ಪಕ್ಷದ ಕಾರ್ಯಕರ್ತರಿಗೆ ಮಾತ್ರ ಸರ್ಕಾರದ ಯೋಜನೆಗಳು ಎಂಬುದು ದುರಾದೃಷ್ಟ : ಪಿ. ಸಿ. ಜಯರಾಮ್
” ನಮ್ಮ ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲವಾಗಿ ನಂಬಿದ್ದು ಚುನಾವಣೆಗಳು ಮತ್ತು ಆಡಳಿತ ವ್ಯವಸ್ಥೆಗಳು ಅದಕ್ಕೆ ಅನುಗುಣವಾಗಿ ನಡೆಯಬೇಕಾಗಿದೆ. ಆದರೆ ಕಳೆದ 28 ವರ್ಷಗಳಿಂದ ಸುಳ್ಯದ ಶಾಸಕರಾಗಿ, ಇದೀಗ ಸಚಿವರಾಗಿ ಇರುವ ಅಂಗಾರರು ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮಾತ್ರವಷ್ಟೇ ಸರ್ಕಾರದ ಯೋಜನೆಗಳನ್ನು ತಲುಪಿಸಿ ಎಂದು ತಮ್ಮ ಪಕ್ಷದ ಕಚೇರಿಯ ಸಿಬ್ಬಂದಿಗೆ ಹೇಳಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿದ್ದು ಇದು ಸುಳ್ಯದ ಜನತೆಗೆ ದುರಷ್ಟಕರ ಸಂಗತಿಯಾಗಿದೆ ” ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ಇಂದು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
” ತಿನ್ನುವ ಅನ್ನಕ್ಕೂ, ನೀರಿಗೂ, ಹಾಲಿಗೂ, ಮಜ್ಜಿಗೆಗೂ ಟ್ಯಾಕ್ಸ್ ಹಾಕುವ ಸರಕಾರ ಜನರನ್ನು ಸುಲಿಗೆ ಮಾಡುತ್ತಿದೆ. ಬೆಲೆ ಏರಿಕೆಯಿಂದ ಜನತೆ ತತ್ತರಿಸಿರುವ ಈ ಸಂದರ್ಭದಲ್ಲಿ ಜಿಎಸ್ಟಿ ಹೇರುವ ಮೂಲಕ ಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದು ಖಂಡನೀಯ” ಎಂದು ಅವರು ಹೇಳಿದರು.
” ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರಿಗೆ ದಿನ ನಿತ್ಯದ ಬದುಕು ಕಷ್ಟಕರವಾಗಿರುವ ಈ ಸಂದರ್ಭದಲ್ಲಿ ಸರಕಾರದ ಸೌಲಭ್ಯಗಳನ್ನು ಹಂಚಿಕೆ ಮಾಡುವಾಗ ಜನಪ್ರತಿನಿಧಿಗಳು ಕೇವಲ ಒಂದು ಪಕ್ಷದವರಿಗೆ ಮಾತ್ರ ಎಂದು ಹಂಚಿಕೆ ಮಾಡುವುದು ಸರಿಯಲ್ಲ. ಸಚಿವರು ಕೇವಲ ಒಂದು ಪಕ್ಷದ ಸಚಿವರು ಮಾತ್ರವಲ್ಲ. ಅವರು ಇಡೀ ಕರ್ನಾಟಕದ ಎಲ್ಲಾ ವರ್ಗಗಳ, ಎಲ್ಲಾ ಸಮುದಾಯದ, ಸಚಿವರಾಗಿರುತ್ತಾರೆ” ಎಂದು ಜಯರಾಮ್ ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಭರತ್ ಮುಂಡೋಡಿ ಮಾತನಾಡಿ
” ಇದೀಗ ರಾಜ್ಯ ಸರಕಾರ ಸಾಧನಾ ಸಮಾವೇಶ ಮಾಡಲು ಹೊರಟಿದೆ. ಯಾವ ಉದ್ದೇಶದಿಂದ ಎಂದು ತಿಳಿಯುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಡಳಿತದಲ್ಲಿ ಒಂದು ವರ್ಷದಿಂದ ರಾಜ್ಯದಲ್ಲಿ ಸಮಸ್ಯೆಗಳನ್ನೇ ಸೃಷ್ಟಿಸಿದ್ದಾರೆ. ಹಿಜಾಬ್ ಪ್ರಕರಣ, ಹಲಾಲ್ ಕಟ್, ಜಟ್ಕಾ ಕಟ್, ರಾಷ್ಟ್ರಕವಿ ಕುವೆಂಪುರವರಿಗೆ ಅವಮಾನ, ಈ ರೀತಿ ಹಲವಾರು ವಿಷಯಗಳ ಬಗ್ಗೆ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸಿರುವ ಕೆಲಸವನ್ನು ಮಾಡಿದ್ದಾರೆ ವಿನಹ ಅಭಿವೃದ್ಧಿಯ ಒಂದೇ ಒಂದು ಕಾರ್ಯವನ್ನು ಮಾಡಲಿಲ್ಲ. ಈ ರೀತಿ ಸಂಪೂರ್ಣ ವೈಫಲ್ಯ ಕಂಡಿರುವ ರಾಜ್ಯ ಸರಕಾರ ಜನರ ಕ್ಷಮಾಪಣಾ ಸಮಾವೇಶ ಮಾಡಲಿ ” ಎಂದು ಹೇಳಿದರು. ” ಹಿಜಾಬ್,ಆಹಾರ ಪದ್ಧತಿ ವಿಚಾರದಲ್ಲಿ ಜನರ ಮಧ್ಯೆ ದ್ವೇಷ ಬಿತ್ತುವ ಕೆಲಸ ಮಾಡಿದ್ದಲ್ಲದೆ, ಕಾಮಗಾರಿಗಳಿಗೆ ಟೆಂಡರ್ ಇಲ್ಲದೆ ಸರಕಾರಿ ಏಜೆನ್ಸಿಗಳಿಗೆ ಕಾಮಗಾರಿ ನೀಡಿ ಬಿಜೆಪಿ ಕಾರ್ಯಕರ್ತರಿಗೆ ಸಬ್ ಕಂಟ್ರಾಕ್ಟರ್ ನೀಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಎಲ್ಲೆಡೆ ಅವೈಜ್ಞಾನಿಕ ಕಾಮಗಾರಿಗೆ ಕಾರಣವಾಗುತ್ತಿದೆ” ಎಂದು ಅವರು ಹೇಳಿದರು. ” ಅಭಿವೃದ್ಧಿ ಅಗತ್ಯತೆಯ ಬಗ್ಗೆ ಮಾಧ್ಯಮಗಳು ವರದಿ ಮಾಡಿದರೆ ಮಾಧ್ಯಮಗಳನ್ನೇ ದೂರುವ ಪ್ರಕ್ರಿಯೆ ಕಂಡು ಬರುತ್ತಿದೆ. ಬಿಜೆಪಿಯವರಿಗೆ ವಿಮರ್ಶೆಯನ್ನು ಸಹಿಸಿಕೊಳ್ಳುವ ಶಕ್ತಿ ಇಲ್ಲ ” ಎಂದು ಮುಂಡೋಡಿ ಹೇಳಿದರು.
ಕೇಂದ್ರ ಸರ್ಕಾರವು ಈಡಿ, ಎಸಿಬಿ, ಅಂತಹ ನಾಗರಹಾವು ತೋರಿಸಿ ವಿರೋಧ ಪಕ್ಷದವರನ್ನು ಮತ್ತು ಅವರ ಬಗ್ಗೆ ಮಾತನಾಡುವವರನ್ನು ಭಯಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿಯವರನ್ನು ನಿರಂತರ 58 ಗಂಟೆಗಳ ಕಾಲ ಇಡಿ ತನಿಖೆ ನಡೆಸಿ ಏನು ಪ್ರಯೋಜನ ಕಾಣದಿದ್ದಾಗ, ಇದೀಗ ಸೋನಿಯಾ ಗಾಂಧಿಯವರನ್ನು ತನಿಖೆಗೆ ಒಳಪಡಿಸಿದ್ದಾರೆ ” ಎಂದು ಅವರು ಹೇಳಿದರು.
” ಕಳೆದ ಕೆಲವು ದಿನಗಳ ಹಿಂದೆ ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಾಲೂಕಿಗೆ ಭೇಟಿ ನೀಡಿದ್ದರೂ ತಾಲೂಕಿಗೆ ಏನೂ ಪ್ರಯೋಜನವಾಗಿಲ್ಲ. ಸುಳ್ಯ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾದವರಿಗೆ ಯಾವುದೇ ಪರಿಹಾರ ದೊರಕಿಲ್ಲ. ಆದುದರಿಂದ ಮಳೆ, ಭೂಕಂಪನದಿಂದ ಹಾನಿಯಾದವರಿಗೆ ತಕ್ಷಣ ಪರಿಹಾರ ನೀಡುವ ಕೆಲಸವನ್ನು ಸರಕಾರ ಮಾಡಬೇಕು ” ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದರು. ” ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅರಂಬೂರು, ಅಂಗಡಿಮಜಲು, ಬೆಂಡೋಡಿ, ಶಾಂತಿಮೊಗರು, ಕುಮಾರಧಾರ, ಹೊಸಮಠ ಸೇರಿ ಸುಳ್ಯ ಕ್ಷೇತ್ರದಲ್ಲಿ ಹಲವು ಹೊಸ ಸೇತುವೆಗಳನ್ನು ನಿರ್ಮಾಣ ಮಾಡಲಾಗಿತ್ತು. ಬಿಜೆಪಿ ಆಡಳಿತದ ಅವಧಿಯಲ್ಲಿ ಅಂತಹಾ ಎಷ್ಟು ಸೇತುವೆ ನಿರ್ಮಾಣ ಮಾಡಿದೆ ? ” ಎಂದು ವೆಂಕಪ್ಪ ಗೌಡರು ಪ್ರಶ್ನಿಸಿದರು.
” ಕಳಂಜದಲ್ಲಿ ಅಮಾಯಕ ಯುವಕನ ಮೇಲೆ ದುಷ್ಕರ್ಮಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ” ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಹೇಳಿದರು.
” ದುಷ್ಕರ್ಮಿಗಳು ಕಾನೂನನ್ನು ಕೈಗೆತ್ತಿಕೊಂಡು ಇನ್ನೊಬ್ಬರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ ” ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನ.ಪಂ.ಮಾಜಿ ಸದಸ್ಯ ದಿನೇಶ್ ಅಂಬೆಕಲ್ಲು, ಮಾಧ್ಯಮ ವಕ್ತಾರರಾದ ಭವಾನಿಶಂಕರ ಕಲ್ಮಡ್ಕ, ನಂದರಾಜ ಸಂಕೇಶ ಉಪಸ್ಥಿತರಿದ್ದರು.