ಸುಳ್ಯ ರೈತ ಉತ್ಪಾದಕ ಕಂಪನಿಯು ತನ್ನ ಕಾರ್ಯಕ್ರಮದಲ್ಲಿ ಒಂದಾದ ಗ್ರಾಮೀಣ ಉತ್ಪನ್ನಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಸ್ಥೆಯ ಸದಸ್ಯರುಗಳು ಉತ್ಪಾದಿಸುವ ಕೃಷಿಯಾಧಾರಿತ ಗ್ರಾಮೀಣ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ಸಂಸ್ಕರಿಸಿ ಮಾರಾಟ ಮಾಡುವ ದೃಷ್ಟಿಯಿಂದ ಮೊದಲ ಹಂತದಲ್ಲಿ ಜೇನುತುಪ್ಪ, ತೆಂಗಿನ ಎಣ್ಣೆ ಮತ್ತು ಉಪ್ಪಿನಕಾಯಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಮೇ.20 ರಂದು ನಿಟ್ಟೆಯಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಹಲಸಿನ ಮೇಳದಲ್ಲಿ ಕರಾವಳಿ ಪ್ರಾಧಿಕಾರ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಯವರು ಉತ್ಪನ್ನಗಳನ್ನು ಬಿಡುಗಡೆಗೊಳಿಸಿದರು, ಈ ಸಂದರ್ಭದಲ್ಲಿ ನಿಟ್ಟೆ ಇಂಕ್ಯುಬೇಶನ್ ಸೆಂಟರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ. ಪಿ.ಆಚಾರ್, ಸಂಸ್ಥೆಯ ಅಧ್ಯಕ್ಷರಾದ ವೀರಪ್ಪಗೌಡ ಕಣ್ಕಲ್, ನಿರ್ದೇಶಕರುಗಳಾದ ಜಯರಾಮ ಅಜ್ಜಾವರ, ಭಾಸ್ಕರ ನಾಯರ್ ಅರಂಬೂರು, ನೇತ್ರ ಕುಮಾರ ಕನಕಮಜಲು, ಶ್ರೀಶ ಕುಮಾರ ಮಾಯಿಪಡ್ಕ, ಸತ್ಯಪ್ರಸಾದ್ ಅಮರಪಡ್ನೂರು, ರಾಮಕೃಷ್ಣ ಬೆಳ್ಳಾರೆ, ಸಿ.ಇ.ಒ. ಹರೀಶ ಕೆ, ಎಲ್.ಆರ್.ಪಿ. ಕೀರ್ತನ್ ಹಾಗೂ ಕೀರ್ತನ್ ಶ್ರೇಣಿ ಇವರುಗಳು ಹಾಜರಿದ್ದರು.
ಸುಳ್ಯ ರೈತ ಉತ್ಪಾದಕ ಕಂಪನಿ ಈಗಾಗಲೇ ರೈತರಿಗೆ ನೀಡಲು ಉತ್ತಮ ಗುಣಮಟ್ಟದ ವಿವಿಧ ತಳಿಯ ಅಡಿಕೆ ಗಿಡಗಳನ್ನು ವೈಜ್ಞಾನಿಕವಾಗಿ ಬೆಳೆಸಿದ್ದು ಜೂನ್ ತಿಂಗಳಿನಿಂದ ನೀಡಲು ಸಿದ್ಧವಾಗಿದೆ.
ಟ್ರ್ಯಾಕ್ಟರ್ ಖರೀದಿಸಿ ರೈತರಿಗೆ ತೆಂಗಿನ ಸಿಪ್ಪೆ ಹುಡಿಮಾಡಲು ಮತ್ತು ಗದ್ದೆ ಉಳುಮೆಗೆ ಬಾಡಿಗೆ ನೆಲೆಯಲ್ಲಿ ನೀಡುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದೆ ಹಾಗೂ ಮುಂದಿನ ದಿನಗಳಲ್ಲಿ ರೈತರ ಎಲ್ಲ ಉತ್ಪನ್ನಗಳ ಖರೀದಿ ಮತ್ತು ರಸಗೊಬ್ಬರಗಳ ಸರಬರಾಜು ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡರು ತಿಳಿಸಿದ್ದಾರೆ.