್ಯದಲ್ಲಿ..! ಕಿಟಕಿಯಿಂದ ಇಣುಕಿದ ಶಿಕ್ಷಕರ ಮುಖದಲ್ಲಿ ಮಂದಹಾಸ ಮೂಡಿತು. ಕಾರಿನಿಂದಿಳಿದ ನಾಲ್ಕು ಜನರಿದ್ದ ಫ್ಯಾಮಿಲಿಯೊಂದು ವಿನಯತೆಯಿಂದ ಶಿಕ್ಷಕರೆಲ್ಲರಿಗೂ ನಮಸ್ಕರಿಸುತ್ತಿತ್ತು. ನಾವೆಲ್ಲ ಯಾರಿರಬಹುದೆಂದು ನೋಡುತ್ತಿದ್ದರೆ ಇವರು ನಮ್ಮ ಹಳೆ ವಿದ್ಯಾರ್ಥಿಯೆಂದು ಹೆಚ್.ಎಂ. ಪರಿಚಯವನ್ನು ಮಾಡಿಬಿಟ್ಟಿದ್ದರು.
ಕೆಲವೊಮ್ಮೆ ಅದೃಷ್ಟಗಳು ಹೇಗೆಲ್ಲಾ ಒಲಿಯುತ್ತವೆ ನೋಡಿ..! ನಮ್ಮ ಶಾಲೆಯ ಹಳೆ ವಿದ್ಯಾರ್ಥಿಯಂತೆ, ಪದವಿ ಶಿಕ್ಷಣ ಬೆಂಗಳೂರಿನಲ್ಲಿ ಮುಗಿಸಿ ಉನ್ನತ ವ್ಯಾಸಂಗಕ್ಕೆ ಅಮೆರಿಕಗೆ ಹೊರಟಿದ್ದರು. ಊರಿನಿಂದ ಬೆಂಗಳೂರಿಗೆ ಹೊರಟು ಅಲ್ಲಿಂದ ಯು.ಎಸ್.ಎ. ಗೆ ವಿಮಾನವೇರುವುದಕ್ಕೆ ಈ ಮಾರ್ಗದಲ್ಲಿ ಸಾಗುತ್ತಿದ್ದರು. ನಾವು ಹೋಗುತ್ತಿದ್ದ ಶಾಲಾ ಬಸ್ಸನ್ನು ನೋಡಿ ಕಾರು ನಿಲ್ಲಿಸಿದ್ದರು. ಕಾಕತಾಳಿಯವಾಗಿ ಅವರಿಗೆ ಶಿಕ್ಷಕರ ಆಶೀರ್ವಾದ ದೊರೆಯುವಂತಾಯಿತು. ತಾವು ಪಾಠಮಾಡಿ ವಿದ್ಯಾಭ್ಯಾಸ ಕಲಿಸಿದ ಶಿಷ್ಯನೊಬ್ಬ ಅಮೆರಿಕಕ್ಕೆ ಹೋಗುತ್ತಾನೆಂದರೆ ಶಿಕ್ಷಕರಿಗೆ ಅದಕ್ಕಿಂತ ಖುಷಿ ಇನ್ನೇನಿದೆ. ವಿದ್ಯಾರ್ಥಿಗಳಿಂದ ಶಿಕ್ಷಕರು ಬಯಸುವ ಗುರುಕಾಣಿಕೆ ಅದೇ ಅಲ್ಲವೇ..? ಇದೇ ಖುಷಿಯಲ್ಲಿ ಆ ಹಳೆ ವಿದ್ಯಾರ್ಥಿ ಶಿಕ್ಷಕರೊಂದಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಂಡು ಗುಡ್ ಬೈ ಹೇಳಿದರು.
