Breaking News

ಮರೆಯಬಾರದ ಮಹಾನ್ ಮದ್ದಳೆಗಾರ ತಂಟೆಪ್ಪಾಡಿ ಶಂಭಟ್ಟ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಲೇಖನ : ರಾಮಕೃಷ್ಣ ಭಟ್ ಚೂಂತಾರು, ಬೆಳಾಲು

ಸುಳ್ಯ ತಾಲೂಕಿನ ಕಳಂಜ – ಕೋಟೆಮುಂಡುಗಾರು ಗ್ರಾಮ ವ್ಯಾಪ್ತಿಯ ತಂಟೆಪ್ಪಾಡಿ ಮನೆತನ ಒಂದು ಕಲೆ, ಸಂಸ್ಕೃತಿ ಮತ್ತು ಧಾರ್ಮಿಕತೆಯನ್ನು ಪೋಷಿಸಿಕೊಂಡು ಬಂದ ಕುಟುಂಬ. ಒಂದು ಮನೆತನದ ಹೆಸರೇ ಇದೀಗ ಹತ್ತಾರು ಮನೆಗಳುಳ್ಳ ವ್ಯಾಪ್ತಿಯ ಪ್ರದೇಶವಾಗಿದೆ. ಇಲ್ಲಿ ಶಂಭಟ್ಟರ ಮನೆ ಬಲು ವಿಶಿಷ್ಟತೆಯನ್ನು ಹೊಂದಿದೆ. ಇದೀಗ ಮೂವತ್ತಕ್ಕಿಂತಲೂ ಅಧಿಕ ಮನೆಗಳನ್ನು ಹೊಂದಿರುವ ತಂಟೆಪ್ಪಾಡಿ ಕಾಯಾರ ಮತ್ತು ಚೂಂತಾರು ಮನೆಗಳಿಗೆ ಮೂಲಮನೆಯಾಗಿ, ಅನಾದಿಕಾಲದಿಂದಲೂ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವ ಚೌತಿ ಉತ್ಸವದ ಕೇಂದ್ರವಾಗಿದೆ. ಇಲ್ಲಿ ಸ್ವತಃ ಗಣಪತಿಯ ವಿಗ್ರಹವನ್ನು ಸ್ಥಾಪಿಸಿ, ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಮುನ್ನಡೆಸಿಕೊಂಡು, ಯಕ್ಷಗಾನ ಮತ್ತು ವಿವಿಧ ಕಲೆಗಳನ್ನು ಪೋಷಿಸಿ ಬೆಳೆಸಿದ ಕೀರ್ತಿ ಶಂಭಟ್ಟರಿಗೆ ಸಲ್ಲುತ್ತದೆ. ಇವರೋರ್ವ ಯಕ್ಷಗಾನರಂಗದಲ್ಲಿ, ಮರೆಯಬಾರದ ಆದರೆ ಮರೆತುಹೋದ ಮಹಾನ್ ಮದ್ದಳೆಗಾರರು, ಸವ್ಯಸಾಚಿ ಕಲಾಗಾರರು.
1910 ರ ನಂತರದ ದಶಕದಲ್ಲಿ ಬೆಳ್ಳಾರೆ ಮತ್ತು ಸುತ್ತಲಿನ ಹತ್ತೂರುಗಳಲ್ಲಿ, ಯಕ್ಷಗಾನ ಕ್ಷೇತ್ರದಲ್ಲಿ ಮಠತ್ತಡ್ಕ ರಾಮಕೃಷ್ಣಯ್ಯರ ಹೆಸರು ಬಹಳ ಜನಪ್ರಿಯ. ಅವರ ಶಿಷ್ಯರಾಗಿ ಬೆಳೆದ ತಂಟೆಪ್ಪಾಡಿ ಶಂಭಟ್ಟರು, ಯಕ್ಷಗಾನ ಪರಂಪರೆಯ ಶ್ರೇಷ್ಠ ಮದ್ದಳೆ ವಾದಕರು. 26-07-1922 ರಲ್ಲಿ ಜನಿಸಿದ ಇವರು ಕೋಟೆಮುಂಡುಗಾರು ಮತ್ತು ಬೆಳ್ಳಾರೆಯಲ್ಲಿ ಏಳನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ. ತೆಂಕುತಿಟ್ಟಿನ ಮೇರು ಭಾಗವತರೆಂದೇ ಪ್ರಸಿದ್ಧಿ ಹೊಂದಿದ್ದ ದಾಮೋದರ ಮಂಡೆಚ್ಚರ ಸಮಕಾಲೀನರು. ಸುಮಾರಾಗಿ ಹದಿನೆಂಟನೇ ವಯಸ್ಸಿನಲ್ಲೇ ಮದ್ದಳೆ ಅಭ್ಯಾಸಿಯಾಗಿ, ಮಂಡೆಚ್ಚರ ಪದಕ್ಕೆ ಮದ್ದಳೆ ಸಾಥ್ ನೀಡಿದವರು ಮಾತ್ರವಲ್ಲ ಇವರ ಕಲೆಗಾರಿಕೆಯ ನಿಪುಣತೆಯ ಬಗ್ಗೆ ಮೆಚ್ಚುಗೆ ಹೊಂದಿದ್ದವರು.

