ಪ್ರತಿಭಟಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಜಾಲ್ಸೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಧರಣಿ
ಜಾಲ್ಸೂರು ಗ್ರಾಮದ ನಡುಬೆಟ್ಟು ಎಂಬಲ್ಲಿ ಬಡ ಕುಟುಂಬದ ಹರಿಣಾಕ್ಷಿ ಎಂಬುವವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸುಮಾರು 30 ವರ್ಷಗಳಿಂದ ಮನೆಯಿಲ್ಲದೆ ಒಂದು ಸಣ್ಣ ಗುಡಿಸಲು ನಿರ್ಮಿಸಿ ಅಲ್ಲಿ ವಾಸಿಸುತ್ತಿದ್ದರು. ಹರಿಣಾಕ್ಷಿ ರವರ ಹೆಸರಿನಲ್ಲಿ 2018ರಲ್ಲಿ ಸರ್ವೆ ನಂಬರ್ 243. 1ಎ 1ಎ 1ಎ ಪಿ 1 94.ಸಿಯಲ್ಲಿ ಹಕ್ಕುಪತ್ರ ಹೊಂದಿದ್ದು, ಇದೀಗ ಆ ಸ್ಥಳದಲ್ಲಿ ಸಣ್ಣ ಮನೆ ನಿರ್ಮಾಣಕ್ಕೆ ಮುಂದಾದರು. ಈ ಸಂದರ್ಭ ಸ್ಥಳೀಯ ನಿವಾಸಿಯೊಬ್ಬರು ಮನೆ ಕಟ್ಟಲು ತಡೆ ಉಂಟು ಮಾಡುತ್ತಿದ್ದು ಅದನ್ನು ಪ್ರತಿಭಟಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ಸಂಘಟನೆಯವರು ಜಾಲ್ಸೂರು ಗ್ರಾಮ ಪಂಚಾಯತ್ ಮುಂಭಾಗ ಧರಣಿ ಕುಳಿತ ಘಟನೆ ಇಂದು ವರದಿಯಾಗಿದೆ.
ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಕುಟುಂಬ ಇದೀಗ ಸಾಲಸೂಲ ಮಾಡಿ ಒಂದು ಸಣ್ಣ ಮನೆ ನಿರ್ಮಿಸಲು ತೀರ್ಮಾನಿಸಿದ್ದು ಜಾಲ್ಸೂರು ಗ್ರಾಮ ಪಂಚಾಯಿತಿಗೆ ಆ ಜಾಗದಲ್ಲಿ ಮನೆ ಕಟ್ಟಲೆಂದು ಅರ್ಜಿ ಹಾಕಿ ಮನೆ ಕಟ್ಟಲು ಅವರು ಮುಂದಾದಾಗ ಸ್ಥಳೀಯ ನಿವಾಸಿ ಪ್ರೇಮನಾಥ ಜಾಲ್ಸೂರು s/o ಶಿವನಗೌಡ ಎಂಬವರು ಹರಿಣಾಕ್ಷಿ ಎಂಬವರಿಗೆ ಹಕ್ಕುಪತ್ರ ಆಗಿರುವಂತ ಜಾಗದಲ್ಲಿ ಮನೆ ಕಟ್ಟಬಾರದು. ಆ ಜಾಗ ನನಗೆ ಸೇರಿದ್ದು,ಈಗಾಗಲೇ ಕೋರ್ಟಿನಿಂದ ತಡೆಯನ್ನು ತಂದಿರುತ್ತೇನೆ ಎಂದು ಹೇಳಿ ಬೆದರಿಕೆ ಒಡ್ಡಿ ಜಾಲ್ಸೂರು ಪಂಚಾಯಿತಿಗೆ ಹೋಗಿ ಪಿಡಿಒ ರವರ ಬಳಿ ಮನೆ ಕಟ್ಟಲು ಬಿಡಬಾರದೆಂದು ಹೇಳಿರುತ್ತಾರೆ ಎನ್ನಲಾಗಿದೆ.
