ಮಹಾಸಭೆ ಕರೆಯದಿರುವ ಹಾಗೂ ಒಕ್ಕೂಟದ ರಿನೀವಲ್ ಆಗದಿರುವ ವಿಚಾರ

Advt_Headding_Middle

 

ಸುಳ್ಯ ತಾಲೂಕು ಮಹಿಳಾ ಮಂಡಲ ಒಕ್ಕೂಟ ಮಾಹಿತಿ ಸಭೆಯಲ್ಲಿ ಬಾರೀ ಚರ್ಚೆ

ಸುಳ್ಯ ತಾಲೂಕು ಮಹಿಳಾ ಮಂಡಲ ಒಕ್ಕೂಟದ ಮಹಾಸಭೆ ಆಗಿ ಮೂರು ವರುಷ ಕಳೆದರೂ ಮಹಾಸಭೆ ಕರೆಯದಿರುವ ಹಾಗೂ ಒಕ್ಕೂಟವನ್ನು ರಿನೀವಲ್ ಮಾಡದಿರುವ ಬಗ್ಗೆ ತಾಲೂಕು ಮಹಿಳಾ ಮಂಡಲ ಒಕ್ಕೂಟದ ಮಾಹಿತಿ ಸಭೆಯಲ್ಲಿ ಬಾರೀ ಚರ್ಚೆಯಾಗಿ ಸದಸ್ಯರ ಒತ್ತಾಯದಂತೆ ಡಿ.೫ರಂದು ಮಹಾಸಭೆ ಕರೆಯಲು ಅಧ್ಯಕ್ಷರು ನಿರ್ಧರಿಸಿದ ಘಟನೆ ನಡೆದಿದೆ.
ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಇಂದಿರಾ ರಾಜಶೇಖರ ರೈಯವರ ಅಧ್ಯಕ್ಷತೆಯಲ್ಲಿ ಇಂದು ಮಹಿಳಾ ಮಂಡಲದ ಸಭಾಂಗಣದಲ್ಲಿ ಮಾಹಿತಿ ಸಭೆ ಆಯೋಜನೆಯಾಗಿತ್ತು.
ಒಕ್ಕೂಟದ ಗೌರವ ಸಲಹೆಗಾರರಾದ ಎಂ.ಮೀನಾಕ್ಷಿ ಗೌಡರು ಮಾಹಿತಿ ನೀಡಿದ ಬಳಿಕ ಚರ್ಚೆ ಆರಂಭವಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ತಾಲೂಕು ಒಕ್ಕೂಟದ ಮಾಜಿ ಅಧ್ಯಕ್ಷೆ ಮಹಾಲಕ್ಷ್ಮೀ ಕೊರಂಬಡ್ಕರು, “ಸುಳ್ಯ ಮಹಿಳಾ ಮಂಡಲ ಒಕ್ಕೂಟದ ಮಹಾಸಭೆಯನ್ನು ಆಡಳಿತ ಸಮಿತಿಯ ಅವಧಿ ಮುಗಿದರೂ ಕರೆದಿಲ್ಲ. ನೀವು ವಿನಾ ಕಾರಣ ಮುಂದೂಡುತ್ತಿರುವ ಕ್ರಮ ಸರಿಯಲ್ಲ” ಎಂದು ಹೇಳಿದರು. `’ಕಳೆದ ಬಾರಿ ಕೊರೊನಾ ಇದ್ದುದು ಎಲ್ಲರಿಗೂ ಗೊತ್ತಿದೆ. ಆ ಸಂದರ್ಭದಲ್ಲಿ ೬ ತಿಂಗಳು ಮುಂದೂಡಿ ಎಂದು ಗೌರವ ಸಲಹೆಗಾರರು ಹೇಳಿದ್ದರಿಂದ ಮುಂದೆ ಹಾಕಿದ್ದೇವೆ ಹೊರತು ಬೇರೇನೂ ಇಲ್ಲ ಎಂದು ಅಧ್ಯಕ್ಷೆ ಇಂದಿರಾ ರೈ ಹೇಳಿದರು.