22-08-1992 ರಲ್ಲಿ ಅಗಲಿದ ಈ ಕಲಾವಿದರ ನೆನಪಿನಲ್ಲಿ ಇದೀಗ ಬೆಳ್ಳಾರೆ ವಸಂತ ಶೆಟ್ಟರು, ತಂಟೆಪ್ಪಾಡಿಯಲ್ಲಿ ತಾನು ಹುಟ್ಟು ಹಾಕಿದ ನಿನಾದ ಸಂಸ್ಥೆಯ ಆಶ್ರಯದಲ್ಲಿ ತಂಟೆಪ್ಪಾಡಿ ಶಂಭಟ್ಟರು – ಒಂದು ಸಾಂಸ್ಕೃತಿಕ ನೆನಪು ಎಂಬ ಕಾರ್ಯಕ್ರಮದ ಆಯೋಜನೆ ಮಾಡಿರುವುದು ಅತ್ಯಂತ ಸ್ತುತ್ಯರ್ಹ.ಅವರು ಇರುತ್ತಿದ್ದರೆ ಅವರಿಗೀಗ ನೂರರ ವಯಸ್ಸು. ಯೋಗಾಯೋಗವೇ ಇರಬೇಕು, ಈ ಹೊತ್ತಿನಲ್ಲಿ ಶಂಭಟ್ಟರ ನೆನಪು ನೂರಾರು ವರ್ಷಗಳ ಪರ್ಯಂತ ಶಾಶ್ವತವಾಗಲಿ, ಪ್ರಸ್ತುತ ಕಾಲಮಾನದ ಯಕ್ಷಗಾನ ಕಲಾವಿದರಿಗೆ ಮಾದರಿಯಾಗಲಿ ಎಂಬ ಆಶಯ ನಮ್ಮದು.

ಇವರ ತಂದೆ ಶಿವರಾಮ ಭಟ್ಟ ,ತಾಯಿ ಪರಮೇಶ್ವರಿ. ಕೋಣಮ್ಮೆ ಶಂಕರ ಭಟ್ಟರಲ್ಲಿ ಸಂಸ್ಕೃತ ಮತ್ತು ಯಜುರ್ವೇದ ಮಂತ್ರ, ಶಾಸ್ತ್ರಗಳ ಅಧ್ಯಯನ ಮಾಡಿ, ವೇದ ಪಂಡಿತರಾಗಿ ಪೌರೋಹಿತ್ಯವನ್ನೂ ಮಾಡಿದವರು. ಅದೇನೋ ಪೌರೋಹಿತ್ಯ ಅವರ ಕೈಹಿಡಿಯಲಿಲ್ಲ. ಕೃಷಿಯೊಂದಿಗೆ ಮದ್ದಳೆ ಕೈ ಹಿಡಿಯಿತು.
ಮದ್ದಳೆ ವಾದಕರಾಗಿ ಇವರು 1940 ರ ನಂತರ ಸುಮಾರಾಗಿ 1980 ರವರೆಗೂ ತನ್ನೂರಿಗೇ ಮೀಸಲಾದ ಮದ್ದಳೆಗಾರರಾಗಿದ್ದರು. ಬೆಳ್ಳಾರೆ, ಕಲ್ಮಡ್ಕ, ಕಳಂಜ, ಬಾಳಿಲ, ಚೊಕ್ಕಾಡಿ, ದೊಡ್ಡತೋಟ, ಕುಕ್ಕುಜಡ್ಕ ಮೊದಲಾದ ಗ್ರಾಮಗಳಲ್ಲಿ ನಡೆಯುವ ಯಕ್ಷಗಾನ ಮತ್ತು ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸದಾ ಲಭ್ಯವಿರುವ ಕಲಾವಿದರಾಗಿದ್ದರು. ಅಜ್ಜನಗದ್ದೆ ಗಣಪ್ಪಯ್ಯ ಭಾಗವತರು, ದಾಸರಬೈಲು ಚನಿಯ ನಾಯ್ಕ, ಶಿಕ್ಷಕರಾಗಿದ್ದ ಅರ್ನಾಡಿ ಶಿವರಾಮ ಭಟ್ಟ ಮೊದಲಾದವರಿಗೆ ಮದ್ದಳೆವಾದಕರಾಗಿ ಕಲಾ ಸೇವೆಯನ್ನು ಮಾಡಿದ್ದಾರೆ. ಚೊಕ್ಕಾಡಿ, ದೊಡ್ಡತೋಟದಲ್ಲಿ ಯಕ್ಷಗಾನ ಸಂಬಂಧಿತ ಕಲಾ ಸಂಸ್ಥೆಗಳಲ್ಲಿ ಪೋಷಕರಾಗಿ, ಕಲಾವಿದರಾಗಿ ಇವರು ಸಲ್ಲಿಸಿದ ಸೇವೆ ಅನನ್ಯ.
