ಸುಳ್ಯದ ಶುದ್ಧ ಕುಡಿಯುವ ನೀರಿಗೆ ಯೋಜನೆ ರೂಪಿಸಲಿ
ಸಚಿವ ಅಂಗಾರರ ನಾಟಕ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು
ಸುಳ್ಯ ಕ್ಷೇತ್ರದಲ್ಲಿ ಕಳೆದ ೨೮ ವರ್ಷದಿಂದ ಶಾಸಕರಾಗಿ, ಈಗ ಸಚಿವರಾಗಿರುವ ಎಸ್.ಅಂಗಾರರಿಗೆ ಸುಳ್ಯಕ್ಕೆ ಶುದ್ಧ ಕುಡಿಯುವ ನೀರಿನ ಯೋಜನೆ ರೂಪಿಸಲು ಸಾಧ್ಯವಾಗಿಲ್ಲ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ನಾಟಕ ಎಂದು ಹೇಳುವುದು ಎಷ್ಟು ಸರಿ?” ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ ಪ್ರಶ್ನಿಸಿದ್ದಾರೆ.
ಸುಳ್ಯದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು, “ಕಾಂಗ್ರೆಸ್ ಪಾದಯಾತ್ರೆಯನ್ನು ನಾಟಕ ಎಂದು ಸಚಿವ ಅಂಗಾರರು ಹೇಳಿದ್ದಾರೆ. ಅವರಿಗೆ ಈ ಮಾತು ಶೋಭೆ ತರುವುದಿಲ್ಲ. ಮೇಕೆದಾಟು ಯೋಜನೆ ಜಾರಿಯಾದರೆ ಆ ಭಾಗದ ಜನರ ಕುಡಿಯುವ ನೀರು, ಕೃಷಿಗೆ, ವಿದ್ಯುತ್ ಸೌಲಭ್ಯಕ್ಕೆ ಪ್ರಯೋಜನವಾಗುತ್ತದೆ. ಸರಕಾರ ಜನರ ಬೇಡಿಕೆಯ ಕೆಲಸ ಮಾಡದಿದ್ದಾಗ ವಿಪಕ್ಷವಾಗಿ ನಾವು ಹೋರಾಟ ಮಾಡುವುದು ನಮ್ಮ ಹಕ್ಕು. ಕಳೆದ ೨೮ ವರ್ಷದಿಂದ ಅಂಗಾರರು ಸುಳ್ಯದ ಶಾಸಕರಾಗಿದ್ದಾರೆ. ಸುಳ್ಯ ನಗರಕ್ಕೆ ಶುದ್ಧ ಕುಡಿಯುವ ನೀರು ಬೇಕೆಂದು ಜನರು ಒತ್ತಾಯಿಸುತ್ತಿದ್ದರೂ ಇವರು ಅದಕ್ಕಾಗಿ ಏನು ಯೋಜನೆ ಮಾಡಿದ್ದಾರೆ? ಕಾಂಗ್ರೆಸ್ ಹೋರಾಟ ಬಗ್ಗೆ ಮಾತನಾಡುವ ಬದಲು ಸುಳ್ಯ ನಗರಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವ ಸಂಕಲ್ಪ ಮಾಡಲಿ. ಇಲ್ಲದಿದ್ದರೆ ಸುಳ್ಯದಲ್ಲಿಯೂ ನೀರಿಗಾಗಿ ನಾವು ಪಾದಯಾತ್ರೆ ಮಾಡುವ ಅನಿವಾರ್ಯತೆ ಎದುರಾಗಬಹುದು ಎಂದು ಅವರು ಎಚ್ಚರಿಕೆ ನೀಡಿದರು. ಈಗ ಸುಳ್ಯದಲ್ಲಿ ವಿದ್ಯುತ್ ಅಭಾವ ಸಾಕಷ್ಟು ಇದೆ. ೧೧೦ ಕೆ.ವಿ. ಸಬ್ಸ್ಟೇಶನ್ ಮಾಡುವ ಕುರಿತು ಅವರು ಸಂಕಲ್ಪ ತೊಡಲಿ ಎಂದು ಪಿ.ಸಿ. ಜಯರಾಮ್ ಹೇಳಿದರು.