ಬಸ್ಸು ನಮ್ಮೆಲ್ಲರ ಭಾರಹೊತ್ತು ಡ್ರೈವರ್ ಅಣ್ಣನ ಆಜ್ಞೆಯಂತೆ ಆ ಘಟ್ಟ ಏರುತ್ತಿದ್ದರೆ ನಾವು ಬಸ್ಸಿನೊಳಗೆ ಯು.ಎಸ್.ಎ. ಗಳನ್ನು ಹುಡುಕುತ್ತಿದ್ದೆವು. ಉಮೇಶ್ ಸರ್ , ಶಶಿಕಾಂತ್ ಸರ್, ಆನಂದ್ ಸರ್, ಒಟ್ಟಾಗಿ ಸೇರಿದರೆ ಯು.ಎಸ್.ಎ. ಆಗುತ್ತದಂತೆ ಇದು ಹಳೆ ವಿದ್ಯಾರ್ಥಿಗಳ ಸಂಶೋಧನೆ ಎಂದು ವಿಜ್ಞಾನ ಸರ್ ಯೋಗನಾಥರು ರಹಸ್ಯ ಬಿಚ್ಚಿಟ್ಟಿದ್ದರು. ಬಿಸಿಲೆಯ ಘಾಟಿ ರಸ್ತೆಯ ತಿರುವುಗಳನ್ನು ಸುತ್ತಿಕೊಂಡು ಬಸ್ಸು ಘಟ್ಟ ಹತ್ತುತ್ತಿತ್ತು. ಮಳೆಯ ನಡುವೆಯೂ ನಿಸರ್ಗದ ಸೌಂದರ್ಯ ಕಣ್ಣಿಗೆ ಮುದನೀಡಿತ್ತು. ಪೂರ್ತಿ ಸಂತೋಷಕ್ಕೆ ಮಳೆರಾಯ ಅಡ್ಡಿಪಡಿಸುತ್ತಿದ್ದ ಕಾರಣ ಇತರ ದಿನಗಳಲ್ಲಿ ಸೂರ್ಯನ ಕಿರಣಗಳಿಂದ ಮಿನುಗುತ್ತಾ ಕಂಗೊಳಿಸುತ್ತಿದ್ದ ಪ್ರಕೃತಿ ಈಗ ಮಂಜಿನ ಹೊದಿಕೆ ಒದ್ದುಕೊಂಡು ನಿದ್ರಿಸುತ್ತಿರುವಂತೆ ಕಾಣುತ್ತಿತ್ತು. ಹೀಗಾಗಿ ಬಸ್ಸಿನ ಒಳಗಡೆಯ ನಮ್ಮೆಲ್ಲರ ಮನರಂಜನೆಯ ಮಾತುಗಳೇ ನಮ್ಮನ್ನು ರಂಜಿಸುವಂತಾಗಿತ್ತು. ಸುತ್ತಲೂ ಹಚ್ಚ ಹಸಿರಿನಿಂದ ಸಮೃದ್ಧವಾಗಿ ಕಂಗೊಳಿಸುತ್ತಿರುವ ಮರ-ಗಿಡಗಳೆಲ್ಲವೂ ರಸ್ತೆಬದಿ ಸಾಲಾಗಿ ನಿಂತು ನಮ್ಮನ್ನು ಮುಂದೆ ಕಳಿಸುತ್ತಿರುವಂತೆ ಅನುಭವವಾಗುತ್ತಿತ್ತು.
ಹೆಚ್.ಎಂ. ಹಾಗೂ ಪ್ರಮೀಳಾ ಮೇಡಂ ಇತರರೊಂದಿಗೆ ಸೇರಿಕೊಂಡು ನನ್ನನ್ನು ಪ್ರೋತ್ಸಾಹಿಸುತ್ತಾ ನಿಮ್ಮ ಬರವಣಿಗೆ ಪುರಾಣ ಶುರು ಮಾಡಬಹುದು ಎಂದು ಅಣಕಿಸಿದಾಗ, ನಾನು ಎರಡು ಕವನ ಬರೆದಿದ್ದಕ್ಕೆ ಇಷ್ಟೆಲ್ಲಾ ಹೋಗಲಿಕ್ಕೆ ಬೇಕಿತ್ತಾ..!ಎಂದು ಒಮ್ಮೆ ನರ್ವಸ್ ಆಗಿದ್ದೆ. ಅಷ್ಟರಲ್ಲೇ ಕಂಡಕ್ಟರ್ ಕೆಲಸದಲ್ಲಿ ಮುಂದಿದ್ದ ದಿನಕರ್ ಸರ್ ನಮ್ಮೊಂದಿಗೆ ಸೇರಿಕೊಂಡಿದ್ದರು. ಲೋಕಾಭಿರಾಮದ ಮಾತುಗಳೊಂದಿಗೆ ಉಮೇಶ್ ಸರ್ ರ ಇಂಗ್ಲಿಷ್ ಜೋಕ್ಸ್ ಗಳು ಒಂದೊಂದಾಗಿ ಹೊರಬರುತ್ತಿದ್ದರೆ, ಸಾಮಾಜಿಕ ಕಥೆಗಳು ಸಮಾಜ ಮೇಷ್ಟ್ರು ಶಶಿಕಾಂತ್ ಸರ್ ರಿಂದ ರಂಗು ಪಡೆದಿದ್ದವು. ನಗುಮುಖದಲ್ಲಿ ಪ್ರವೀಣರಾಗಿದ್ದ ಪ್ರಮೀಳ ಮೇಡಂ ಹೆಚ್.