ಗೌರವ ಸಲಹೆಗಾರರಾದ ಎಂ.ಮೀನಾಕ್ಷಿ ಗೌಡರು, “ಇಂದು ಮಾಹಿತಿ ಸಭೆಯನ್ನು ಕರೆಯಲಾಗಿದೆ. ಇಲ್ಲಿ ಚರ್ಚೆ ಮಾಡಬೇಡಿ. ಸೌಹಾರ್ದಯುತವಾಗಿ ಮಾತನಾಡಿ. ಅವರು ಮಹಾಸಭೆ ಕರೆಯುತ್ತಾರೆ” ಎಂದು ಹೇಳಿದರು. ಆಗ ಮಾಜಿ ಅಧ್ಯಕ್ಷೆ ಹರ್ಷಾ ಕರುಣಾಕರರು “ತಾಲೂಕಿನ ಸಭೆ ಆಗಿಲ್ಲವೆಂದು ಸದಸ್ಯರು ನಮ್ಮೊಡನೆ ಪ್ರಶ್ನಿಸುತ್ತಿದ್ದಾರೆ. ಇಲ್ಲಿ ಚರ್ಚೆ ಆಗಬೇಕು. ಆ ಮೂಲಕ ಪರಿಹಾರ ಸಿಗಬೇಕಾಗಿದೆ” ಎಂದು ಹೇಳಿದರು. ಕೆಲವು ಸದಸ್ಯರು ಚರ್ಚೆ ಮಾಡುವುದು ಬೇಡ ಎಂದು ಎದ್ದು ನಿಂತು ಹೇಳಿದಾಗ, ಮಾತನಾಡಿದ ಜಿಲ್ಲಾ ಒಕ್ಕೂಟದ ಮಾಜಿ ಅಧ್ಯಕ್ಷೆ ಹರಿಣಿ ಸದಾಶಿವರು, “ಸುಳ್ಯ ಒಕ್ಕೂಟದ ವಿಷಯಗಳು ನಮಗೆ ಗೊತ್ತಿದೆ. ಅದನ್ನು ತಿಳಿದುಕೊಂಡೇ ಮಾತನಾಡುತ್ತಿದ್ದೇವೆ. ಸಮಸ್ಯೆಗಳ ಬಗ್ಗೆ ಇಲ್ಲಿ ಚರ್ಚೆ ಆಗಬೇಕು. ಎಲ್ಲ ಸದಸ್ಯರಿಗೂ ಮಾತನಾಡಲು ಅವಕಾಶ ಇದೆ” ಎಂದು ಹೇಳಿದರು. ಶೀಲ್ಪಾ ಸುದೇವ್, ಭಾರತಿ ಬಂಟ್ವಾಳ್, ಕಾಂತಿ ಕಲ್ಲುಗುಂಡಿ ಮತ್ತಿತರರರು ಧ್ವನಿಗೂಡಿಸಿ ಮಾತನಾಡಿದರು.

ಮಹಿಳಾ ಸಮಾಜದ ವಿರುದ್ಧ ಡಿಡಿಯವರಿಗೆ ದೂರು ಹೋಗಿರುವ ಕುರಿತು ಹರಿಣಿ ಸದಾಶಿವ ಸಭೆಯ ಮುಂದೆ ಪ್ರಸ್ತಾಪಿಸಿದರಲ್ಲದೆ, ಒಕ್ಕೂಟದ ಸದಸ್ಯರ ಹೆಸರಿನಲ್ಲೇ ದೂರು ಹೋಗಿದೆ. ಇದನ್ನೆಲ್ಲ ನಾವು ಪ್ರಶ್ನೆ ಮಾಡಬಾರದೇ?. ಅಥವಾ ಈ ವಿಷಯ ಸದಸ್ಯರಿಗೆ ಗೊತ್ತಿರುವುದು ಬೇಡವೇ? ಎಂದು ಪ್ರಶ್ನಿಸಿದರು. ಹರಿಣಿಯವರು ಸಭೆಯ ಮುಂದೆ ನೀಡಿದ ಪ್ರತಿಯನ್ನು ಪರಿಶೀಲಿಸಿದ ಅಧ್ಯಕ್ಷೆ ಇಂದಿರಾರವರು ಇದು ನನ್ನ ಸಹಿ ಅಲ್ಲ ಪೋರ್ಜರಿ ಆಗಿದೆ ಎಂದು ಈ ಬಗ್ಗೆ ನಾನು ಪೋಲೀಸ್ ದೂರು ನೀಡುವುದಾಗಿ ಹೇಳಿದರು. ಈ ಬಗ್ಗೆ ಅಧ್ಯಕ್ಷೆ, ಮತ್ತು ಸದಸ್ಯರ ವಿರುದ್ಧ ಪರಸ್ಪರ ಮಾತಿನ ವಿನಿಯೋಗವಾಯಿತು.