ಬರ್ನಿಂಗ್ ಮೆಷಿನ್ ಏನಾಯ್ತು ? : ಸುಳ್ಯ ನಗರದ ಕಸದ ಸಮಸ್ಯೆ ನಿವಾರಿಸಲೆಂದು ಕಲ್ಚೆರ್ಪೆಯಲ್ಲಿ ಬರ್ನಿಂಗ್ ಮೆಷಿನ್ ಅಳವಡಿಸಲಾಗಿದೆ. ಅ.೧೫ರಂದು ಅದರ ಪ್ರಾತ್ಯಕ್ಷತೆ ನಡೆಸಿ, ಒಂದು ತಿಂಗಳೊಳಗೆ ಕಾರ್ಯಾರಂಭ ಮಾಡಿಸುತ್ತೇವೆಂದು ನ.ಪಂ. ಅಧ್ಯಕ್ಷ ವಿನಯ ಕಂದಡ್ಕರು ಹೇಳಿದ್ದರು. ಆದರೆ ಅವರ ಮಾತು ಭರವಸೆಯಾಗಿದೆ ಹೊರತು ಅಲ್ಲಿ ಕೆಲಸ ಮಾಡಿಲ್ಲ. ಮತ್ತು ಅಲ್ಲಿ ಅಳವಡಿಸಿದ ಮೆಷಿನ್ ಅಲ್ಲಿಯ ಕಸ ಬರ್ನ್ ಮಾಡಲು ಸಾಧ್ಯವಾಗುವುದಿಲ್ಲವೆಂದು ಹೇಳುತ್ತಿದ್ದಾರೆ ಎಂದು ಹೇಳಿದರು. ಒಟ್ಟಾರೆಯಾಗಿ ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿದರು.
ಕಲ್ಚೆಪ್ಯೆ ಸಮಸ್ಯೆಯ ಕುರಿತು ನಾನು ೩ ತಿಂಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೆವು. ೩ ತಿಂಗಳಾದರೂ ನಮಗೆ ಉತ್ತರ ಬಂದಿಲ್ಲ. ಒಂದು ಪತ್ರಕ್ಕೆ ೩ ತಿಂಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಉತ್ತರ ನೀಡಲು ಸಾಧ್ಯವಾಗುವುದಿಲ್ಲವಾದರೆ ಅವರು ಸುಳ್ಯಕ್ಕೆ ಬಮದು ಅಧಿಕಾರಿಗಳನ್ನು ತರಾಟೆಗೆತ್ತಿಕೊಳ್ಳುತ್ತಾರೆಂದರೆ ಏನು ಹೇಳಬೇಕು?” ಎಂದು ಪ್ರಶ್ನಿಸಿದರು.
“ಸುಳ್ಯದ ಶುದ್ಧ ಕುಡಿಯುವ ನೀರಿನ ಬಗ್ಗೆ ನಾವು ಹಲವು ಬಾರಿ ಒತ್ತಾಯಿಸಿದರೂ ವ್ಯವಸ್ಥೆ ಆಗಿಲ್ಲ. ಆದ್ದರಿಂದ ಶೀಘ್ರವಾಗಿ ಈ ಕೆಲಸ ಆಗಬೇಕು” ಎಂದು ನ.ಪಂ. ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ಮಾತನಾಡಿ, “ಸುಳ್ಯ – ಕೊಡಿಯಾಲಬೈಲು – ದುಗಲಡ್ಕ ಅತೀ ಅಗತ್ಯವಾಗಿ ಅಭಿವೃದ್ಧಿಯಾಗಬೇಕಾದ ರಸ್ತೆ. ಈ ಬಾರಿಯ ಬಜೆಟ್ ನಲ್ಲಾದರೂ ಅದಕ್ಕೆ ಅನುದಾನ ಬರುವಂತೆ ಸಚಿವರು ಮಾಡಬೇಕು. ಒಂದು ಯೋಜನೆ ಮಾಡುವಾಗ ದೂರದೃಷ್ಠಿ ಇಟ್ಟುಕೊಂಡು ಕಾರ್ಯಪ್ರವೃತ್ತರಾಗಬೇಕಾಗಿದೆ. ಸುಳ್ಯದ ನೀರಿನ ಡಿಪಿಆರ್ ಏನಾಗಿದೆ? ನಗರದಲ್ಲಿ ಒಂದು ಸಭೆಯನ್ನೂ ಸಚಿವ ಅಂಗಾರರು ಮಾಡುವುದಿಲ್ಲ ಎಂದು ಹೇಳಿದ ಅವರು, ಜಿಲ್ಲಾಧಿಕಾರಿಗಳು ಸುಳ್ಯದಲ್ಲಿ ಬಂದು ಬಾಗಿಲು ಮುಚ್ಚಿ ಸಭೆ ಮಾಡುತ್ತಾರೆ. ಅಲ್ಲಿ ಏನು ಚರ್ಚೆಯಾಗುತ್ತದೆ ಎಂದು ನಮಗೆ ಗೊತ್ತಾಗುವುದಿಲ್ಲ ಎಂದು ಅವರು ಹೇಳಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ., ಶಾಫಿ ಕುತ್ತಮೊಟ್ಟೆ, ಭವಾನಿ ಶಂಕರ್ ಕಲ್ಮಡ್ಕ ಇದ್ದರು.