ಮೂಲ ಉದ್ಧೇಶ ಮರೆತು ಅಕಾಡೆಮಿ ಕಾರ್ಯಚಟುವಟಿಕೆ ಮಾಡಿಲ್ಲ
ಫೆಲೋಶಿಪ್ ಪ್ರಕಟಗೊಳ್ಳದಿರಲು ಸಕಾಲದಲ್ಲಿ ಅವರು ಸಲ್ಲಿಸದಿರುವುದೇ ಕಾರಣ : ಕಜೆಗದ್ದೆ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಮೂಲ ಉದ್ಧೇಶಕ್ಕಿಂತ ಹೊರತಾಗಿ ಏನನ್ನೂ ಮಾಡಿಲ್ಲ. ಬದಲು ಅರೆಭಾಷೆ ಅಭಿವೃದ್ಧಿ ಮತ್ತು ಪ್ರಸರಣದ ದೃಷ್ಟಿಯಿಂದ ಅನೇಕ ಮೌಲಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹೇಳಿದ್ದು, ಹಿಂದಿನ ಅವಧಿಯ ಫೆಲೋಶಿಪ್ಗಳು ಪ್ರಕಟಗೊಳ್ಳದೇ ಇರಲು ಅವರು ಸಕಾಲದಲ್ಲಿ ಸಂಶೋಧನಾ ಬರಹವನ್ನು ಅಕಾಡೆಮಿಗೆ ಸಲ್ಲಿಸದಿರುವುದೇ ಕಾರಣ ಎಂದು ಹೇಳಿದ್ದಾರೆ.
ಕಳೆದ ವಾರ ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯ ಎ.ಕೆ. ಹಿಮಕರ ಹಾಗೂ ಲೇಖಕ ತೇಜಕುಮಾರ್ ಬಡ್ಡಡ್ಕ ಅವರು ಪತ್ರಿಕಾಗೋಷ್ಠಿಯಲ್ಲಿ ಅರೆಭಾಷೆ ಅಕಾಡೆಮಿ ಅಧ್ಯಕ್ಷರ ವಿರುದ್ಧ ಮಾಡಿರುವ ಆರೋಪಗಳಿಗೆ ಉತ್ತರ ನೀಡಿದ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆಯವರು, ಅಕಾಡೆಮಿಯನ್ನು ಉನ್ನತ ಸ್ಥಾನಕ್ಕೇರಿಸಲು ಹಲವು ಮಾಧ್ಯಮಗಳ ಸಹಾಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಐಎಸ್ಒನಂತಹ ಸ್ಥಾನಮಾನದ ಅಗತ್ಯವಿದ್ದು, ಈ ನೆಲೆಯಲ್ಲಿ ಬೇರೆ ಬೇರೆ ಪ್ರಕಾರಗಳಲ್ಲಿ ಕಾರ್ಯಕ್ರಮ ಮಾಡಬೇಕಾದ ಅನಿವಾರ್ಯತೆ ಇದ್ದುದರಿಂದ ಅರೆಭಾಷೆ ಪಠ್ಯಪುಸ್ತಕ, ನಾಟಕ, ಡಾಕ್ಯುಮೆಂಟರಿ, ಯಕ್ಷಗಾನ, ಸುಗಮ ಸಂಗೀತ, ಗಮಕ, ಚಿತ್ರಕಲೆ ಶಿಬಿ ಹೀಗೆ ವಿವಿಧ ಮಾಧ್ಯಮಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಹಿಂದಿನ ಮೂರು ವರ್ಷದ ಹಿಂದೆ ಮಂಡನೆಯಾದ ಫೆಲೋಶಿಪ್ಗಳನ್ನು ಪ್ರಕಟಿಸುವ ಕಾರ್ಯ ಆಗಿಲ್ಲ ಎಂಬ ಆರೋಪ ಮಾಡಲಾಗಿದೆ. ಆದರೆ ನಮ್ಮ ಅವಧಿ ಬಂದು ಎರಡೂವರೆ ವರ್ಷ ಆಗಿದೆ ಅಷ್ಟೆ. ಹಾಗಿರುವಾಗ ಹಿಂದಿನ ಅವಧಿಯಲ್ಲೇ ಯಾಕೆ ಪ್ರಕಟಗೊಳಿಸಿಲ್ಲ ಎಂದು ಪ್ರಶ್ನಿಸಿದ ಅವರು, ಈ ಸಂಶೋಧನಾ ಫೆಲೋಶಿಪ್ನ ಅವಧಿ ೨೦೧೯ ಫೆ. ೧ರಿಂದ ಆಗಸ್ಟ್ ೧ರವರೆಗಿನ ೬ತಿಂಗಳುಗಳಾಗಿತ್ತು. ಆದರೆ ಈ ಅವಧಿಯಲ್ಲಿ ಯಾವ ಸಂಶೋಧನಾ ಬರಹಗಳೂ ಸಲ್ಲಿಕೆಯಾಗಿರಲಿಲ್ಲ. ಬೌದ್ಧಿಕ ಕೆಲಸಕಾರ್ಯಗಳು ನಿಗದಿತ ಅವಧಿಯೊಳಗೆ ಕೊನೆಗೊಳ್ಳುವುದಿಲ್ಲ ಎಂಬುದು ನಮಗೂ ಗೊತ್ತಿದೆ. ಸೆ. ೧ರ ವೇಳೆಗೆ ಒಂದು ಸಂಶೋಧನಾ ಬರಹ ಮಾತ್ರ ಸಲ್ಲಿಸಲ್ಪಟ್ಟಿದೆ. ನಾವು ಅಧಿಕಾರ ವಹಿಸಿಕೊಂಡದ್ದು ೨೦೧೯ ಅಕ್ಟೋಬರ್ನಲ್ಲಿ. ಆಗ ಒಬ್ಬರ ಹೊರತಾಗಿ ಉಳಿದ ಯಾರೂ ಕೂಡಾ ಸಲ್ಲಿಕೆ ಮಾಡಿರಲಿಲ್ಲ. ಅವರಿಗೆ ಅವಕಾಶ ಕೊಡುವ ದೃಷ್ಟಿಯಿಂದ ಆ ಸಾಲಿನ ಕ್ರಿಯಾಯೋಜನೆಯಲ್ಲಿ ಅನುದಾನ ಇರಿಸಲಾಗಿತ್ತು. ೭ ಮಂದಿ ಒಂದೂವರೆ ವರ್ಷ ಸಮಯ ತೆಗೆದುಕೊಂಡು ಸಂಶೋಧನಾ ಬರಹ ಸಲ್ಲಿಸಿದ್ದರೆ, ಉಳಿದ ಇಬ್ಬರು ಎರಡೂವರೆ ವರ್ಷದ ಅವಧಿ ತೆಗೆದುಕೊಂಡು ತಮ್ಮ ಯೋಜನೆಯನ್ನು ಪೂರ್ತಿಗೊಳಿಸಿದ್ದಾರೆ. ಮತ್ತೆಯೂ ಕ್ರಿಯಾಯೋಜನೆಯಲ್ಲಿ ಇದನ್ನೇ ಮುಂದುವರೆಸಿಕೊಂಡು ಹೋದರೆ ನಮ್ಮ ಇತರ ಯೋಜನೆ ಪೂರ್ಣಗೊಳ್ಳುವುದಿಲ್ಲ ಎಂಬ ಕಾರಣಕ್ಕೆ ಬಳಿಕ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದ ಅವರು ಸಲ್ಲಿಕೆಯಾದ ಕೆಲವು ಪ್ರಬಂಧಗಳನ್ನು ಗಮನಿಸಿದಾಗ ಇದರಲ್ಲಿ ತಪ್ಪುಗಳು ಕಂಡುಬಂದಿತ್ತು. ಈ ಕುರಿತು ಗೈಡ್ಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೆವು ಎಂದು ಹೇಳಿದರು. ಇದೇ ಕಾರಣದಿಂದ ಸಂಶೋಧನೆಗಳನ್ನು ಮೌಲ್ಯಮಾಪನ ಮಾಡುವ ನಿರ್ಧಾರವನ್ನೂ ತೆಗೆದುಕೊಂಡಿದ್ದೆವು ಎಂದು ಅವರು ಹೇಳಿದರು.