ಎಂ. ರೊಂದಿಗೆ ಮಾತನಾಡುತ್ತಿದ್ದ ಗುನುಗುನು ಮಾತುಗಳು ಸಂಸ್ಕೃತ ಮಂತ್ರ ಪಠಿಸಿದಂತೆ ಕೇಳಿ ಇವರು ಸಂಸ್ಕೃತ ಪಂಡಿತೆ ಎಂಬುದನ್ನು ಸಾರುತ್ತಿದ್ದವು. ಒಬ್ಬೊಬ್ಬರ ನಗೆಬಾಂಬುಗಳಿಗೆ ಬಸ್ಸು ಪೂರ್ತಿ ನಗೆಗಡಲಲ್ಲಿ ತೇಲುತ್ತಿತ್ತು. ಬಸ್ಸಿನೊಳಗಡೆ ಇಷ್ಟೆಲ್ಲ ನಡೆಯುತ್ತಿರುವಂತೆ ಆನಂದ್ ಸರ್ ಆನಂದವಾಗಿ ನಿದ್ರೆಗೆ ಜಾರಿದ್ದರು.
ಬಸ್ಸಿನ ಎದುರು ಸೀಟಿನಲ್ಲಿ ಕುಳಿತವರ ಕಥೆಯೇ ಬೇರೆಯಾಗಿತ್ತು. ಮಕ್ಕಳಿಂದ ಕೂಡಿದ ಒಂದು ಗುಂಪು ಅಂತ್ಯಕ್ಷರಿ ಹಾಡುತ್ತಿದ್ದರೆ, ಎಲ್. ಕೆ. ಜಿ.-ಯು. ಕೆ. ಜಿ. ಮಕ್ಕಳನ್ನು ಆಟ ಆಡಿಸುವಂತೆ ಸುಷ್ಮಾ , ಶಮಿತಾ , ಕವಿತಾ , ಸೌಮ್ಯ ಮಿಸ್ ಗಳು ಮಕ್ಕಳಿಗೆ ಸಾಥ್ ನೀಡಿದ್ದರು. ಶಾಲೆಯಲ್ಲಿ ಮಕ್ಕಳಿಗೆ ಪಾಠ-ಪ್ರವಚನ ಮಾಡುತ್ತಾ ಸದಾ ಬ್ಯುಸಿಯಾಗಿ ಇರುತ್ತಿದ್ದ ವಿದ್ಯಾಲತಾ, ಶಶಿಕಲಾ ,ಕಾರ್ತಿಕೆ, ಆಶಾ,ಗೀತಾ, ಸುವರ್ಣ ಟೀಚರ್ ಗಳು ಮೌನವಾಗಿ ಕೂತು ಪ್ರಕೃತಿಯನ್ನು ಆಸ್ವಾದಿಸುತ್ತಾ ಫ್ರೀ..ಯಾಗಿದ್ದರು. ಯಾವಾಗಲೂ ಕಂಪ್ಯೂಟರ್ ಕೆಲಸದಲ್ಲಿ ಮಗ್ನರಾಗುತ್ತಾ ಕಂಪ್ಯೂಟರ್ನಲ್ಲಿ ಪ್ರಕೃತಿ ಚಿತ್ರಪಟಗಳನ್ನು ನೋಡುತ್ತಿದ್ದ ಶ್ವೇತಾ ಮಿಸ್ ದ್ವಯರು ಇಂದು ಪ್ರಕೃತಿಯ ಸೊಬಗು ಸವಿಯುತ್ತ ಹಾಯಾಗಿದ್ದರು. ವಾಣಿ ಮೇಡಂ ರ ಆಕಾಶವಾಣಿಯು ಚಾಲ್ತಿಯಲ್ಲಿದೆ ಎಂದು ಧ್ವನಿಯಲ್ಲಿ ತಿಳಿಯುತ್ತಿತ್ತು. ಕನ್ನಡ,ತುಳು,ಅರೆಭಾಷೆ ಯಂತಹ ದಕ್ಷಿಣ ಕರ್ನಾಟಕದ ಲೋಕಲ್ ಭಾಷಿಗರ ನಡುವೆ ಉತ್ತರ ಭಾರತದವರಂತೆ ಕುಳಿತಿದ್ದ ಹಿಂದಿ ಶಿಕ್ಷಕಿ ಮಮತಾ ಮೇಡಂ ತಾವು ತಂದಿದ್ದ ಬ್ಯಾಗಿನಿಂದ ಉಂಡೆ ತಿಂಡಿ ತೆಗೆದು ಎಲ್ಲರಿಗೂ ನೀಡುತ್ತ ಬಂದಾಗ ನಿದ್ದೆಯಲ್ಲಿದ್ದ ಆನಂದ ಸರ್ ಎದ್ದು ಯಾರಿಗೆ ಎಷ್ಟು ಕೊಡಬೇಕೆಂದು ಗಣಿತದ ಲೆಕ್ಕಾಚಾರದಲ್ಲಿ ತೊಡಗಿದ್ದರು. ಇಷ್ಟೆಲ್ಲಾ ನಡೆಯುವಾಗ ಬಸ್ ಬಿಸ್ಲೆಯನ್ನು ದಾಟಿ ಮುಂದುವರಿಯುತ್ತಿತ್ತು.
