ಚೆಂಬು ಗ್ರಾ.ಪಂ.ಸದಸ್ಯೆ ಮತ್ತು ನೆರೆಮನೆಯವನ ಸಾವಿನ ಸುತ್ತ ಅನುಮಾನದ ಹುತ್ತ

Advt_Headding_Middle

ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆ

ಮಹಿಳೆಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಶಂಕೆ

ಚೆಂಬು ಗ್ರಾಮದಲ್ಲಿ ನಡೆದ ಇಬ್ಬರ ಸಾವಿನ ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಚೆಂಬು ಗ್ರಾ.ಪಂ. ಸದಸ್ಯೆ ಕಮಲ ಎಂಬವರನ್ನು ಅವರ ಮನೆ ಸಮೀಪದ ನಿವಾಸಿ ಮುತ್ತಪ್ಪ ಎಂಬಾತ ನಿನ್ನೆ ಮನೆಯ ಪಕ್ಕದಲ್ಲಿ ಹರಿಯುವ ನದಿಗೆ ತಳ್ಳಿ ಹಾಕಿದ ಮತ್ತು ಆ ಬಳಿಕ ನಾಪತ್ತೆಯಾದ ಇಬ್ಬರ ಮೃತದೇಹಗಳು ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ನಡೆಸಿ ಕೊಲೆ ನಡೆಸಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.

ನಿನ್ನೆ ಸಂಜೆ ಕಮಲರವರ ಮನೆ ಸಮೀಪದ ಸಂಬಂಧಿಯೊಬ್ಬರ ಮಗುವಿನ ಹುಟ್ಟು ಹಬ್ಬದ ಸಲುವಾಗಿ ರಾತ್ರಿ ಕಮಲ, ಅವರ ಅತ್ತೆ ದೇವಕಿ, ಮಗಳು ಅರ್ಚನಾ ಹಾಗೂ ಸಂಬಂಧಿ ಗಿರೀಶ್ ಎಂಬವರು ರಾತ್ರಿ ಸುಮಾರು 7.30ರ ಸಮಯಕ್ಕೆ ಮನೆಯಿಂದ ಹೊರಟಿದ್ದರು. ಕಾರ್‍ಯಕ್ರಮ ನಡೆಯುವ ಮನೆಗೆ ಹೋಗಬೇಕಾದರೆ ಕಮಲರ ಮನೆಯ ಪಕ್ಕದಲ್ಲಿ ಹರಿಯುವ ಸಣ್ಣ ನದಿಯನ್ನು ದಾಟಿ ಹೋಗಬೇಕು. ಅವರು ಸೇತುವೆ ದಾಟುತ್ತಿದ್ದಾಗ ಸೇತುವೆಯ ಪಕ್ಕದಲ್ಲಿರುವ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ಮುತ್ತಪ್ಪ ಎಂಬಾತ ಸೇತುವೆಯ ಒಂದು ಬದಿಯಲ್ಲಿ ಕುಳಿತಿದ್ದನೆಂದೂ, ನೀವು ಈ ಸೇತುವೆಯಿಂದ ದಾಟಿ ನನ್ನ ಜಾಗದಿಂದಾಗಿ ಹೋಗಬಾರದೆಂದು ಆತ ಹೇಳಿದಾಗ ಕಮಲ “ಇದು ನಿನ್ನ ರಸ್ತೆ ಅಲ್ಲ. ಪಂಚಾಯತ್‌ನದ್ದು ಎಲ್ಲರೂ ಬಳಸಬಹುದು” ಎಂದು ಹೇಳಿ ಸೇತುವೆ ಮೇಲೆ ಹೋದರೆಂದೂ ಎದುರುಗಡೆಯಿಂದ ಸೇತುವೆ ಮೇಲೆ ನಡೆದುಕೊಂಡು ಕಮಲರಿಗೆ ಬೈಯುತ್ತಾ ಬಂದ ಮುತ್ತಪ್ಪ ಕಮಲರ ಕುತ್ತಿಗೆಗೆ ಕೈ ಹಾಕಿ ಸೇತುವೆಯಿಂದ ನದಿಗೆ ತಳ್ಳಿದನೆನ್ನಲಾಗಿದೆ. ಈ ವೇಳೆ ಮುತ್ತಪ್ಪನ ಕೈಯಲ್ಲಿ ಕತ್ತಿಯೊಂದಿದ್ದು, ನೀವೂ ಮುಂದೆ ಬಂದರೆ ಕಡಿಯುವುದಾಗಿ ಆತ ಕಮಲರ ಜತೆಗಿದ್ದ ಆಕೆಯ ಮನೆಯವರಿಗೆ ಎಚ್ಚರಿಕೆ ನೀಡಿದನೆನ್ನಲಾಗಿದೆ. ನದಿಯಲ್ಲಿ ನೀರಿನ ಸೆಳೆತ ಹೆಚ್ಚಿದ್ದು ಕಮಲ ತೇಲಿಕೊಂಡು ಒಂದು ಬದಿಗೆ ಸರಿದರೆಂದೂ ಇದನ್ನು ನೋಡಿದ ಮುತ್ತಪ್ಪ ಹೋಗಿ ನದಿಯಿಂದ ಮೇಲೆ ಹತ್ತುತ್ತಿದ್ದ ಕಮಲರನ್ನು ಮೇಲೆತ್ತಿ ಎತ್ತಿಕೊಂಡು ತನ್ನ ಮನೆಯ ಕಡೆ ಹೋದನೆನ್ನಲಾಗಿದೆ. ಕಮಲರ ಮಗಳು ಮತ್ತು ಅತ್ತೆ ಹಾಗೂ ಗಿರೀಶ್ ಎಂಬವರು ತಕ್ಷಣ ಹುಟ್ಟು ಹಬ್ಬ ನಡೆಯುತ್ತಿದ್ದ ಮನೆಗೆ ಹಾಗೂ ಪಕ್ಕದ ಮನೆಗೆ ಹೋಗಿ ವಿಷಯ ತಿಳಿಸಿದರೆಂದೂ ಅವರೆಲ್ಲರೂ ಬಂದು ಮುತ್ತಪ್ಪರ ಮನೆಯ ಸುತ್ತ ನೋಡಿದರೂ ಕಮಲ ಮತ್ತು ಮುತ್ತಪ್ಪ ಪತ್ತೆಯಾಗಲಿಲ್ಲ. ಬಳಿಕ ಕೆಲ ಹೊತ್ತು ಮನೆಯ ಪಕ್ಕದಲ್ಲಿ ಹುಡುಕಾಡಿದರೂ ಅವರು ಪತ್ತೆಯಾಗಲಿಲ್ಲ. ಪೋಲೀಸರಿಗೆ, ಪಂಚಾಯತ್‌ನ ಇತರ ಜನಪ್ರತಿನಿಧಿಗಳಿಗೆ ವಿಷಯ ತಿಳಿಸಲಾಯಿತು.
ಇಂದು ಬೆಳ್ಳಂಬೆಳಗೆ ಮತ್ತೆ ಸ್ಥಳೀಯರು ಹುಡುಕಾಟ ನಡೆಸಿದರು. ಘಟನೆ ನಡೆದ ಸೇತುವೆಯಿಂದ ಸುಮಾರು ಒಂದೂವರೆ ಕಿ.ಮೀ. ದೂರದ ಕಾಡಿನಲ್ಲಿ ಕಮಲ ಹಾಗೂ ಮುತ್ತಪ್ಪರ ಮೃತದೇಹ ಸಣ್ಣ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ಸ್ಥಳದಲ್ಲಿ ಒಂದು ಟಾರ್ಚ್, ಮೊಬೈಲ್, ನಶ್ಯದ ಬಾಟಲಿಗಳು ಇದ್ದವು. ಕಾಡಿನಲ್ಲಿ ಉರುಡಾಟ ನಡೆದಂತೆ ಕಂಡು ಬರುತ್ತಿತ್ತು. ಕಮಲರವರು ಸೀರೆಯಿಂದಲೇ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿದ್ದರೆ ಮುತ್ತಪ್ಪ ತಾನು ಸುತ್ತಿಕೊಂಡಿದ್ದ ಲುಂಗಿಯಿಂದ ನೇಣು ಹಾಕಿಕೊಂಡಿದ್ದ..


