ರಿಕ್ಟರ್ ಮಾಪಕದಲ್ಲಿ 1.8 ಪರಿಮಾಣ ದಾಖಲು
ಸುಳ್ಯ ತಾಲೂಕು ಕಚೇರಿಯಲ್ಲಿ ಸಹಾಯವಾಣಿ ನಂಬರ್
ಇಂದು ಸಂಜೆ ಕೊಡಗು – ಸುಳ್ಯ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬುಲೆಟಿನ್ ಬಿಡುಗಡೆಗೊಳಿಸಿದ್ದು, ರಿಕ್ಟರ್ ಮಾಪಕದಲ್ಲಿ 1.8 ದಾಖಲಾಗಿರುವುದಾಗಿ ತಿಳಿಸಿದೆ.
ಸಂಜೆ 4 ಗಂಟೆ 32 ನಿಮಿಷಕ್ಕೆ ಈ ಭೂಕಂಪನ ಸಂಭವಿಸಿದ್ದು ಮಡಿಕೇರಿ – ದಕ್ಷಿಣ ಕನ್ನಡ ಗಡಿಗ್ರಾಮವಾಗಿರುವ ಚೆಂಬುವಿನಿಂದ 5.8 ವಾಯುವ್ಯ ದಿಕ್ಕಿನಲ್ಲಿ ಭೂಮಿಯ 5 ಕಿಲೋಮೀಟರ್ ಆಳದಲ್ಲಿ ರಿಕ್ಟರ್ ಮಾಪಕ 1.8 ರಷ್ಟು ಭೂಕಂಪನವಾಗಿದೆ. ಇದರ ಪರಿಣಾಮ ಮಡಿಕೇರಿ ತಾಲೂಕಿನ ಕರಿಕೆ ಭಾಗದ ವಾಯುವ್ಯದಲ್ಲಿ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸಂಪಾಜೆ ಭಾಗದ ಪಶ್ಚಿಮದಲ್ಲಿ 12 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸುಳ್ಯ ತಾಲೂಕು ಭಾಗದ ಆಗ್ನೇಯದಲ್ಲಿ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಈ ಪ್ರದೇಶದ 15 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಕೆಎಸ್ಎನ್ಡಿಎಂಸಿ ಮಾಹಿತಿ ನೀಡಿದೆ.
ಹೀಗಾಗಿ ಕೊಡಗು ಗಡಿ ಪ್ರದೇಶಕ್ಕೆ ಹತ್ತಿರದಲ್ಲಿರುವ ಸುಳ್ಯ ತಾಲೂಕಿನ ಪ್ರದೇಶಗಳಲ್ಲಿ ಮಾತ್ರ ಭೂಮಿ ಕಂಪಿಸಿರುವ ಅನುಭವ ಆಗಿರುವುದಾಗಿ ತಿಳಿದುಬಂದಿದೆ.
ತಾಲೂಕು ಕಚೇರಿಯಲ್ಲಿ ಹೆಲ್ಪ್ ಲೈನ್:
ಭೂ ಕಂಪನದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಕಚೇರಿಯಲ್ಲಿ ಹೆಲ್ಪ್ ಲೈನ್ ನಂಬರ್ ಜಾರಿಗೆ ಬಂದಿದ್ದು, 9449318532 ಅಥವಾ 9741482601 ನಂಬರ್ ಸಂಪರ್ಕಿಸಬಹುದು ಎಂದು ತಹಶೀಲ್ದಾರ್ ಅನಿತಾ ಲಕ್ಷ್ಮಿ ತಿಳಿಸಿದ್ದಾರೆ.