ಮಹಾಸಭೆ ಕರೆಯದೇ ಇರುವ ಬಗ್ಗೆ ಮತ್ತೆ ಸದಸ್ಯರು ಅಧ್ಯಕ್ಷರನ್ನು ಪ್ರಶ್ನಿಸತೊಡಗಿದಾಗ, ಆಡಳಿತ ಮಂಡಳಿಯ ಸಭೆ ಕರೆದು ಅಲ್ಲಿ ಚರ್ಚಿಸಿ ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಈಗಾಗಲೇ ಅಧ್ಯಕ್ಷರು ಹೇಳಿದಂತೆ ಡಿಸೆಂಬರ್ ೧೮ಕ್ಕೆ ಕಟ್ಟಡದ ಉದ್ಘಾಟನೆ ಮಾಡೋಣ. ಮಧ್ಯಾಹ್ನ ಮಹಾಸಭೆ ಕರೆಯೋಣ” ಎಂದು ಮೀನಾಕ್ಷಿ ಗೌಡರು ಸಲಹೆ ನೀಡಿದರು. ಮಹಾಸಭೆ ಕರೆಯದೇ ೨ ವರ್ಷ ಆಯಿತು. ಅಷ್ಟು ದಿನ ಮುಂದೂಡಬೇಡಿ. ಈ ತಿಂಗಳೊಳಗೆ ಸಭೆ ಕರೆಯಿರಿ ಎಂದು ಹರಿಣಿ ಸದಾಶಿವ ಹೇಳಿದರೆ, ಎರಡು ವರ್ಷದಿಂದ ತಾಲೂಕು ಒಕ್ಕೂಟವನ್ನು ರಿನೀವಲ್ ಮಾಡಿಲ್ಲ. ಮತ್ತೆ ನಾವು ಗ್ರಾಮದ ಮಹಿಳಾ ಒಕ್ಕೂಟವನ್ನು ರಿನೀವಲ್ ಮಾಡಿ ಎಂದು ಹೇಗೆ ಅವರಿಗೆ ಹೇಳುವುದು. ಮೊದಲು ನಾವು ಸರಿಯಾಗಬೇಕು ಎಂದು ಜಿಲ್ಲಾ ಒಕ್ಕೂಟದ ಕೋಶಾಧಿಕಾರಿ ಚಂದ್ರಾಕ್ಷಿ ಜೆ ರೈ ಹೇಳಿದರು.

