ತುರ್ತು ಪರಿಸ್ಥಿತಿಯ ಹೋರಾಟಗಾರರಿಗೆ ಗೌರವಾರ್ಪಣೆ
ತುರ್ತು ಪರಿಸ್ಥಿತಿಯ ವಿರುದ್ಧ ಸುಳ್ಯದ ಹೋರಾಟ ದಾಖಲೆ – ದು.ಗು. ಲಕ್ಷ್ಮಣ
1975- 77 ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಸುಳ್ಯದಲ್ಲಿ ನಡೆದ ಸತ್ಯಾಗ್ರಹ ಇತಿಹಾಸ ನಿರ್ಮಿಸುವ ದಾಖಲೆ. ಇಲ್ಲಿಂದ ಭೂಗತ ಪತ್ರಿಕೆ ಹೊರಬಂದದ್ದು, ಅಜ್ಞಾತ ಪರ್ವ ಕೈಬರಹ ಪತ್ರಿಕೆ ಅನಾವರಣಗೊಂಡದ್ದು, ಇಲ್ಲಿ ನಡೆದ ಸತ್ಯಾಗ್ರಹದ ರೀತಿ ದಾಖಲೆ ನಿರ್ಮಾಣ ಮಾಡಬಲ್ಲುದು ಎಂದು ಹಿರಿಯ ಪತ್ರಕರ್ತ, ತುರ್ತು ಪರಿಸ್ಥಿತಿಯ ಕಾಲದಲ್ಲಿ ಈ ಭಾಗದಲ್ಲಿ ಆರ್ಎಸ್ಎಸ್ ಪ್ರಚಾರಕರಾಗಿದ್ದ ದು.ಗು ಲಕ್ಷ್ಮಣ ಹೇಳಿದ್ದಾರೆ.
ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ನ ಮಂಥನ ವೇದಿಕೆ ವತಿಯಿಂದ ಇಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ‘ಸಂಕೋಲೆ -ಸಂಗ್ರಾಮ-ಸ್ವಾತಂತ್ರ್ಯ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಇದೇ ಸಮಾರಂಭದಲ್ಲಿ ತುರ್ತು ಪರಿಸ್ಥಿತಿಯ ಹೋರಾಟಗಾರರಿಗೆ ಗೌರವಾರ್ಪಣೆ ನಡೆಯಿತು.
ತುರ್ತು ಪರಿಸ್ಥಿತಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದು, ದೇಶದಲ್ಲಿ ಸರ್ವಾಧಿಕಾರದ ವಿಜೃಂಭಣೆ ನಡೆದ ವ್ಯವಸ್ಥೆ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಇದರ ವಿರುದ್ಧ ಸಮರ ಸಾರಿದರು. ಪರಿಣಾಮವಾಗಿ ಸತ್ಯಾಗ್ರಹಗಳು ನಡೆಯಿತು. ಅಂದು ಹೋರಾಟ ಮಾಡಿದ ಕಾರ್ಯಕರ್ತರಲ್ಲಿ ಮುಂದೆಂದೋ ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ನಿಗಮದ ಮಂಡಳಿಗಳಲ್ಲಿ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಅವರ ಎದುರು ಇದ್ದದ್ದು ರಾಷ್ಟ್ರೀಯ ಪ್ರಜ್ಞೆಮಾತ್ರ ಎಂದು ಹೇಳಿದ ದು.ಗು. ಲಕ್ಷ್ಮಣರವರು ತುರ್ತು ಪರಿಸ್ಥಿತಿಯ ಹೋರಾಟಗಾರರು ಅನೇಕ ಹಿಂಸೆಗಳನ್ನು ಎದುರಿಸಬೇಕಾಯಿತು. ಆದರೂ ಅವರು ಅಧೀರರಾಗಿಲ್ಲ. ಬದಲು ದೇಶಕ್ಕಾಗಿ ಸೇವೆ ಸಲ್ಲಿಸಿದ್ದೇವೆ ಎಂಬ ಧನ್ಯತಾ ಭಾವ ಅವರಲ್ಲಿದೆ. ಇದು ದೇಶಪ್ರೇಮಿಯೊಬ್ಬನ ನಿಜವಾದ ತಾಕತ್ತು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ತುರ್ತು ಪರಿಸ್ಥಿತಿಯ ಹೇರಿಕೆ ಮೂಲಕ ಕಾಂಗ್ರೆಸ್ ದೇಶದ ಮೇಲೆ ಅತ್ಯಾಚಾರ, ಅನಾಚಾರ ಎಸಗಿತು. ಆದರೆ ರಾಷ್ಟ್ರೀಯ ಚಿಂತನೆಯ ಮಕ್ಕಳು ಅದಕ್ಕೆ ಬುದ್ಧಿ ಕಲಿಸಿತು. ತುರ್ತು ಪರಿಸ್ಥಿತಿಯ ಹೇರಿಕೆ ಮಾಡಿದ ಕಾಂಗ್ರೆಸ್ ಅಂದು ಮತ್ತು ಇಂದು ದೇಶದ ಜನತೆಗೆ ಮೋಸವನ್ನೇ ಮಾಡುತ್ತಿದೆ., ಇದಕ್ಕೆ ಕಮ್ಯುನಿಸ್ಟರು ಹಾಗೂ ಮುಸ್ಲಿಮರು ಸಹಕಾರ ನೀಡುತ್ತಿದ್ದಾರೆ. ಸಿಎಎ ಕಾನೂನು ವಿರುದ್ಧ ಸಂಘರ್ಷ, ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ, ಅಗ್ನಿಪಥಕ್ಕೆ ವಿರೋಧ, ಹಿಜಾಬ್, ಹಲಾಲ್ ಅನುಷ್ಠಾನ ಇವುಗಳ ಮೂಲಕ ಇವರೆಲ್ಲಾ ಈ ಷಡ್ಯಂತ್ರ ಮುಂದುವರೆಸುತ್ತಿದ್ದಾರೆ. ಇವುಗಳ ವಿರುದ್ಧ ಹಿಂದೂ ಸಮಾಜ ಈಗ ತಿರುಗಿ ನಿಲ್ಲುತ್ತಿದೆ ಎಂದು ಹೇಳಿದರು.