ಸುವರ್ಣ ಮೇಡಂ ತಮ್ಮ ತವರು ಮನೆ ಸಮೀಪಿಸುತ್ತಿದೆಯೆಂದು ಖುಷಿಯಲ್ಲಿದ್ದರೆ ಬೆಟ್ಟಗಳ ನಡುವಿನ ಕಣಿವೆಗಳಲ್ಲಿ ಕಾಣುತ್ತಿದ್ದ ದಟ್ಟ ಮಂಜನ್ನು ನೋಡಿ ಹೊಗೆಗೆ ಹೋಲಿಸಿದ ನಾವು ತವರು ಮನೆಯಲ್ಲಿ ಅಡುಗೆ ಸಿದ್ಧತೆಯಾಗುತಿದೆ ಎಂದು ವ್ಯಂಗ್ಯವಾಡುತ್ತಿದ್ದೆವು. ಇದರ ನಡುವೆ ಪ್ರಮೀಳ ಮೇಡಂ ತಂದಿದ್ದ ಬಾಳೆಕಾಯಿ ಚಿಪ್ಸ್ ಕೂಡ ಖಾಲಿಯಾಗಿತ್ತು. ಮುಂದೆ ಕಾಣುತ್ತಿದ್ದ ಮನೆಯೊಂದನ್ನು ತೋರಿಸಿ ಹೆಚ್.ಎಂ. ಇದು ಹಳೆ ವಿದ್ಯಾರ್ಥಿಯೊಬ್ಬರ ಮನೆ, ಮೊದಲು ನಮ್ಮ ಶಾಲೆಗೆ ಇಲ್ಲಿಂದಲೂ ಮಕ್ಕಳು ಬರುತ್ತಿದ್ದರು ಎಂದು ನೆನಪಿಸಿಕೊಂಡು, ಈ ಪ್ರದೇಶದ ಪುರಾಣ ಶಾಸನವೊಂದರ ಕುರಿತಾಗಿ ಹೇಳಿದರು. ಆದರೆ ಈ ಪ್ರವಾಸದ ಸಂಭ್ರಮದಲ್ಲಿದ್ದ ನಮಗೆ ಅದೇನೆಂದು ಸರಿಯಾಗಿ ಅರ್ಥವಾಗಲಿಲ್ಲ. ಇತಿಹಾಸದ ಪಾಠ ಕೇಳುವ ಮನಸ್ಸು ಈಗ ನಮಗಿರಲಿಲ್ಲ.