ಈ ಬಾರಿ ೫ ಫೆಲೋಶಿಪ್ಗಳಿಗೆ ಆಹ್ವಾನಿಸಿದಾಗ ಬಂದ ಅರ್ಜಿಗಳಲ್ಲಿ ಎ.ಕೆ. ಹಿಮಕರ ಸಹಿತ ಐವರು ಆಯ್ಕೆಗೊಂಡಿದ್ದರು. ಆದರೆ ಎ.ಕೆ. ಹಿಮಕರರು ತಾನು ಪೂವಪ್ಪ ಕಣಿಯೂರು ಅವರ ಗೈಡ್ ಅಡಿ ಸಂಶೋಧನಾ ಬರಹ ಸಿದ್ಧಪಡಿಸುವುದಿಲ್ಲ ಎಂಬ ಲಿಖಿತ ಉತ್ತರ ನೀಡಿದ್ದಾರೆ. ಆ ಉತ್ತರದಲ್ಲಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಗುಣಮಟ್ಟವನ್ನೇ ಅವಮಾನಿಸುವಂತೆ ಪ್ರಸ್ತಾಪಿಸಿದ್ದಾರೆ ಎಂದು ಲಕ್ಷ್ಮೀನಾರಾಯಣ ಕಜೆಗದ್ದೆ ಹೇಳಿದರು.
ಅರೆಭಾಷೆ ನಾಟಕಕ್ಕೆ ೧೦,೩೭೦೦೦ ಖರ್ಚಾಗಿರುವುದು ಹೌದು, ೨೦೨೦ರಲ್ಲಿ ನಾವು ಈ ರಂಗಪ್ರಯೋಗಕ್ಕೆ ತರಬೇತಿ ಶಿಬಿರ ನಡೆದು ಪ್ರಯೋಗಕ್ಕೆ ಸಿದ್ಧವಾದ ಸಂದರ್ಭ ಕೊರೋನಾ ಕರ್ಫ್ಯೂ ಜಾರಿಗೆ ಬಂತು. ಆ ಸಂದರ್ಭದಲ್ಲಿ ನಾವು ಇದಕ್ಕಾಗಿ ನಾಲ್ಕೂವರೆ ಲಕ್ಷ ರೂ. ಖರ್ಚು ಮಾಡಿದ್ದೇವೆ. ಬಳಿಕದ ವರ್ಷ ಕೊರೋನಾ ಸಹಜ ಸ್ಥಿತಿಗೆ ಬಂದ ಬಳಿಕ ಮತ್ತೆ ಶಿಬಿರ ನಡೆಸಬೇಕಾಗಿ ಬಂತು. ಆ ಬಳಿಕ ರಂಗಪಯಣದ ಮೂಲಕ ೧೮ ಕಡೆ ನಾಟಕ ಪ್ರದರ್ಶನಗೊಂಡಿತು. ಕಲಾವಿದರಿಗೆ ಗೌರವಧನ, ಶಿಷ್ಯವೇತನನೀಡಲಾಗಿತ್ತು. ಗುಣಮಟ್ಟದಲ್ಲಿ ಎಲ್ಲೂ ರಾಜಿ ಮಾಡಿಕೊಳ್ಳದ ಕಾರಣ ಇಷ್ಟು ಹಣ ಖರ್ಚಾಗಿದೆ ಎಂದು ಅವರು ವಿವರಿಸಿದರು. ಈ ನಾಟಕ ಕನಿಷ್ಟ ಪಕ್ಷ ರಾಜ್ಯದ ೭೦೦೦ ಮಂದಿ ವೀಕ್ಷಿಸಿದ್ದಾರೆ. ಇದು ಅಕಾಡೆಮಿಯ ಸಾರ್ಥಕ ಪ್ರಯತ್ನಕ್ಕೆ ಸಿಕ್ಕ ಪ್ರತಿಕ್ರಿಯೆ. ಚಲನಚಿತ್ರ ಮತ್ತು ನಾಟಕ ಭಾಷೆಯ ಹಂಗಿಲ್ಲದೆ ನಡೆಯುವ ಮಾಧ್ಯಮ. ಅರೆಭಾಷೆಯ ಬೆಳವಣಿಗೆಗಾಗಿ ಈ ನಾಟಕ ಸಿದ್ಧಪಡಿಸಲಾಗಿತ್ತು ಎಂದು ಅವರು ವಿವರಿಸಿದರು.