ತುರ್ತು ಪರಿಸ್ಥಿತಿಯ ಕರಾಳ ನೆನಪುಗಳ ಪ್ರದರ್ಶಿನಿಯನ್ನು ಉದ್ಘಾಟಿಸಿದ ಸಚಿವ ಎಸ್.ಅಂಗಾರ ಮಾತನಾಡಿ, ತುರ್ತು ಪರಿಸ್ಥಿತಿಯ ಹೋರಾಟದಲ್ಲಿ ನಾನು ಭಾಗಿಯಾಗಿರಲಿಲ್ಲ. ಆದರೆ ಆ ಕಾಲದ ಕಷ್ಟದ ಅರಿವಿದೆ. ಅಂದಿನ ಹೋರಾಟದಿಂದ ಇಂದು ನಾವು ಸುಖವನ್ನು ಅನುಭವಿಸುವಂತಾಗಿದೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಸಂಕೋಲೆ-ಸಂಗ್ರಾಮ-ಸ್ವಾತಂತ್ರ್ಯ ಕೃತಿಯ ಲೇಖಕರಾದ ನಿವೃತ್ತ ಅಧ್ಯಾಪಕ ಕುಂಞಟ್ಟಿ ಶಿವರಾಮ ಗೌಡ ಮಾತನಾಡಿ, ತುರ್ತು ಪರಿಸ್ಥಿತಿಯ ಹೋರಾಟ ಬ್ರಿಟೀಷರ ವಿರುದ್ಧದ ಹೋರಾಟಕ್ಕಿಂತಲೂ ಮಿಗಿಲು. ಈ ಹೋರಾಟಗಾರರ್ನು ದಾಖಲಿಸುವ ಕಾರ್ಯ ಪುಸ್ತಕದಲ್ಲಿ ಆಗಿದೆ ಎಂದು ಹೇಳಿದರು.
ಪ್ರಸ್ತಾವನೆಗೈದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸೇವಾ ಪ್ರಮುಖ್ ನ. ಸೀತಾರಾಮ ಮಾತನಾಡಿ, ಈ ಪೀಳಿಗೆಯ ಬಹುತೇಕರಿಗೆ ತುರ್ತು ಪರಿಸ್ಥಿತಿಯ ಹೋರಾಟದ ಅರಿವಿಲ್ಲ. ಹಾಗಾಗಿ ಇಂತಹ ಕಾರ್ಯಕ್ರಮ ರೂಪಿಸಲಾಗಿದೆ. ಇದು ಹೊಸ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಾ ಸಂಘದ ಜೇಷ್ಠ ಪ್ರಚಾರಕ ದಾ.ಮ. ರವೀಂದ್ರ ಸಮಾರೋಪ ಭಾಷಣ ಮಾಡಿದರು. ಆರ್ಎಸ್ಎಸ್ ಸಂಘಚಾಲಕ ಚಂದ್ರಶೇಖರ ತಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಪ್ರದ್ಯುಮ್ನ ಉಬರಡ್ಕ ಸ್ವಾಗತಿಸಿದರು. ಎ.ಟಿ. ಕುಸುಮಾಧರ, ಶ್ರೀದೇವಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ತುರ್ತು ಪರಿಸ್ಥಿತಿಯ ವಿರುದ್ಧ ಸುಳ್ಯ ತಾಲೂಕಿನಲ್ಲಿ ಹೋರಾಟ ಮಾಡಿದ ೭೪ ಕಾರ್ಯಕರ್ತರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಗಾಯಕ ಕೆ.ಆರ್.ಗೋಪಾಲಕೃಷ್ಣ ಹಾಗೂ ಯಕ್ಷಗಾನ ಭಾಗವತೆ ಶ್ರೀಮತಿ ಭವ್ಯಶ್ರೀ ಕುಲ್ಕುಂದ ಅವರಿಂದ ದೇಶಭಕ್ತಿಗೀತೆಗಳ ಗಾಯನ ನಡೆಯಿತು. ಅಪರಾಹ್ನ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಕ್ರಾಂತಿ ಸೂರ್ಯ ಭಗತ್ ಸಿಂಗ್ ಯಕ್ಷಗಾನ ಪ್ರದರ್ಶನಗೊಂಡಿತು.