ಇಂದೇ ಮಹಾಸಭೆ ಮಾಡಿ ಎಂದು ಕೆಲವು ಸದಸ್ಯರು ಒತ್ತಾಯಿಸಿದರು. “ಈಗ ಆಗಿರುವ ಕಟ್ಟಡಕ್ಕೆ ನನ್ನ ಅವಧಿಯಲ್ಲಿ ಅನುದಾನ ಬಂದಿರುವುದು” ಎಂದು ಮಾಜಿ ಅಧ್ಯಕ್ಷೆ ಪ್ರಫುಲ್ಲ ರೈ ಹೇಳಿದರು. ಆಗ ಮೀನಾಕ್ಷಿ ಗೌಡರು ಎಲ್ಲರೂ ಕಟ್ಟಡಕ್ಕಾಗಿ ದುಡಿದಿದ್ದಾರೆ. ಕೋವಿಡ್ ಕಾರಣದಿಂದ ಮಹಾಸಭೆ ಕರೆಯಲು ಸಾಧ್ಯ ಆಗಿರಲಿಕ್ಕಿಲ್ಲ. ಈಗಿನ ಅಧ್ಯಕ್ಷರು ೧೮ಕ್ಕೆ ಮಹಾಸಭೆ ಮಾಡುತ್ತಾರಂತಲ್ಲ. ನಾವು ತುಂಬಾ ಚರ್ಚೆ ಮಾಡೋದು ಬೇಡ. ನನಗೆ ಬೇರೆ ಕಾರ್ಯಕ್ರಮ ಇರುವುದರಿಂದ ನಾನು ಹೋಗುತ್ತೇನೆ ಎಂದು ಹೇಳಿ ಹೋದರು. “ಕೋವಿಡ್ ದೇಶಕ್ಕೆ ಬಂದಿದೆ. ನಾನು ಜಿಲ್ಲಾಧ್ಯಕ್ಷೆಯಾಗಿದ್ದಾಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸೇರಿಸಿ ಸಭೆ ನಡೆಸಿಲ್ಲವೇ” ಎಂದು ಹರಿಣಿ ಸದಾಶಿವ ಪ್ರಶ್ನಿಸಿದರು. `’ಸಭೆ ಕರೆಯಲು ನಾವು ಹೇಳಿದ್ದೇವೆ. ಸದಸ್ಯರು ನಮ್ಮನ್ನು ಕೂಡಾ ಪ್ರಶ್ನೆ ಮಾಡಿದ್ದಾರೆ. ಇಲ್ಲಿ ಸಮಸ್ಯೆ ಇರುವುದು ಸಮಿತಿಯವರಾದ ನಮಗೆ ಗೊತ್ತಿದೆ. ಇದನ್ನು ಜಿಲ್ಲೆಯವರು ಸರಿಪಡಿಸಲಿ” ಎಂದು ಮಧು ರಾಧಾಕೃಷ್ಣ ಬೊಳ್ಳೂರು ಹೇಳಿದರು.
ಮೀನಾಕ್ಷಿ ಗೌಡರು ಸಭೆಯಿಂದ ಹೋಗುತ್ತಿದ್ದಂತೆ, ಮಹಾಲಕ್ಷ್ಮೀ ಕೊರಂಬಡ್ಕ, ಹರಿಣಿ ಸದಾಶಿವ ಮತ್ತಿತರರು “ಮಾಜಿ ಅಧ್ಯಕ್ಷರನ್ನು ಒಳಗೊಂಡಂತೆ ಸಲಹಾ ಸಮಿತಿಯನ್ನು ಮಾಡಿ ಎಂದು ಒತ್ತಾಯ ಮಾಡಿದರಲ್ಲದೆ, ಹರಿಣಿ ಸದಾಶಿವ, ಚಂದ್ರಾಕ್ಷಿ ಜೆ ರೈ, ಹರ್ಷಾ ಕರುಣಾಕರ, ಪ್ರಫುಲ್ಲ ರೈ, ಮಹಾಲಕ್ಷ್ಮಿ ಕೊರಂಬಡ್ಕರು ವೇದಿಕೆಗೆ ಹೋಗಿ ಕುಳಿತರು. ಆದರೆ ಅಧ್ಯಕ್ಷೆ ಇಂದಿರಾ ರೈಯವರು ಈಗ ನಮ್ಮಲ್ಲಿ ಮೀನಾಕ್ಷಿ ಗೌಡರು ಸಲಹೆಗಾರರಾಗಿದ್ದಾರೆ. ಅವರು ಹೇಳದೆ ಹೊಸ ಸಲಹಾ ಸಮಿತಿ ಮಾಡಲು ಸಾಧ್ಯವೇ ಇಲ್ಲ. ನಾವು ಡಿ.೧೮ರಂದು ಮಹಾಸಭೆ ಕರೆಯುತ್ತೇವೆ” ಎಂದು ಹೇಳಿದರು. ಈ ವೇಳೆ ಕಟ್ಟಡದ ಬಾಡಿಗೆ ವಿಚಾರ, ಮಾಜಿ ಅಧ್ಯಕ್ಷರಿಗೆ ಗೌರವ ಸಿಗದಿರುವ ವಿಚಾರ, ಕಾರ್ಯಕ್ರಮದ ಮಾಹಿತಿ ನೀಡದಿರುವ, ಒಕ್ಕೂಟ ರಿನಿವಲ್ ಆಗದಿರುವ ಇತ್ಯಾದಿಗಳ ಕುರಿತು ಪ್ರಸ್ತಾಪವಾಗಿ ಚರ್ಚೆಯಾಯಿತು.
ಸಭೆಯಲ್ಲಿದ್ದವರು ಸಲಹಾ ಸಮಿತಿಗೆ ಒತ್ತಾಯಿಸಿದರೂ ಅಧ್ಯಕ್ಷರು ಒತ್ತಲಿಲ್ಲ. ಮಹಾಸಭೆ ಕರೆಯಲು ಪಟ್ಟು ಹಿಡಿದಾಗ ಡಿ.೫ರಂದು ಮಹಾಸಭೆ ಕರೆಯಲು ಅಧ್ಯಕ್ಷೆ ಇಂದಿರಾ ರೈಯವರು ಒಪ್ಪಿಕೊಂಡರು. ಬಳಿಕ ಸಭೆ ಮುಕ್ತಾಯಗೊಂಡಿತು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.