ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಹಿನ್ನಲೆ ಹೊಂದಿರುವ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯನ್ನು ಐತಿಹಾಸಿಕ ಗ್ರಾಮವೆಂದು ಘೋಷಿಸಬೇಕೆಂದು ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಚಿವ ಎಸ್. ಅಂಗಾರರಿಗೆ ಇತ್ತೀಚೆಗೆ ಮನವಿ ನೀಡಿದರು.
1837ರಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಅಮರ ಸುಳ್ಯ ರೈತ ಬಂಡಾಯ ಆರಂಭವಾದ ಮಾರ್ಚ್ 30ರಂದು ಕಲ್ಯಾಣಪ್ಪನ ದಂಡು ಮೊದಲು ಬೆಳ್ಳಾರೆ ಕೋಟೆಯನ್ನು ಮತ್ತು ಆ ಬಳಿಕ ಬಂಗ್ಲೆಗುಡ್ಡೆಯಲ್ಲಿದ್ದ ತಿಜೋರಿಯನ್ನು ವಶಪಡಿಸಿಕೊಂಡು, ಬೆಳ್ಳಾರೆ ವಿಜಯೋತ್ಸವವನ್ನು ಆಚರಿಸಿತ್ತು.
ಇದರ ನೆನಪಿಗೆ ಸ್ಮಾರಕವೊಂದನ್ನು ನಿರ್ಮಿಸಬೇಕು ಮತ್ತು ಬೆಳ್ಳಾರೆಯನ್ನು ಐತಿಹಾಸಿಕ ಗ್ರಾಮವಾಗಿ ಗುರುತಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ನಿಯೋಗದಲ್ಲಿ ಬೆಳ್ಳಾರೆ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಸಂಜಯ್ ನೆಟ್ಟಾರು, ಕಾರ್ಯದರ್ಶಿ ವಸಂತ ಉಲ್ಲಾಸ್, ಕೊರಗಪ್ಪ ನಾಯ್ಕ ಕುರುಂಬುಡೇಲು, ಮಹಾಲಿಂಗ ಪಾಟಾಳಿ ಕುರುಂಬುಡೇಲು, ಆನಂದ ಉಮಿಕ್ಕಳ, ಸುಪ್ರೀತ್ ಬಸ್ತಿಗುಡ್ಡೆ, ಪದ್ಮನಾಭ ಚೂಂತಾರು, ಮತ್ತು ಶ್ರೀನಿವಾಸ ಕುರುಂಬುಡೇಲು ಉಪಸ್ಥಿತರಿದ್ದರು.