ಸಕಲೇಶಪುರವು ಪ್ರಕೃತಿ ಪ್ರಿಯರಿಗೆ ಪ್ರಕೃತಿಯನ್ನು ಆಸ್ವಾದಿಸಲು ಹೇಳಿಮಾಡಿಸಿದಂತಹ ಸ್ಥಳ. ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಕೂಡ ಈ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗದಿರುವುದಿಲ್ಲ. ಸುತ್ತಲೂ ಕಾಣುವ ಬೆಟ್ಟ-ಗುಡ್ಡಗಳು ಅದರ ನಡುವೆ ತಿರುವುಗಳನ್ನು ಪಡೆಯುತ್ತಾ ಸಾಗುವ ಡಾಮರು ಮಾರ್ಗ.ಮಾರ್ಗದ ಇಕ್ಕೆಲಗಳಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಚಿಕ್ಕ ಚಿಕ್ಕ ಭತ್ತದ ಗದ್ದೆಗಳು, ಚದುರಂಗದ ಕೋಣೆಯಂತೆ ನೋಡುಗರ ಕಣ್ಣಿಗೆ ಹಬ್ಬದಂತೆ ಕಾಣುತ್ತಿತ್ತು. ಕೆಲವು ಹಡಿಲು ಗದ್ದೆಗಳಲ್ಲಿ ಹಾಯಾಗಿ ಮೇಯುತ್ತಿರುವ ದನಕರುಗಳು ಇವುಗಳನ್ನು ಕಾಯುತ್ತ ಕುಳಿತ ಜಾನ ನಾಯಿಮರಿಗಳೊಂದಿಗೆ ಕಾಣುವ ಸಾಕು ಹಂದಿಗಳು ಒಂದೆಡೆಯಾದರೆ.. ಹೊಲದಲ್ಲಿ ಫಸಲು ನೀಡಲು ತಯಾರಾದ ತರಕಾರಿ ಗಿಡಗಳು. ಬೆಳ್ಳಂಬೆಳಗ್ಗೆ ಎದ್ದು ಅದರ ಆರೈಕೆಯಲ್ಲಿ ತೊಡಗಿರುವ ನಿಷ್ಕಲ್ಮಶ ಮನಸ್ಸಿನ ಭೂಮಿಪುತ್ರ ರೈತರು ದೂರದಲ್ಲಿ ಕಾಣುತ್ತಿದ್ದರು. ರಸ್ತೆಯ ಎರಡೂ ಬದಿಗಳಲ್ಲಿ ಒಂದೇ ತರಹದ ವಿನ್ಯಾಸಗಳನ್ನು ಹೊಂದಿರುವ ಚಿಕ್ಕದಾಗಿ ಚೊಕ್ಕದಾಗಿದ್ದು ಸಾಲು ಸಾಲಾಗಿ ಕಾಣುವ ಸುಂದರ ಹಂಚಿನ ಮನೆಗಳು. ಇವುಗಳ ನಡುವೆ ಅಲ್ಲಲ್ಲಿ ತಲೆಯೆತ್ತುತ್ತಿರುವ ಆಧುನಿಕ ಕಾಲದ ಕಾಂಕ್ರೀಟ್ ಮನೆಗಳು. ಮನೆಗಳ ಎದುರಿನಲ್ಲಿ ಕಾಣುವ ಚಿಕ್ಕ-ಚಿಕ್ಕ ಅಂಗಡಿ, ಹೋಟೆಲ್ ಗಳು. ಇವುಗಳನೆಲ್ಲ ನೋಡುತ್ತಿದ್ದಾಗ ಬಸ್ಸು ಹೈವೆ ಮಾರ್ಗ ಬಿಟ್ಟು ಹಳ್ಳಿಯ ರೋಡಿನಲ್ಲಿ ತಿರು ಪಡೆಯುತ್ತ ಸಾಗುತ್ತಿರುವುದು ಸ್ಪಷ್ಟವಾಗಿತ್ತು. ಬಸ್ಸು ಒಂದು ವಿಶಾಲ ಪಾರ್ಕಿಂಗ್ ನಲ್ಲಿ ನಿಂತಾಗ ಪಾರ್ಕಿಂಗ್ ತೆರಿಗೆಗೆಂದು ತೆರಿಗೆ ಕಲೆಕ್ಟರ್ ಗಳು ಬಸ್ ಹತ್ತಿರ ಬಂದದ್ದನ್ನು ನೋಡಿ ನಾವು ಜಲಪಾತದ ಸ್ಥಳ ತಲುಪಿದ್ದೇವೆ ಎಂದು ತಿಳಿಯಿತು.