ಕಮಲ ಅವರು ಪುತ್ತೂರು ತಾಲೂಕಿನ ಮುರ ನಿವಾಸಿಯಾಗಿದ್ದು ೧೩ ವರ್ಷಗಳ ಹಿಂದೆ ಚೆಂಬು ಗ್ರಾಮದ ದಬ್ಬಡ್ಕ ದರ್ಖಾಸ್ತು ಕೇಶವ ಎಂಬವರನ್ನು ವಿವಾಹವಾಗಿದ್ದರು. ಈ ದಂಪತಿಗೆ 10 ವರ್ಷ ಪ್ರಾಯದ ಮಗಳು ಅರ್ಚನಾ ಇದ್ದಾಳೆ. ಕಮಲರ ಮನೆಯವರು ಹಾಗೂ ಮುತ್ತಪ್ಪರ ಮನೆಯವರು ತುಂಬಾ ಅನ್ಯೋನ್ಯವಾಗಿ ಇದ್ದರೆಂದೂ ಕಳೆದ ಎರಡು ವರ್ಷಗಳಿಂದ ಅವರೊಳಗೆ ವೈಮನಸ್ಸು ಉಂಟಾಗಿತ್ತೆಂದೂ, ಅವರ ಜಗಳ ಮೂರ್‍ನಾಲ್ಕು ಬಾರಿ ಪೋಲೀಸ್ ಠಾಣೆ ಮೆಟ್ಟಿಲು ಏರಿತ್ತೆಂದೂ ಊರವರು ಹೇಳುತ್ತಾರೆ. ಒಂದು ತಿಂಗಳ ಹಿಂದೆಯೂ ಅವರ ನಡುವೆ ಜಗಳ ಆಗಿತ್ತು.
ಮುತ್ತಪ್ಪ ಕಮಲರನ್ನು ನೀರಿಗೆ ತಳ್ಳಿ ಬಳಿಕ ಅಲ್ಲಿಂದ ಹೊತ್ತೊಯ್ದು ಕಾಡಿಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತದೆಯಾದರೂ ಪೋಲೀಸ್ ತನಿಖೆಯಿಂದ ಪೂರ್ಣ ಸತ್ಯ ಹೊರಬೀಳಬೇಕಾಗಿದೆ.
ಮಡಿಕೇರಿ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು, ಶವವನ್ನು ಪೋಸ್ಟ್ ಮಾರ್ಟಂ ಗಾಗಿ ಮಡಿಕೇರಿಗೆ ಕೊಂಡೊಯ್ದಿದ್ದಾರೆ. ಮುತ್ತಪ್ಪನಿಗೆ ಕುಡಿತದ ಚಟ ಇತ್ತೆಂದೂ ಇದರಿಂದ ನೊಂದು ಆತನ ಪತ್ನಿ ಹಾಗೂ ಮಕ್ಕಳು ಅವನಿಂದ ದೂರ ಇದ್ದಾರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.