ಆರೋಪ ನಿರಾಕರಿಸಿದ ಪೊಲೀಸರು
ಠಾಣೆಗೆ ಎಸ್.ಪಿ.ಭೇಟಿ : ವಿಚಾರಣೆ
ಬೆಳ್ಳಾರೆ ಪೋಲಿಸರು ತನ್ನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದು, ತನಗೆ ನ್ಯಾಯ ಸಿಗಬೇಕೆಂದು ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ನಡೆದಿದೆ.
ಬೆಳ್ಳಾರೆ ಸಮೀಪದ ಪಾಲ್ತಾಡಿನ ಅಜಿತ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಯಬಿಟ್ಟಿದ್ದು ಅದರಲ್ಲಿ ತನಗೆ ಬೆಳ್ಳಾರೆ ಪೊಲೀಸರು ಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಸಂಜೆ ದ.ಕ. ಜಿಲ್ಲಾ ಪೋಲೀಸ್ ವರಿಷ್ಢಾಧಿಕಾರಿಗಳು ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸಿರುವುದಾಗಿ ತಿಳಿದುಬಂದಿದೆ.
ಏನಿದು ಪ್ರಕರಣ!?
ಜ14 ರಂದು ಅಜಿತ್ ಎಂಬಾತ ಬೆಳ್ಳಾರೆ ಪೊಲೀಸ್ ಠಾಣೆಗೆ ಬಂದಿದ್ದು, ತನಗೆ ಆಟೋ ಚಾಲಕನಿಂದ ಹಲ್ಲೆಯಾಗಿದೆ ಎಂದು ದೂರು ನೀಡಿದ್ದ. ಮರುದಿನ ಅಂದರೆ ಜ.15 ರಂದು ಮಾರ್ಷಲ್ ಎಂಬ ಹೆಸರಿನ ಆಟೋ ಚಾಲಕ ಬೆಳ್ಳಾರೆ ಠಾಣೆಗೆ ಬಂದು ತನಗೆ ಅಜಿತ್ ಎಂಬಾತ ತನಗೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದ ಎಂದು ದೂರು ನೀಡಿದ್ದ. ಇಬ್ಬರನ್ನೂ ಕೂಡ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಿಸಲಾಗಿದ್ದು, ಇಬ್ಬರ ನಡುವೆ ಮಾತುಕತೆಯಾಗಿ ನಂತರ ರಾಜಿ ಸಂಧಾನ ಮಾಡಲಾಗಿತ್ತು.
ಜ. 16 ರಂದು ಬೆಳ್ಳಾರೆಯಲ್ಲಿ ಹೋಟೆಲ್ ಹೊಂದಿರುವ ತಾರಾಮತಿ ಎಂಬವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು ತಮ್ಮ ಹೋಟೆಲ್ ಗೆ ಬಂದು ಅಜಿತ್ ಎಂಬಾತ ತನಗೆ ಕೊರಗಜ್ಜ ಮೈಮೇಲೆ ಬರುತ್ತಾನೆ, ನನಗೆ ಅಪರಿಮಿತ ಶಕ್ತಿ ಇದೆ ಎಂದು ಹೇಳುತ್ತಾ ವಿನಾಕಾರಣ ಕಿರುಕುಳ ನೀಡುತ್ತಿದ್ದು ಮೈಗೆ ಕೈ ಹಾಕಿರುವುದಾಗಿ ದೂರು ನೀಡಿದ್ದರು. ಈ ವಿಚಾರವಾಗಿ ಅಜಿತ್ ನನ್ನು ಮತ್ತೆ ಠಾಣೆಗೆ ಕರೆಸಿದ್ದು, ಪೊಲೀಸರು ವಿಚಾರಣೆ ನಡೆಸುವ ವೇಳೆ ಆತ ಮಾನಸಿಕ ಅಸ್ವಸ್ಥನಂತೆ ವರ್ತಿಸುವುದು ಅಲ್ಲದೇ ವಿಪರೀತ ಮದ್ಯ ಸೇವಿಸುವ ವಿಚಾರ ಬೆಳಕಿಗೆ ಬಂದಿತ್ತು.