ಘಟನೆಯಿಂದ ಹರಿಣಾಕ್ಷಿ ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರನ್ನು ನೀಡಿ ತಮಗೆ ನ್ಯಾಯ ಕೊಡಿಸುವಂತೆ ಸಂಘಟನೆಯ ಮೊರೆಹೋಗಿದ್ದಾರೆ.
ದೂರು ಸ್ವೀಕರಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ನಡುಬೆಟ್ಟು ಎಂಬ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಾಲ್ಸೂರು ಗ್ರಾಮ ಪಂಚಾಯಿತಿ ಪಿಡಿಒ ಅವರೊಂದಿಗೆ ಮಾತನಾಡಿ ಹಕ್ಕುಪತ್ರ ಹೊಂದಿರುವ ಫಲಾನುಭವಿಗಳು ಮನೆ ಕಟ್ಟಲು ಮುಂದಾದಾಗ ಅವರನ್ನು ತಡೆಯುವುದು ಏಕೆಂದು ಪ್ರಶ್ನಿಸಿದ್ದಾರೆ.
ಪ್ರಶ್ನೆಗೆ ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಇಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಅಧ್ಯಕ್ಷ ಹಾಗೂ ಸದಸ್ಯರು ಫಲಾನುಭವಿ ಹರಿಣಾಕ್ಷಿ ಮತ್ತು ಅವರ ಪತಿ ಜನಾರ್ಧನ, ಪುತ್ರ ಸಚಿನ್ ರವರೊಂದಿಗೆ ಸೇರಿ ಪಂಚಾಯತ್ ಬಾಗಿಲಿನಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಧರಣಿ ಆರಂಭಿಸಿದ ಒಂದು ಗಂಟೆಯ ನಂತರ ಪ್ರತಿಭಟನಾ ಸ್ಥಳಕ್ಕೆ ಬಂದ ಪಿ ಡಿ ಓ ನಮಗೆ ಬಂದಿರುವ ದೂರಿನಲ್ಲಿ ಇರುವ ಸರ್ವೇ ನಂಬರ್ ಹರಿಣಾಕ್ಷಿ ರವರ ಮನೆ ಕಟ್ಟಲು ಇರುವ ಜಾಗದ ಸರ್ವೆ ನಂಬರ್ ಗೂ ವ್ಯತ್ಯಾಸಗಳಿದ್ದು ಹರಿಣಾಕ್ಷಿ ಮನೆ ಕಟ್ಟುವುದು ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಆದ್ದರಿಂದ ನಾಳೆ ನಡೆಯಲಿರುವ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅವರಿಗೆ ಮನೆ- ಕಟ್ಟಲು ಅನುಮತಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಪಿಡಿಓ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ರವರು ನೀಡಿದ ಭರವಸೆಯ ಹಿನ್ನಲೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯವರು ಪ್ರತಿಭಟನೆಯನ್ನು ನಿಲ್ಲಿಸಿ ಘಟನೆಯನ್ನು ಸುಖಾಂತ್ಯ ಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿ ಸುಂದರ ಪಾಟಜೆ ವಿನಾಕಾರಣ ಅಧಿಕಾರಿಗಳು ದಲಿತ ಸಮುದಾಯದವರನ್ನು, ಬಡವರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಿಷಯಗಳಿಗೆ ಪ್ರತಿಭಟನೆ ಮಾಡದೆ ಬಡವರಿಗೆ ನ್ಯಾಯ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಬಡವರನ್ನು ನಿರ್ಗತಿಕರನ್ನು ವಿನಾಕಾರಣ ತೊಂದರೆ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಮುಖಂಡ ಪ್ರವೀಣ್ ಪಿಲಿಕೋಡಿ ಉಪಸ್ಥಿತರಿದ್ದರು.