ಇವರೋರ್ವ ಸ್ವಯಂ ಪ್ರಭೆಯ ಸವ್ಯಸಾಚಿ ಕಲಾವಿದರು. ಯಾವುದೇ ಕಲಾ ಪ್ರಕಾರ ಕಲಿಯಬೇಕೆಂದರೆ ಸ್ವಯಂ ಆಗಿ ಕಲಿತು, ಪ್ರದರ್ಶಿಸಬಲ್ಲ ಏಕಲವ್ಯ ಪ್ರತಿಭೆ ಇವರದು. ಈ ಹಿನ್ನೆಲೆಯಲ್ಲಿ ಇವರು ಮದ್ದಳೆಯೊಂದಿಗೆ ಮೃದಂಗವಾದನ, ಹಾರ್ಮೋನಿಯಂ, ಕೊಳಲು, ವಯಲಿನ್, ಮೋಸಿಂಗ್, ಘಟಂ ವಾದ್ಯಗಳನ್ನೂ ಅಭ್ಯಾಸ ಮಾಡಿ ಮನೆಯಲ್ಲೇ ನುಡಿಸಿ ಆನಂದಿಸುತ್ತಿದ್ದರು. ಗಣೇಶನ ವಿಗ್ರಹ ರಚನೆಯಲ್ಲಿ ಎತ್ತಿದ ಕೈ.ಜೊತೆಗೆ ಮದುವೆ ಮಂಟಪ ರಚನೆ (ಮುಂಡುಗಾರು ರಾಮರಾಯರು ಇವರ ಜೊತೆಗಾರರು) ಮತ್ತು ಅಲಂಕಾರ, ಚಿತ್ರಕಲೆ ಇವುಗಳಲ್ಲಿ ವಿಶೇಷ ಪರಿಣತಿ. ಇಂತಹ ಓರ್ವ ಅಭಿಜಾತ ಕಲಾವಿದರು ನಮ್ಮ ನಡುವೆ ಬದುಕಿದ್ದರು ಎಂಬುದೇ ವಿಸ್ಮಯದ ಸಂಗತಿ. ಮನೆಯ ಯಜಮಾನನಾಗಿ, ಕೌಟುಂಬಿಕ ಜವಾಬ್ದಾರಿಯೊಂದಿಗೆ ಆದರಾತಿಥ್ಯ, ದಾನಧರ್ಮಗಳಿಗೆ ತೆರೆದಮನ ಮತ್ತು ಮನೆ ಅವರದು.
ಎಲೆಯಮರೆಯ ಕಾಯಿಯಂತೆ, ಯಕ್ಷಗಾನದ ಶುದ್ಧ ಪರಂಪರೆಯ ಕೊಂಡಿಯಾಗಿ, ತೀರಾ ಹಳ್ಳಿಪ್ರದೇಶಗಳಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿದ, ಯುವ ಕಲಾವಿದರಿಗೆ ಪ್ರೇರಣೆಯಾಗಿದ್ದ ಹಿರಿ ತಲೆಮಾರಿನ ಕಲಾವಿದರು. ಹಲವು ಯುವಕರಿಗೆ ಮದ್ದಳೆಯನ್ನು ಕಲಿಸಿದ ಗುರುಗಳೂ ಆಗಿದ್ದಾರೆ. ಮೃದಂಗ ವಾದಕರೂ ಆಗಿದ್ದ ಇವರ ಮದ್ದಳೆವಾದನದಲ್ಲಿ ಬಲು ಅಪರೂಪದ ಮತ್ತು ವಿಶೇಷತೆಯ ಟ್ಯಾಂಕಿ ಪೆಟ್ಟನ್ನು ಅತ್ಯಂತ ನಾಜೂಕಾಗಿ ಬಾರಿಸುವವರು ಎಂದು ಯಕ್ಷಗಾನ ಕಲಾವಿದರಾದ ಡಾ. ಶ್ರೀಕೃಷ್ಣ ಚೊಕ್ಕಾಡಿ ಮತ್ತು ಅರ್ನಾಡಿ ಶಿವರಾಮ ಭಟ್ಟರು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ. ಹೊಂದಾಣಿಕೆಯೊಂದಿಗೆ ಸಹಕಲಾವಿದರಿಗೆ ಪ್ರೋತ್ಸಾಹ ನೀಡಿ, ಕಲಾರಂಗಕ್ಕೆ ಪ್ರವೇಶಿಸುವವರಿಗೆ ಪೋಷಕರಾಗಿದ್ದವರು. ಯಾವ ಶೃತಿಗೆ ಬೇಕೋ ಆ ಶೃತಿಗನುಗುಣವಾಗಿ ಮದ್ದಳೆಯನ್ನು ಸಿದ್ಧಗೊಳಿಸುವ ಮತ್ತು ಭಾಗವತರ ಶೃತಿಯನ್ನನುಸರಿಸಿ ಮದ್ದಳೆ ಬಾರಿಸುವ ಶಂಭಟ್ಟರ ಕಲಾನೈಪುಣ್ಯತೆ ಮರೆಯಲಾಗದ್ದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.