ಸುಳ್ಯ ತಾಲೂಕು ಬಾಳಿಲ ಗ್ರಾಮದಲ್ಲಿ ಗ್ರಾಮೀಣ ನೀರು ಸರಬರಾಜು (RWS) ವತಿಯಿಂದ ಜಲಜೀವನ್ ಮಿಷನ್ ನ ಹ್ಯಾಬಿಟೇಷನ್ ಕಾಮಗಾರಿಯು ನಡೆಯುತ್ತಿದೆ. ಈ ಕಾಮಗಾರಿಯು ನಿಂತಿಕಲ್, ಬೆಳ್ಳಾರೆಯ ಮಧ್ಯೆ ಹಾದುಹೋಗುವ ಬಾಳಿಲದಲ್ಲಿ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಮಾಡಿರುವುದು ವಿಪರ್ಯಾಸ. ಈ ಪೈಪ್ ಲೈನ್ ಕಾಮಗಾರಿಯನ್ನು ಬಾಳಿಲದಲ್ಲಿ ರಾಜ್ಯ ಹೆದ್ದಾರಿ ಸಮೀಪ ರಸ್ತೆ ಬದಿಯಿಂದ ಕೇವಲ ಅರ್ಧ ಮತ್ತು ಒಂದು ಮೀಟರ್ ಅಂತರಲ್ಲಿ ನಿರ್ಮಿಸಿರುವುದರಿಂದ ಅದರ ಮೇಲೆ ವಾಹನಗಳು ಹಾದು ಹೋಗುವ ಸಂಭವಗಳು ಹೆಚ್ಚು.ಈಗಾಗಲೇ ಆ ಜಾಗದಲ್ಲಿ ಎತ್ತರವಾಗಿರುವ ಮಣ್ಣಿನ ದಿಬ್ಬದ ಮೇಲೆ ಅಟೋ ರಿಕ್ಷಾ ಚಲಿಸಿ ಅದು ಮಗುಚಿ ಬಿದ್ದ ಘಟನೆಯು ನಡೆದಿರುತ್ತದೆ.ಮಾತ್ರವಲ್ಲ ಈ ರಸ್ತೆಯು ಮೇಲ್ದರ್ಜೆಗೇರಿರುವುದರಿಂದ ಮುಂದೆ ರಸ್ತೆಯು ಅಗಲ ಆಗುವ ಸಂಧರ್ಭದಲ್ಲಿ ಈ ಪೈಪ್ ಲೈನ್ ಡಾಮಾರ್ ನ ಅಡಿಯಲ್ಲಿ ಸಿಲುಕಿ ವಾಹನ ಸಾಗುವಾಗ ಪೈಪ್ ಒಡೆದು ರಸ್ತೆ ಹಾಳಾಗುವುದರ ಜೊತೆಗೆ ಪೈಪನ್ನು ಜೋಡಣೆ ಮಾಡಲು ಕೂಡಾ ತುಂಬಾ ಕಷ್ಟವಾಗಲಿದೆ.ಇಲ್ಲಿ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಹೆದ್ದಾರಿ ಮಾರ್ಗದರ್ಶನ ಸೂತ್ರವನ್ನು ಸಂಪೂರ್ಣ ನಿರ್ಲಕ್ಷಿಸಿ ಕಾಮಗಾರಿ ಪೂರ್ತಿಗೊಳಿಸಿದೆ.
ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಪಿಡಬ್ಲುಡಿ ಇಲಾಖೆಯಿಂದ ಯಾವುದೇ ನಿರಾಕ್ಷೇಪಣಾ ಪತ್ರವನ್ನು ಕೂಡಾ ಪಡೆಯಲಾಗಿಲ್ಲ. ಇದರ ಬಗ್ಗೆ ಪಿಡಬ್ಲ್ಯೂಡಿ ಇಂಜಿನಿಯರ್ ಆಕ್ಷೇಪ ವ್ಯಕ್ತಪಡಿಸಿದರೂ ಕೂಡಾ ಅದನ್ನು ಕಡೆಗಣಿಸಿರುವುದು ಬೆಳಕಿಗೆ ಬಂದಿದೆ.ಮಾತ್ರವಲ್ಲ ಸ್ಥಳೀಯ ಜನಪ್ರತಿನಿದಿನಗಳು ಹಾಗೂ ಸಾರ್ವಜನಿಕರು ಮೌಖಿಕವಾಗಿ ಸಂಬಂಧಪಟ್ಟವರಿಗೆ ದೂರನ್ನು ನೀಡಿರುತ್ತಾರೆ. ಅದನ್ನು ಕೂಡಾ ಪರಿಗಣಿಸದೆ ಇಲಾಖೆ ನಿರ್ಲಕ್ಷವಹಿಸಿದೆ.ಆದ್ದರಿಂದ ಈ ಕಾಮಗಾರಿಯನ್ನು ರಸ್ತೆ ಅಂಚು ಬಿಟ್ಟು ಸ್ವಲ್ಪ ದೂರದಲ್ಲಿ ಕಾಮಗಾರಿ ನಡೆಸಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಇಲಾಖಾ ಉನ್ನತ ಅಧಿಕಾರಿಗಳಿಗೆ ಮತ್ತು ಲೋಕಾಯುಕ್ತಕ್ಕೆ ದೂರನ್ನು ನೀಡುವುದಾಗಿ ಸಾಮಾಜಿಕ ಹೋರಾಟಗಾರ ಹಾಗೂ ಆರ್ಟಿಐ ಕಾರ್ಯಕರ್ತರಾದ ಶರೀಫ್ ಭಾರತ್ ಬಾಳಿಲ ಅವರು ಪತ್ರಿಕಾ ಹೇಳಿಕೆಯನ್ನು ನೀಡಿರುತ್ತಾರೆ.