ಸುಳ್ಯದ ಆಂಗಿಕ ಮಲ್ಟಿಮೀಡಿಯಾ, ಗೌಡರ ಯುವ ಸೇವಾ ಸಂಘ ಸುಳ್ಯ ಹಾಗೂ ಮಡಿಕೇರಿಯ ಕೊಡಗು ಗೌಡ ಯುವ ವೇದಿಕೆ ಇವರ ಸಹಯೋಗದಲ್ಲಿ ಆ. 7 ರಂದು 3ನೇ ವರ್ಷದ ವಿಶ್ವ ಅರೆಭಾಷೆ ಹಬ್ಬ – ಆಟಿ 18 ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ನಡೆಯಲಿದೆ ಎಂದು ಕಲಾ ಶಾಲೆಯ ರಂಗ ನಿರ್ದೇಶಕ ಲೊಕೇಶ್ ಊರುಬೈಲು ಹೇಳಿದರು.
ಜು.21 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ಕುರಿತು ವಿವರ ನೀಡಿದರು. ಭಾಷೆಯ ಬೆಳವಣಿಗೆ ಮತ್ತು ಅರೆಭಾಷೆಯಲ್ಲಿ ಇರುವ ಪ್ರತಿಭಾನ್ವಿತ ಕಲಾವಿದರಿಗಾಗಿ ಒಂದು ಸದುದ್ದೇಶದ ವೇದಿಕೆಯನ್ನು ಕಲ್ಪಿಸಿ ಕೊಡುವುದರ ಜೊತೆಗೆ , ಅರೆಭಾಷೆಯ ಸಂಸ್ಕೃತಿ , ಸಾಹಿತ್ಯ , ಸಂಪ್ರದಾಯಗಳನ್ನು ಜನಾಂಗದಿಂದ ಜನಾಂಗಕ್ಕೆ ತಿಳಿಸುವುದು . ಹಾಗೂ ಸಮುದಾಯದ ಒಗ್ಗಟ್ಟನ್ನು ಕಾಯ್ದುಕೊಳ್ಳಲು ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದು ಕೇವಲ ಅರೆಭಾಷಿಕರಿಗೆ ಸೀಮಿತವಾಗದೆ , ಅರೆಭಾಷೆಯ ಮೇಲೆ ಪ್ರೀತಿ , ಅಭಿಮಾನವಿರುವ ಪ್ರತೀಯೊಬ್ಬರೂ ಭಾಗವಹಿಸಬಹುದು .
ವಿಶ್ವ ಅರೆಭಾಷೆ ಹಬ್ಬವು ಅರೆಭಾಷೆಯಲ್ಲಿ ಆಹ್ವಾನಿತ ಕವಿಗೋಷ್ಠಿ , ಉಪನ್ಯಾಸ , ಸಾಂಸ್ಕೃತಿಕ ವೈವಿಧ್ಯತೆಯನ್ನು ಮೂಡಿಸೋ ಹಲವು ಸ್ಪರ್ಧೆಗಳನ್ನು ಈಗಾಗಲೇ ಆಯೋಜಿಸಲಾಗಿದೆ. ಚೆಂಬು ಸಾಹಿತ್ಯ ವೇದಿಕೆ ಇವರ ಪ್ರಾಯೋಜಕತ್ವದಲ್ಲಿ ಎಂ.ಜಿ ಕಾವೇರಮ್ಮನವರ ಹುಟ್ಟುಹಬ್ಬದ ಪ್ರಯುಕ್ತ ಇದೀಗ ನಾಲ್ಕನೇ ವರ್ಷದ ಅರೆಭಾಷೆ ಕವನ ಸ್ಪರ್ಧೆ. ಚಂದ್ರಾವತಿ ಬಡ್ಡಡ್ಕ ಇವರ ನೇತೃತ್ವದಲ್ಲಿ ಅರೆಭಾಷೆ ಲಘು ಪ್ರಬಂಧ ಸ್ಪರ್ಧೆ ” ಹರ್ಟೆ, ಅರೆಭಾಷೆ ರೀಲ್ಸ್ ಸ್ಪರ್ಧೆ ” ತಕಥೈ, ಅರೆಭಾಷೆ ಕಥಾಸ್ಪರ್ಧೆ, ಹಳೆ ಸಂಪ್ರದಾಯಗಳ ಮಾಹಿತಿಗಳ ಸ್ಪರ್ಧೆ – ಕೊಪ್ಪರಿಗೆ, ಅಲ್ಲದೇ ಅರೆಭಾಷೆ ತಂಡಗಳಿಗಾಗಿ ಒಂದೊಳ್ಳೆ ತಂಡವನ್ನು ಕಲ್ಪಿಸುವ ದೃಷ್ಟಿಯಿಂದ ಸುಗ್ಗಿ ಶೀರ್ಷಿಕೆಯಡಿ 15 ರಿಂದ 20 ನಿಮಿಷದೊಳಗಿನ ಲೈವ್ ಸ್ಪರ್ಧೆಗಳನ್ನು ಆ. 7 ರಂದು ನಡೆಸಲು ಉದ್ದೇಶಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಸದಸ್ಯರಾದ ದಿನೇಶ್ ಮಡಪ್ಪಾಡಿ, ಎನ್.ಎ.ಜ್ಞಾನೇಶ್, ಭವಾನಿಶಂಕರ್ ಅಡ್ತಳೆ, ಬೆಳ್ಯಪ್ಪ ಗೌಡ ಬಳ್ಳಡ್ಕ, ಪಿ.ಎಸ್.ಗಂಗಾಧರ್ ಉಪಸ್ಥಿತರಿದ್ದರು.