75 ಸ್ವಾತಂತ್ರ್ಯ ಸೇನಾನಿಗಳ ಸರಣಿ ಸ್ಮರಣೆ
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ನಾಯಕರು ತಮ್ಮ ಬದುಕನ್ನು ಹೋರಾಟ, ಸೇವೆ ತ್ಯಾಗಗಳ ಮೂಲಕ ಸವೆಸಿದ್ದಾರೆ. ಅವರೆಲ್ಲರನ್ನೂ ನಮ್ಮ ಸ್ಮರಣೆಗೆ ತಂದು ಮಕ್ಕಳಿಗೆ ಇತಿಹಾಸದ ವ್ಯಾಪ್ತಿಯ ವಿಸ್ತಾರವನ್ನು ತಿಳಿಸಬೇಕಾಗಿದೆ. ಇಂತಹ ಯೋಚನೆಯಿಂದ ಪ್ರಸ್ತುತ 75 ಸ್ವಾತಂತ್ರ್ಯ ಸೇನಾನಿಗಳನ್ನು ಹುಡುಕಿ ಪರಿಚಯಿಸುವ ಯೋಜನೆಯುಳ್ಳ ಈ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಜೂನ್ 15 ರಿಂದ ಅಗೋಸ್ತು15 ರ ನಡುವೆ ನಿತ್ಯವೂ ಇಬ್ಬರಂತೆ ಬೆಳಗ್ಗಿನ ಶಾಲಾ ಅಸೆಂಬ್ಲಿಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸ್ವಾತಂತ್ರ್ಯದ ಸೇನಾನಿಗಳನ್ನು ಪರಿಚಯಿಸಲಿದ್ದಾರೆ. ಹೀಗೆ ಮಾಡಿದ ಪರಿಚಯ ಭಾಷಣಗಳನ್ನು ಮುದ್ರಿಸಿ ಒಂದು ಕೃತಿಯ ರೂಪದಲ್ಲಿ ಹೊರತರುವ ಯೋಚನೆ ಇದೆ ಎಂಬುದಾಗಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.
ಜೂ.15ರಂದು ಸ್ನೇಹ ಶಾಲೆಯಲ್ಲಿ ಜರಗಿದ ಸರಣಿ ಭಾಷಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.
ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆಯ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲ್ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟದ ಅರಿವು ಮಕ್ಕಳಿಗೆ ಅನಿವಾರ್ಯವೆಂದು ಹೇಳಿದರು. ಸ್ವಾತಂತ್ರ್ಯ ಹೋರಾಟದ ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯವನ್ನು ಸ್ನೇಹ ಶಿಕ್ಷಣ ಸಂಸ್ಥೆಯು ವಿಶಿಷ್ಟ ರೀತಿಯಲ್ಲಿ ಹಮ್ಮಿಕೊಂಡಿದೆ. ಇದು ದೇಶಕ್ಕೇ ಮಾದರಿಯಾದ ಕಾರ್ಯಕ್ರಮವೆಂದು ಹೇಳಬಹುದು ಎಂದ ಪೇರಾಲ್ ರವರು ದೇಶಕ್ಕಾಗಿ ಪ್ರಾಣವನ್ನು ಮುಡಿಪಾಗಿರಿಸಿರುವ ಸೇನಾನಿಗಳ ಸ್ಮರಣೆ ಮಾಡಬೇಕು ಎಂದರು.
ಈ ಸರಣಿಯ ಮೊದಲ ಭಾಷಣ ಮಾಡಿದ ಚಂದ್ರಶೇಖರ ಪೇರಾಲ್ ರವರು 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮೊದಲೇ ನಡೆದ ಅಮರಸುಳ್ಯದ ಹೋರಾಟದ ಹಾದಿಯನ್ನು ಮೆಲುಕು ಹಾಕಿದರು. ಎರಡನೇ ಭಾಷಣ ಮಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಅವರು ಮಾತನಾಡಿ “ಪಠ್ಯದಲ್ಲಿ ಪರಿಚಯಿಸಲ್ಪಡದ ಸ್ವಾತಂತ್ರ್ಯ ಸೇನಾನಿ ವಾಸುದೇವ ಬಲವಂತ ಪಡ್ಕೆ ಅವರ ಹೋರಾಟ ಅವಿಸ್ಮರಣೀಯವಾಗಿದೆ ಎಂದರು. ಆರಿ ಹೋಗಿದ್ದ ಸ್ವಾತಂತ್ರ್ಯದ ಪ್ರಜ್ಞೆಯನ್ನು ಬಡಿದೆಬ್ಬಿಸಿ, ಕ್ರಾಂತಿಯ ಕಿಚ್ಚನ್ನು ಹಚ್ಚಿದವರು ಪಡ್ಕೆಯವರು. ಬುಡಕಟ್ಟು ಜನರ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಸ್ವದೇಶಿ ಚಳುವಳಿಗೆ ಚಾಲನೆ ನೀಡಿದರು. ಬಡವರು ಮತ್ತು ಮುಗ್ಧರ ಮೇಲೆ ಬ್ರಿಟಿಷರಿಂದ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ತಳಪಾಯ ಹಾಕಿದವರು ಪಡ್ಕೆಯವರು”ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಸ್ವಾತಂತ್ರ್ಯ ಸೇನಾನಿಗಳನ್ನು ಪರಿಚಯಿಸುವ ಈ ಸರಣಿ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಆ ಮೂಲಕ ದೇಶಪ್ರೇಮದ ಹುರುಪನ್ನು ಮೈಗೂಡಿಸಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟ ಎಂಬುದು ವೈಯಕ್ತಿಕವಲ್ಲ, ಅದು ಸಾಮುದಾಯಿಕವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯರಾಗಿರುವ ವಿಶ್ಮಿತ ಹೆಚ್, ಚಂದನ ಪಿ.ಎ ಮತ್ತು ನಿರೀಕ್ಷಾ ಪಿ.ಡಿ ಪ್ರಾರ್ಥಿಸಿದರು. ಶಿಕ್ಷಕಿ ಸವಿತಾ ಎಂ ನಿರೂಪಿಸಿದ ಶಿಕ್ಷಕ ದೇವಿಪ್ರಸಾದ ಜಿ. ಸಿ ಸ್ವಾಗತಿಸಿ ಶಿಕ್ಷಕಿ ಶ್ರೀಮತಿ ಶ್ರೀದೇವಿ ವಂದಿಸಿದರು.