ವಿ.ಎ., ಪಿ.ಡಿ.ಒ. ಗಳಿಗೆ ಸಚಿವ ಅಂಗಾರ, ಡಿ.ಸಿ. ರಾಜೇಂದ್ರ ಸೂಚನೆ
ಪ್ರಾಕೃತಿಕ ವಿಕೋಪ ಸಂಭವಿಸಿದರೆ ಅಧಿಕಾರಿಗಳು ತಡ ಮಾಡದೇ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಎಸ್.ಅಂಗಾರ ಹೇಳಿದರೆ, ಪ್ರಾಕೃತಿಕ ವಿಕೋಪವಾಗಿ 24 ಗಂಟೆಯೊಳಗೆ ವಿ.ಎ., ಪಿಡಿಒ ಸ್ಥಳ ಭೇಟಿ ಮಾಡಿ ವರದಿ ಸಿದ್ಧ ಪಡಿಸಿ 48 ಗಂಟೆಯೊಳಗೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.
ಮೇ.26 ರಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಸಚಿವ ಎಸ್.ಅಂಗಾರರ ಉಪಸ್ಥಿತಿಯಲ್ಲಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ದ ಜಿಲ್ಲಾಧಿಕಾರಿಗಳು ಬಳಿಕ ಪಿ.ಡಿ.ಒ. ಹಾಗೂ ವಿ.ಎ. ಗಳಿಗೆ ಸೂಚನೆ ನೀಡಿದರು.
“ಇನ್ನೂ ಮಳೆಗಾಲ ಹತ್ತಿರವಾಗುತ್ತದೆ. ವಿ.ಎ., ಪಿ.ಡಿ.ಒ. ಗಳು ಹಾಗೂ ತಾಲೂಕು ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಇರಬೇಕು. ಪ್ರಾಕೃತಿಕ ವಿಕೋಪ ಸಂಭವಿಸಿದ ಕೂಡಲೇ ಸ್ಥಳಕ್ಕ ಭೇಟಿ ನೀಡಿ ವರದಿ ಸಿದ್ಧ ಪಡಿಸಿ ತಹಶೀಲ್ದಾರ್ ರಿಗೆ ನೀಡಿ ಅವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಯಾವುದೇ ವಿಳಂಬ ಆಗಬಾರದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪ್ರಾಕೃತಿಕ ವಿಕೋಪದಡಿ ತಾಲೂಕಿನ ಅನುದಾನ ತಹಶೀಲ್ದಾರ್ ರಿಂದ ತಿಳಿದು ಕೊಂಡ ಜಿಲ್ಲಾಧಿಕಾರಿಗಳು ಈಗ 23 ಲಕ್ಷ ಇದ್ದರೆ, ಇನ್ನೂ 27 ಲಕ್ಷ ನೀಡಲಾಗುವುದು. ಪ್ರಾಕೃತಿಕ ವಿಕೋಪದಡಿಯಲ್ಲಿ ಪೂರ್ಣ ಮನೆ ಕಳೆದು ಕೊಂಡರೆ ಸರಕಾರಿ ನಿಯಮದಡಿ 95 ಸಾವಿರದ 100, ಉಳಿದಂತೆ ಹಾನಿಯ ಪ್ರಮಾಣ ನೋಡಿಕೊಂಡು ವಿತರಣೆ ಮಾಡಬೇಕು ಎಂದು ಹೇಳಿದರು.
ಎಲ್ಲಿ ಹಾನಿ ಸಂಭವಿಸಿದರೂ ವಿಳಂಬ ಮಾಡದೇ ತ್ವರಿತ ಕ್ರಮ ಆಗಬೇಕು.ಆಗ ಜನರಿಗೆ ಆಡಳಿತದ ಮೇಲೆ ವಿಶ್ವಾಸ ಬರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಕೈಗೊಳ್ಳಬೇಕು ಎಂದು ಸಚಿವ ಅಂಗಾರ ಸೂಚನೆ ನೀಡಿದರು.
ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ತಹಶೀಲ್ದಾರ್ ಅನಿತಾ ಲಕ್ಷ್ಮೀ, ಇ.ಒ. ಭವಾನಿಶಂಕರ್ ಇದ್ದರು.