ಅರೆಭಾಷೆ ಅಕಾಡೆಮಿಯು ಈಗಾಗಲೇ ೭ ಪುಸ್ತಕಗಳನ್ನು ಬಿಡುಗಡೆಗೊಳಿಸಿದ್ದು, ೮ ಪುಸ್ತಕ ಅಚ್ಚಿನಲ್ಲಿದೆ. ಒಂದೇ ಒಂದು ಕೃತಿ ಪ್ರಕಟಿಸಿಲ್ಲ ಎನ್ನುವ ಆರೋಪ ನಿರಾಧಾರ. ಅರೆಭಾಷೆ ಪಾರಂಪರಿಕ ಕೋಶ., ಅರೆಭಾಷೆ ಪದ ಕೋಶ ಮತ್ತು ವಿಶ್ವಕೋಶ ರಚನೆ ಕಾರ್ಯ ನಡೆಯುತ್ತಿದೆ. ಈ ಪೈಕಿ ವಿಶ್ವಕೋಶದ ಜವಾಬ್ದಾರಿಯನ್ನು ಡಾ.ಪುರುಷೋತ್ತ ಕರಂಗಲ್ಲು ಸಂಪಾದಕರಾಗಿದ್ದು, ಒತ್ತಡ ಹಿನ್ನಲೆಯಲ್ಲಿ ಅವರ ವಿನಂತಿಯ ಮೇರೆಗೆ ಭರತೇಶ್ ಅಲಸಂಡೆಮಜಲು ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ. ವಿಶ್ವಕೋಶ ಜವಾಬ್ದಾರಿಯನ್ನು ಡಾ. ವಿಶ್ವನಾಥ ಬದಿಕಾನ ಅವರಿಗೆ ವಹಿಸಲಾಗಿದೆ. ಹೀಗಾಗಿ ಪುರುಷೋತ್ತಮರನ್ನು ಬದಲಾಯಿಸಿ ವಿಶ್ವನಾಥರನ್ನು ನೇಮಿಸಲಾಗಿದೆ ಎಂಬ ಆರೋಪವು ಸರಿಯಲ್ಲ ಎಂದು ಹೇಳಿದರು.
ವಿವಿಧ ಮಾಧ್ಯಮಗಳಲ್ಲಿ ಅರೆಭಾಷೆ ಚಟುವಟಿಕೆ ನಡೆಸಲಾಗಿದೆ. ಅರೆಭಾಷೆ ಯಕ್ಷಗಾನ ಮತ್ತು ತಾಳಮದ್ದಳೆ ಕೃತಿ ಪ್ರಕಟಣೆಯ ಹಂತದಲ್ಲಿದೆ. ಅರೆಭಾಷೆ ಪುಸ್ತಕಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ಹಿಂಗಾರ ಪತ್ರಿಕೆಯ ಚಂದಾದಾರರ ಸಂಖ್ಯೆಯನ್ನು ೧೦೦೦ದಿಂದ ೧೮೦೦ಕ್ಕೆ ಏರಿಸಲಾಗಿದೆ. ಅರೆಭಾಷೆ ಸಾಧಕರ ಡಾಕ್ಯುಮೆಂಟರಿ ತಯಾರಿಸಲಾಗಿದೆ. ಸಂಸ್ಕೃತಿ ಶಿಬಿರಗಳನ್ನೂ ಆಯೋಜಿಸಲಾಗಿದೆ. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇದೆಲ್ಲವನ್ನೂ ಮೂಲ ಉದ್ಧೇಶ ಅರಿತೇ ಮಾಡಲಾಗಿದೆ. ಇದೆಲ್ಲಾ ಗೊತ್ತಿದ್ದರೂ ಸುಮ್ಮನೆ ಆರೋಪ ಮಾಡಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದರು.
ಅಕಾಡೆಮಿಯ ಸದಸ್ಯರುಗಳಾದ ಪುರುಷೋತ್ತಮ ಕಿರ್ಲಾಯ, ಎ.ಟಿ.ಕುಸುಮಾಧರ, ಎಂ.ಎಸ್.ಜಯಪ್ರಕಾಶ್, ಕಿರಣ್ ಕುಂಬಳಚೇರಿ, ಡಾ.ವಿಶ್ವನಾಥ ಬದಿಕಾ, ಡಾ. ಪುರುಷೋತ್ತಮ ಕರಂಗಲ್ಲು, ಭರತೇಶ ಅಲಸಂಡೆಮಜಲು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.