ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಸ್ಥಾನವನ್ನು ಅಬುಸಾಲಿಯವರಿಗೆ ಕೊಡುವುದೆಂದು ನಾನು ನಿರ್ಧರಿಸಿದ್ದೆ. ಆದರೆ ಅದು ಪಕ್ಷದ ಸಭೆಯಲ್ಲಿ ತೀರ್ಮಾನವಾದುದಲ್ಲ. ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಜನ ಅಲ್ಪಸಂಖ್ಯಾತ ಸಮುದಾಯದ ಆಕಾಂಕ್ಷಿಗಳು ಇದ್ದ ಕಾರಣ ಈ ವಿಚಾರವನ್ನು ಅಲ್ಪಸಂಖ್ಯಾತ ಘಟಕದ ನಿರ್ಧಾರಕ್ಕೆ ಬಿಡಲಾಗಿತ್ತು. ಅಲ್ಪಸಂಖ್ಯಾತ ಘಟಕದಲ್ಲಿ ಒಬ್ಬ ಹಿರಿಯ ಅಭ್ಯರ್ಥಿಗೆ ಹಾಗೂ ಒಬ್ಬ ಕಿರಿಯ ಅಭ್ಯರ್ಥಿಗೆ ಆದ್ಯತೆ ಕೊಡುವುದೆಂದು ನಿರ್ಧರಿಸಿ, ನನ್ನ ಗಮನಕ್ಕೆ ತಂದರು. ಬಳಿಕ ಪಕ್ಷದ ಸಭೆಯಲ್ಲಿ ಜಿ.ಕೆ.ಹಮೀದ್ರವರು ತನಗೆ 10 ತಿಂಗಳ ಅವಧಿಗಾದರೂ ಅಧ್ಯಕ್ಷತೆಗೆ ಕೊಡಲೇಬೇಕೆಂದು ಪಟ್ಟು ಹಿಡಿದ ಕಾರಣ ಮೊದಲ ಅವಧಿಗೆ ಜಿ.ಕೆ.ಹಮೀದ್ ಮತ್ತು ನಂತರದ ಒಂದು ಕಾಲು ವರ್ಷ ಅವಧಿಗೆ ಶೌವಾದ್ ಗೂನಡ್ಕರವರಿಗೆ ಅಧ್ಯಕ್ಷ ಸ್ಥಾನ ಕೊಡುವುದೆಂದು ತೀರ್ಮಾನಿಸಲಾಯಿತು ಎಂದು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಂಗಾಜೆ ತಿಳಿಸಿದ್ದಾರೆ.
ಅಬುಸಾಲಿಗೆ ಕೊಡಬಾರದೆಂದು ನಾವು ತೀರ್ಮಾನಿಸಿಲ್ಲ : ಕೆ.ಎಂ.ಅಶ್ರಫ್
ಸಂಪಾಜೆ ಗ್ರಾ.ಪಂ. ಅಧ್ಯಕ್ಷತೆಯನ್ನು ಅಬುಸಾಲಿಯವರಿಗೆ ಕೊಡಬಾರದೆಂದು ನಾವು ತೀರ್ಮಾನಿಸಿಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆಯಲ್ಲಿ ನಾವು ಒಬ್ಬ ಹಿರಿಯ ಅಭ್ಯರ್ಥಿಗೆ ಹಾಗೂ ಒಬ್ಬ ಕಿರಿಯ ಅಭ್ಯರ್ಥಿಗೆ ಆದ್ಯತೆ ನೀಡಬೇಕೆಂದು ನಿರ್ಧರಿಸಿ ಪಕ್ಷದ ಅಧ್ಯಕ್ಷರಿಗೆ ತಿಳಿಸಿದ್ದೆವು. ಪಕ್ಷದ ಸಭೆಯಲ್ಲಿ ಜಿ.ಕೆ.ಹಮೀದ್ ಪಟ್ಟು ಹಿಡಿದು ವಿನಂತಿಸಿದ್ದರಿಂದ ಹಿರಿಯ ಅಭ್ಯರ್ಥಿಯ ಅವಕಾಶವನ್ನು ಅವರಿಗೆ ನೀಡಲಾಗಿತ್ತು ಎಂದು ಸಂಪಾಜೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎಂ.ಅಶ್ರಫ್ ತಿಳಿಸಿದ್ದಾರೆ.