ಅರಣ್ಯಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಸರ್ಕಾರಿ ಸ್ವತ್ತನ್ನು ನಾಶಪಡಿಸಿ ಜೀವ ಬೆದರಿಕೆ ಒಡ್ಡಿದ್ದ ಆರೋಪದ ಆರೋಪಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪಿತ್ತಿದೆ.
2016ರ ಸಪ್ಟೆಂಬರ್ 7ರಂದು ಅಲೆಟ್ಟಿ ಗ್ರಾಮದ ನಾರ್ಕೋಡು ಎಂಬಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರೋಪಿ ಆಶಿಶ್ ಕುಮಾರ್ ಚಲಾಯಿಸುತ್ತಿದ್ದ ಖಾಲಿ ಟಿಪ್ಪರ್ ಲಾರಿಯನ್ನು ನಿಲ್ಲಿಸಲು ಸೂಚಿಸಿದ್ದರೂ ಲಾರಿಯನ್ನು ನಿಲ್ಲಿಸದೇ ವೇಗವಾಗಿ ಮುಂದಕ್ಕೆ ಸಾಗಿದ್ದು ನಂತರ ಅರಣ್ಯ ಸಿಬ್ಬಂದಿಗಳು ತಡೆದು ನಿಲ್ಲಿಸಿದ್ದು, ಆ ಸಮಯ ಹಿಂದುಗಡೆಯಿಂದ ಬಂದ ಆರೋಪಿ ಆಶಿಶ್ ಕುಮಾರ್ ವಸತಿ ಗೃಹದ ಎದುರು ನಿಂತಿದ್ದ ಅರಣ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸದಂತೆ ಅಕ್ರಮ ತಡೆವೋಡ್ಡಿ ಅವಾಚ್ಯ ಶಬ್ದಗಳಿಂದ ಬೈದು, ವಸತಿ ಗೃಹದ ಎದುರು ಇದ್ದ ಸರ್ಕಾರಿ ಸ್ವತ್ತನ್ನು ಜಖಂಗೊಳಿಸಿ ನಷ್ಟವನ್ನು ಉಂಟು ಮಾಡಿದ್ದು ಹಾಗೂ ಜೀವ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿತ್ತು. ದೂರಿನ ಮೇರೆಗೆ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾ ಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.ಈ ಪ್ರಕರಣವನ್ನು ತನಿಖೆಗೆತ್ತಿಕೊಂಡ ಹಿರಿಯ ಸಿವಿಲ್ ಹಾಗೂ ಜೆ. ಯಮ್. ಎಫ್. ಸಿ ನ್ಯಾಯಾಲಯ ಇದರ ನ್ಯಾಯಾಧೀಶರಾದ ಎ.ಸೋಮಶೇಖರ್ ರವರು ಆರೋಪಿಯ ವಿರುದ್ದ ಅಭಿಯೋಜನೆಯು ಮಾಡಿರುವ ಆರೋಪವನ್ನು ಸಾಬೀತುಪಡಿಸಲು ಅಭಿಯೋಜನೆ ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪಿತ್ತಿದ್ದಾರೆ. ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿ ಗಳಾದ ಯಂ. ವೆಂಕಪ್ಪ ಗೌಡ,ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಹಾಗೂ ಮನೋಜ್ರವರು ವಾದಿಸಿದ್ದರು.