ನಂತರ ಮಂಜು ಮತ್ತು ಓವಿನ್ ಪಿಂಟೋ ಎಂಬವರು ಠಾಣೆಗೆ ಬಂದಿದ್ದು, ಅಜಿತ್ ನನ್ನು ಠಾಣೆಯಿಂದ ಕರೆದುಕೊಂಡು ಹೋಗಿದ್ದರು.
ಮಹಿಳೆಯೋರ್ವರು ತನ್ನ ಮೇಲೆ ಪೊಲೀಸು ದೂರು ನೀಡಿದ್ದು ತನ್ನ ಮೇಲೆ ಆಪಾದನೆ ಬರಬಹುದೆಂದು ಹಾಗೂ ಪೋಲಿಸರು ದೂರು ದಾಖಲಿಸುವರೆಂಬ ಭಯದಿಂದ ಹೆದರಿರುವ ಅಜಿತ್
ಭೀತಿಗೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲದಲ್ಲಿ ಹರಿಯಬಿಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಲ್ಲದೇ ತಾನು ಜೇನು ತೆಗೆಯಲು ಹೋದ ವೇಳೆ ತನಗೆ ಜೇನು ನೊಣ ಕಚ್ಚಿರುವ ವಿಚಾರವನ್ನು ರಜಾಕ್ ಎಂಬವರೊಂದಿಗೆ ಅಜಿತ್ ಹಂಚಿಕೊಂಡಿರುವ ವಿಚಾರವನ್ನು ರಜಾಕ್ ಎಂಬವರೇ ಠಾಣಾಧಿಕಾರಿ ಆಂಜನೇಯ ರೆಡ್ಡಿ ಅವರೊಂದಿಗೆ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ವೀಡಿಯೋದಲ್ಲಿ ಬಾಲಕೃಷ್ಣ ಪೊಲೀಸ್ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದು ಬಾಲಕೃಷ್ಣ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ ನಾನು ಹಲ್ಲೆ ನಡೆಸಿಲ್ಲವೆಂದು ವಿವರಣೆ ನೀಡಿದ್ದು, ಆತನ ಬಳಿ ಯಾವಾಗಲೂ ಚೂರಿ ಇರುತ್ತದೆ ಎಂಬ ಮಾತು ಬಂದ ಹಿನ್ನೆಲೆಯಲ್ಲಿ ಬಟ್ಟೆ ತೆಗೆದು ಪರೀಕ್ಷೆ ನಡೆಸಿದ್ದೇವೆ. ಬುದ್ದಿವಾದ ಹೇಳಿರುವ ಕಾರಣಕ್ಕಾಗಿ ತನ್ನ ಮೇಲೆ ಆರೋಪ ಹೊರಿಸಿರಬಹುದು ಎಂದು ತಿಳಿಸಿದ್ದಾರೆ.
ಠಾಣೆಯ ಸಿ.ಸಿ.ಕೆಮರಾದಲ್ಲಿ ಅಜಿತ್ ಠಾಣೆಗೆ ಬರುವ ದೃಶ್ಯ ಸೆರೆಯಾಗಿದ್ದು ಬರುವಾಗಲೇ ಲುಂಗಿಯನ್ನು ಕೈಯಲ್ಲಿ ಹಿಡಿದುಕೊಂಡದ್ದು ಕಾಣುತ್ತದೆ.
ಈ ಬಗ್ಗೆ ಬೆಳ್ಳಾರೆ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿಯಲ್ಲಿ ವಿಚಾರಿಸಿದಾಗ ಅಜಿತ್ ಎಂಬವರ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ಠಾಣೆಗೆ ಕರೆಸಿ ವಿಚಾರಿಸಲಾಗಿದೆ.
ಅಲ್ಲದೆ ಅವರಲ್ಲಿ ಚೂರಿ ಇದೆ ಎಂಬ ವಿಚಾರ ಇದ್ದುದರಿಂದ ತನಿಖೆ ಮಾಡಿದ್ದಾರೆ ಅಷ್ಟೆ. ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.