50 ಲಕ್ಷ ರೂ ವೆಚ್ಚದಲ್ಲಿ ನಡೆಯುತ್ತಿದೆ ಜೀರ್ಣೋದ್ಧಾರ ಕಾರ್ಯ
ಫೆ.6 ರಂದು ನಡೆಯಲಿದೆ ಪುನರ್ ಪ್ರತಿಷ್ಠಾ ಮಹೋತ್ಸವ
ಉಬರಡ್ಕ ಮಿತ್ತೂರು ಗ್ರಾಮದ ಅಮೈ ಎಂಬಲ್ಲಿ ನೂತನವಾಗಿ ನಿರ್ಮಿಸಿದ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ಮತ್ತು ಶ್ರೀ ವಿಷ್ಣು ಮೂರ್ತಿ ಹಾಗೂ ಉಪದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ ಫೆ.6 ರಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಅಮೈ ಎಂಬಲ್ಲಿ ಶ್ರೀ ವಯನಾಟ್ ಕುಲವನ್,ಶ್ರೀ ವಿಷ್ಣು ಮೂರ್ತಿ ಸಾನಿಧ್ಯವು ಪುರಾತನ ಕಾಲದಿಂದಲೂ ಇದ್ದು, ಸುಮಾರು 45 ವರ್ಷಗಳ ಹಿಂದೆ ದೀಪಾರಾಧನೆ ಸ್ಥಗಿತಗೊಂಡು ನಂತರ 2010ನೇ ಇಸವಿಯಲ್ಲಿ ಅಮೈ ಮತ್ತು ಮಡಪ್ಪಾಡಿ ಕುಟುಂಬಸ್ಥರು ಸೇರಿ ದೀಪಾರಾಧನೆ ಪ್ರಾರಂಭ ಮಾಡಿದರು.ಕ್ಷೇತ್ರದಲ್ಲಿ ದೈವಜ್ಞರಾದ ಶಶಿಧರ ಮಾಂಗಾಡ್ ರವರ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆ ಚಿಂತನೆ ಪ್ರಕಾರ ದೈವಸ್ಥಾನದ ಜೀರ್ಣೋದ್ಧಾರ ಮಾಡಿ ನೂತನ ದೈವಸ್ಥಾನ ನಿರ್ಮಾಣ ಹಾಗೂ ನೂತನ ತರುವಾಡು ಮನೆ ನಿರ್ಮಾಣ ಆಗಬೇಕೆಂದು ಕಂಡುಬಂದ ಪ್ರಕಾರ ದೈವಸ್ಥಾನಕ್ಕೆ ಬೇಕಾದ ಜಾಗವನ್ನು ಮಡಪ್ಪಾಡಿ ಮನೆತನದ ದಾಮೋದರ ಗೌಡರು ಒದಗಿಸಿ,ಟ್ರಸ್ಟ್ ನ್ನು ರಚಿಸಿ,ದೈವದ ಹೆಸರಿನ ಪಹಣಿ ದಾಖಲಿಸಲು ತಗಲಿದ ವೆಚ್ಚವನ್ನು ಮಡಪ್ಪಾಡಿ ಮನೆತನದ ದಿ.ಶಿವಣ್ಣ ಗೌಡರ ವಂಶಸ್ಥರು ಭರಿಸಿರುತ್ತಾರೆ.ದೈವಸ್ಥಾನದ ಕಟ್ಟಡ,ಕಂಚಿಕಲ್ಲು ಸಹಿತ ಎಲ್ಲಾ ವೆಚ್ಚವನ್ನು ಮಡಪ್ಪಾಡಿ ದಾಮೋದರ ಗೌಡರು ಭರಿಸುವುದೆಂದು,ದೈವಸ್ಥಾನದ ಒಳಗಿನ ಪೀಠಕ್ಕೆ ಬೇಕಾದ ಮರವನ್ನು ಅಮೈ ಬಾಲಚಂದ್ರ ಗೌಡರು ಭರಿಸುವುದೆಂದು ತೀರ್ಮಾನಿಸಲಾಗಿದೆ. ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ದೈವಸ್ಥಾನ ಹಾಗೂ ತರವಾಡು ಮನೆ ನಿರ್ಮಾಣದ ಕಾಮಗಾರಿ ಭರದಿಂದ ನಡೆಯುತ್ತಿದ್ದು,ಪ್ರಶಾಂತ ಪರಿಸರದಲ್ಲಿ ಭಕ್ತರನ್ನು ಸೆಳೆಯುತ್ತಿದೆ.
ಫೆ.6ರಂದು ಕುತ್ತಿಕೋಲು ಶ್ರೀ ತಂಬೂರಾಟಿ ಭಗವತಿ ಕ್ಷೇತ್ರದ ಸ್ಥಾನಿಕರ ನೇತೃತ್ವದಲ್ಲಿ ಹಾಗೂ ಕುತ್ತಿಕೋಲು ಶ್ರೀ ತಂಬೂರಾಟಿ ಭಗವತಿ ಕ್ಷೇತ್ರ ಸಮಿತಿ ಮತ್ತು ಪ್ರಾದೇಶಿಕ ಸಮಿತಿಯವರ ಸಹಕಾರದೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಫೆ.6ರಂದು ಪುನರ್ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.
ಜ.30ರಂದು ಪ್ರತಿಷ್ಠಾ ಮುಹೂರ್ತ ದ ಗೊನೆಕಡಿಯುವುದು.ಫೆ.5ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದು,ರಾತ್ರಿ ಕುತ್ತಿಪೂಜೆ ನಡೆಯಲಿದೆ. ಫೆ.6ರಂದು ಬೆಳಿಗ್ಗೆ ಗಣಹೋಮ,ಪೂ.9.06ರಿಂದ 10.46ರ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ ನಡೆಯಲಿದೆ. ನಂತರ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ಪುದಿಯೋಡ್ಕಲ್ (ಮರೋಟ್)ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಅಮೈ -ಮಡಪ್ಪಾಡಿ ಶ್ರೀ ವಯನಾಟ್ ಕುಲವನ್ ತರವಾಡು ಟ್ರಸ್ಟ್ ರಚಿಸಿಕೊಂಡು ಅಮೈ ಹಾಗೂ ಮಡಪ್ಪಾಡಿ ಕುಟುಂಬಸ್ಥರು ನಡೆಸುವ ದೈವಸ್ಥಾನದ ಪುನರ್ನಿರ್ಮಾಣ ಕಾರ್ಯದ ಆಡಳಿತ ಮೊಕ್ತೇಸರರಾಗಿ ದಾಮೋದರ ಗೌಡ ಅಮೈ ಮಡಪ್ಪಾಡಿ ಮತ್ತು ರಾಮಕೃಷ್ಣ ಅಮೈ ಕಾರ್ಯನಿರ್ವಹಿಸುತ್ತಿದ್ದಾರೆ.ಎರಡೂ ಕುಟುಂಬದ ಸದಸ್ಯರು ಅವಿರತವಾಗಿ ಶ್ರಮಿಸುತ್ತಿದ್ದಾರೆ.