ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಬೆಳ್ಳಾರೆ ಇದರ ಆಶ್ರಯದಲ್ಲಿ ಪುಸ್ತಕ ವಿತರಣೆ, ಎಸ್.ಎಸ್. ಎಲ್. ಸಿ. ಸಾಧಕರಿಗೆ ಗೌರವಾರ್ಪಣೆ
ಮತ್ತು ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರ, ಮಾಹಿತಿ ಕಾರ್ಯಕ್ರಮವು ಬೆಳ್ಳಾರೆ ಕೆ.ಪಿ.ಎಸ್. ಸಭಾಂಗಣದಲ್ಲಿ ಜೂ. 11ರಂದು ಜರುಗಿತು.
ಸಂಪನ್ಮೂಲ ವ್ಯಕ್ತಿ, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ| ಗಾನ ಪಿ. ಕುಮಾರ್ ಮಾತನಾಡಿ ಮಕ್ಕಳ ಮುಗ್ಧತೆಯನ್ನು ಬಂಡವಾಳ ವಾಗಿರಿಸಿಕೊಂಡು ಶೋಷಣೆ ಮಾಡುತ್ತಿರುವವರ ಬಗ್ಗೆ ಮಕ್ಕಳು ಎಚ್ಚರ ವಹಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಆಪ್ತ ಸ್ನೇಹಿತರ ಹೊರತಾಗಿ, ಹೊರಗಿನವರೊಂದಿಗೆ ಚಾಟಿಂಗ್ ನಡೆಸಿ ತಪ್ಪು ಹಾದಿಗೆ ಇಳಿಯುವುದು ಖಂಡಿತಾ ಸಲ್ಲ. ಒಂದು ವೇಳೆ ಮಕ್ಕಳು ಶೋಷಣೆಗೊಳಗಾದರೆ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ಗೌಪ್ಯತೆ ಕಾಪಾಡಲಾಗುವುದು. ಇಂತಹ ಮೋಸದ ಜಾಲಗಳಿಂದ ಹೊರಬಂದು ವಿದ್ಯಾರ್ಜನೆಯ ಬಗ್ಗೆ ಗಮನ ಹರಿಸಿ ಉತ್ತಮ ಸಮಾಜ ಕಟ್ಟುವ ಕಾರ್ಯ ನಡೆಸಿ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆರು ಮಂದಿ SSLC ಸಾಧಕರನ್ನು ಗೌರವಿಸಿದ ಕೆ.ಪಿ.ಎಸ್.ನ ಉಪ ಪ್ರಾಂಶುಪಾಲೆ ಉಮಾಕುಮಾರಿ ಮಾತನಾಡಿ ಸಮಯ ಪ್ರಜ್ಞೆಯೊಂದಿಗೆ ಕ್ರಿಯಾತ್ಮಕವಾಗಿ ವಿದ್ಯಾರ್ಥಿಗಳು ಪಠ್ಯದ ಕಡೆಗೆ ಗಮನ ಹರಿಸಿ ಉತ್ತಮ ಭವಿಷ್ಯ ನಿರ್ಮಿಸುವ ನಾವಿಕರಾಗಿ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಗೌರವಿಸಿದಾಗ ಮಕ್ಕಳಿಗೆ ಪ್ರೇರಣೆಯಾಗಬಲ್ಲದು ಎಂದರಲ್ಲದೆ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆಯನ್ನು ಹಲವು ವರ್ಷದಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಕಾರ್ಯ ಸ್ತುತ್ಯಾರ್ಹವಾದುದು ಎಂದರು. ಪ್ರೈಮರಿ ವಿಭಾಗದ ಮುಖ್ಯಸ್ಥ ಮಾಯಿಲಪ್ಪ ಮಕ್ಕಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳು ಸಂಸ್ಥೆಯಿಂದ ನೀಡಲ್ಪಟ್ಟ ನೋಟ್ ಬುಕ್ ಗಳನ್ನು ಮಕ್ಕಳಿಗೆ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ವಹಿಸಿ, ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ಕೆ.ಪಿ.ಎಸ್ ನ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಶ್ರೀನಾಥ್ ರೈ, ಬೆಳ್ಳಾರೆ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ರುಕ್ಮ ನಾಯ್ಕ, ಅಪರಾಧ ವಿಭಾಗದ ಉಪನಿರೀಕ್ಷಕ ಆನಂದ ಪಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಶ್ರೀರಾಂ ಪಾಟಾಜೆ ವಂದಿಸಿದರು. ಕೆ.ಪಿ.ಎಸ್. ನ ದೈಹಿಕ ಶಿಕ್ಷಕಿ ಪುಷ್ಪಾ ಕಾರ್ಯಕ್ರಮವನ್ನು ನಿರೂಪಿಸಿದರು.