ಬಸ್ಸಿನಿಂದ ಇಳಿಯುತ್ತಿದ್ದಂತೆ ಮತ್ತೆ ಮಳೆರಾಯನ ಹನಿಗಳು ನಮ್ಮನ್ನು ಸ್ವಾಗತಿಸಿದವು ಜಲಪಾತದ ಭೋರ್ಗರೆತ ನಾವು ನಿಂತಲ್ಲಿಗೆ ಕೇಳುತ್ತಿತ್ತು. ತಂಪಾದ ಗಾಳಿಯು ಬೀಸಿದಾಗ ನಮ್ಮ ಮನಸ್ಸು ನಿರಾಳವಾಗಿ ಪ್ರಕೃತಿಯಲ್ಲಿ ಲೀನವಾದಂತೆ ಆಗಿತ್ತು. ಎದುರಿಗಿದ್ದ ದೊಡ್ಡದೊಂದು ಬಂಡೆಕಲ್ಲು ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದಂತೆ ನಾವು ಮೆಟ್ಟಿಲುಗಳನ್ನ ಇಳಿಯತೊಡಗಿದೆವು. ಮಳೆಗಾಲವಾದರೂ ಹುಲ್ಲು ಪಾಚಿ ಗಳಿಲ್ಲದೆ ಸ್ವಚ್ಛವಾಗಿದ ಮೆಟ್ಟಿಲುಗಳನ್ನು ನೋಡಿದಾಗ ಇಲ್ಲಿಗೆ ಪ್ರತಿದಿನ ಪ್ರವಾಸಿಗರ ಆಗಮನವಾಗುತ್ತಿದೆ ಎಂಬುದು ತಿಳಿಯುತ್ತದೆ. ಮೇಲಿನಿಂದ ಜಲಪಾತದ ಕೆಳಗೆ ಇಳಿಯಲೆಂದು ಪ್ರವಾಸೋದ್ಯಮ ಇಲಾಖೆಯು ನಿರ್ಮಿಸಿದ್ದ ಈ ಮೆಟ್ಟಿಲಿನ ಎರಡು ಬದಿಯಲ್ಲಿ ತಡೆಬೇಲಿಗಳಿರುವುದರಿಂದ ಯಾವುದೇ ರೀತಿಯ ಭಯ ಹೆದರಿಕೆಯಾಗಲೀ, ಆತಂಕಗಳಾಗಲಿ ಇರಲಿಲ್ಲ. ದೂರದಿಂದ ಜಲಪಾತವನ್ನು ನೋಡುತ್ತಾ ಮೆಟ್ಟಿಲುಗಳನ್ನು ಇಳಿದದ್ದು ಗೊತ್ತೇ ಆಗಲಿಲ್ಲ. ಜಲಪಾತದ ಹತ್ತಿರ ಹೋಗುತ್ತಿದ್ದಂತೆ ತಂಪಾದ ಶೀತಗಾಳಿಯೊಂದಿಗೆ ತಣ್ಣೀರ ಅಭಿಷೇಕ ಮಾಡುತ್ತಾ ಜಲಪಾತ ನಮ್ಮನ್ನು ಸ್ವಾಗತಿಸುತ್ತಿರುವಂತೆ ಅನುಭವವಾಗುತ್ತಿತ್ತು. ಬೆಟ್ಟದೆತ್ತರದಿಂದ ಭೋರ್ಗರೆಯುತ್ತ ಧುಮ್ಮಿಕ್ಕುವ ನೀರು ಕ್ಷೀರಸಾಗರದಂತೆ ಬೆಳ್ಳಗೆ ಕಾಣುತ್ತಿತ್ತು. ಒಮ್ಮಿಂದೊಮ್ಮೆಗೆ ಬೀಸುವ ಗಾಳಿಗೆ ಮಂಜಿನಂತೆ ಬರುವ ನೀರ ಹನಿಗಳು ನಮ್ಮನ್ನು ಸೋಕಿದಾಗ ಮೈಯೆಲ್ಲಾ ಚಳಿ- ಚಳಿಯಾಗುತ್ತಿತ್ತು. ಬಂಡೆಗಲ್ಲುಗಳ ಮೇಲೆಲ್ಲಾ ಹಾರುತ್ತ ನೆಗೆಯುತ್ತ ಧುಮ್ಮಿಕ್ಕುವ ನೀರಿನೊಳಗೆಯೇ ಸ್ಪರ್ಧೆ ಏರ್ಪಟ್ಟಂತೆ ಭಾಸವಾಗುತ್ತಿದರೆ, ನೀರಿನ ಜುಳುಜುಳು ನಾದಕ್ಕೆ ಮರಗಿಡಗಳೆಲ್ಲವೂ ಸಂತೋಷದಿಂದ ತಲೆದೂಗುತ್ತಿದ್ದವು. ಫೋಟೋ ಕ್ಲಿಕ್ಕಿಸುತ್ತಿದ್ದ ಪ್ರವಾಸಿಗರ ಕ್ಯಾಮರದಿಂದ ಹೊರಬರುತ್ತಿದ್ದ ಬೆಳಕು ಮಿಂಚಿನಂತೆ ಕಂಡರೆ, ಒಮ್ಮೆಗೆ ಎದ್ದುಬರುವ ದಟ್ಟ ಮಂಜಿನಲ್ಲಿ ಜೊತೆಗಿದ್ದವರು ಮಾಯವಾಗುತ್ತಿದ್ದರು. ಮತ್ತೆ ರವಿಕಿರಣಗಳು ಬಿದ್ದಾಗ ಸ್ವಚ್ಛಂದವಾಗಿ ಕಾಣುವ ಪ್ರಕೃತಿಯ ಚೆಲ್ಲಾಟ ಮನಮೋಹಕ, ಈ ಸುಂದರ ದೃಶ್ಯ ಕಾವ್ಯವನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು. ವಾವ್…! ಎಂತಹ ಪ್ರಕೃತಿ ರಮಣೀಯತೆ..! ಮನಸ್ಸು ಉಲ್ಲಾಸಗೊಂಡು ನಲಿದಾಡುತ್ತಿದೆ.
ಸಮಯವಾಗುತ್ತಿದ್ದಂತೆ ಒಲ್ಲದ ಮನಸ್ಸಿನಿಂದಲೇ ಹಿಂತಿರುಗಿ ಮೆಟ್ಟಿಲು ಹತ್ತುತ್ತಾ ಮೊಬೈಲ್ ನಲ್ಲಿ ಬಗೆಬಗೆಯ ಚಿತ್ರಪಟಗಳನ್ನು ಕ್ಲಿಕ್ಕಿಸಿಕೊಂಡು ಬಸ್ಸಿನೆಡೆಗೆ ಬಂದಾಗ ಆಶ್ಚರ್ಯ..! ಬಸ್ಸಿನೊಳಗಡೆ ಇದ್ದ ಅರ್ಧ ವೆಜ್ ಬಿರಿಯಾನಿ ಖಾಲಿಯಾಗಿತ್ತು. ಮೊದಲು ಬಂದವರಿಗೆ ಊಟವಾಗಿತ್ತು. ನಾವು ಭೋಜನ ಮುಗಿಸಿ ಬಸ್ ಹತ್ತಿ ಪುನ: ನಮ್ಮೂರಿನ ಕಡೆಗೆ ನಮ್ಮ ಸವಾರಿ ಹೊರಟೆವು.
ಹಿಂತಿರುಗಿ ಬರುವಾಗ ಬಿಸ್ಲೆ ಬ್ಯೂಟಿ ಸ್ಪಾಟ್ ನ್ನು ನೋಡಿಕೊಂಡು ಬರೋಣವೆಂದು ಹೇಳಿ ಹೋಗಿದ್ದೆವು, ಈಗ ನಮ್ಮ ಆಸೆಗೆ ಮಳೆರಾಯ ಮತ್ತೆ ತಣ್ಣೀರೆರಚುವ ಸ್ಪಷ್ಟ ಸಂದೇಶ ನೀಡುತ್ತಿದ್ದ. ಜಲಪಾತದಲ್ಲಿ ಅವನ ತೊಂದರೆ ಇರಲಿಲ್ಲ ಅನ್ನುವುದೇ ಸಮಾಧಾನದ ಸಂಗತಿ. ಪಟ್ಲ ಬೆಟ್ಟದ ಸಾಲುಗಳು ದೂರದಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರೂ ವರ್ಷಧಾರೆಯಿಂದ ಹೋಗುವಂತಿರಲಿಲ್ಲ. ಕಿರಣಣ್ಣನ ಬಸ್ ಮತ್ತೆ ವೇಗ ಪಡೆಯುತ್ತಿದ್ದಂತೆ ಗ್ರೂಪ್ ಫೋಟೋ ಒಂದನ್ನು ಕ್ಲಿಕ್ಕಿಸಿಕೊಳ್ಳಬೇಕೆಂಬ ಬೇಡಿಕೆ ಬಂದಾಗ ಆ ಬೇಡಿಕೆ ಈಡೇರಿಕೆಗಾಗಿ ಮಂಕನಹಳ್ಳಿ ಕೆರೆಯ ಹತ್ತಿರ ಬಸ್ಸು ನಿಂತಿತ್ತು. ಬಸ್ಸಿನಿಂದಿಳಿದು ಫೋಟೋ ತೆಗೆಯಲೆಂದು ಪೋಸ್ ಕೊಡುತ್ತಾ ಬಂದು ನಿಂತಿದ್ದು ಒಂದು ಕಲ್ಲು ಶಿಲೆಯ ಎದುರು ಆಗಲೇ ಗೊತ್ತಾಗಿದ್ದು ಬೆಳಗ್ಗೆ ಹೋಗುವಾಗ ಹೆಚ್.ಎಂ. ಹೇಳಿದ ಪುರಾಣ ಶಾಸನದ ಕಥೆ ಇಲ್ಲಿಯದು ಎಂದು. ಅದು ಬ್ರಿಟಿಷರ ಕಾಲದ ಶಾಸನ ಕಲ್ಲಂತೆ ಘಟ್ಟಪ್ರದೇಶದ ನೀರು ಈ ಸ್ಥಳದಲ್ಲಿ ಎರಡು ವಿಭಾಗಗಳಾಗಿ ವಿಂಗಡಣೆಗೊಂಡು ಒಂದು ಭಾಗದ ನೀರು ಬಂಗಾಳ ಕೊಲ್ಲಿ ಸಮುದ್ರಕ್ಕೂ ಇನ್ನೊಂದು ಭಾಗದ ನೀರು ಅರಬ್ಬಿ ಸಮುದ್ರಕ್ಕೆ ಸೇರುವುದೆಂದು ತಿಳಿಸುವ ಶಿಲಾ ಶಾಸನವಾಗಿತ್ತು ಆ ಕಲ್ಲು. ಅದನ್ನು ನೋಡಿದ ನಾವು ಈ ಪ್ರಕೃತಿ ಪ್ರವಾಸದಲ್ಲಿ ಯು ಇತಿಹಾಸ ತಿಳಿದಂತಾಯಿತು ಎಂದು ಬಸ್ಸು ಏರಿದೆವು.
ಬಸ್ಸು ತಿರುವುಗಳನ್ನು ಪಡೆಯುತ್ತಾ ಓರೆಕೋರೆಯಾದ ಮಾರ್ಗದಲ್ಲಿ ಘಟ್ಟ ಇಳಿಯುತ್ತಿದ್ದರೆ ಬಸ್ಸಿನೊಳಗೆ ಕೂತಿದ್ದ ನಮಗೆ ತೊಟ್ಟಿಲು ತೂಗಿದಂತಾಗಿ ನಿದ್ರಾದೇವಿ ಆವರಿಸಿದ್ದಳು. ಪುಟ್ಟ ಕಂದ ಪ್ರದ್ಯುಮನ ತೊದಲು ನುಡಿಯ ಹಾಡು ಕೇಳಿದಾಗ ಎಲ್ಲರೂ ಎಚ್ಚರವಾಗಿ ಅವನೊಂದಿಗೆ ಹಾಡತೊಡಗಿದರು. ಅಷ್ಟರಲ್ಲಿ ಮತ್ತೊಂದು ತೊದಲುನುಡಿ ಕೇಳಿ ಅತ್ತ ತಿರುಗಿದಾಗ ಪುಟ್ಟ ರಾಧೆ ಶ್ರೀಯಾ ಕನ್ನಡದ ಅ ಆ ಇ ಈ ಟೀಚರ್, ಗಣಿತದ ಒಂದೆರಡು ಟೀಚರ್, ಇಂಗ್ಲಿಷ್ ಭಾಷೆಯ ಎ.ಬಿ.ಸಿ.ಡಿ. ಟೀಚರ್ ಗಳನ್ನು ಪರಿಚಯಿಸುತ್ತಿದ್ದಾಗ ಅವಳ ತಮಾಷೆಯ ಮುದ್ದು ಮಾತುಗಳನ್ನು ಕೇಳುತ್ತಾ ಮೈಮರೆತಿದ್ದ ನಮಗೆ ಬಸ್ಸು ಶಾಲೆಯ ಎದುರು ಬಂದು ನಿಂತಾಗಲೇ ಗೊತ್ತಾಗಿದ್ದು..! ನಮ್ಮ ಇಂದಿನ ಪ್ರವಾಸ ಮುಗಿಯಿತೆಂದು…

📝 ಧನಂಜಯ ಕೆ. ಕೊಡೆಂಕಿರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.