ಸಿ.ಸಿ. ಟಿ.ವಿ. ಫೂಟೇಜ್ ಪರಿಶೀಲನೆ ವೇಳೆ ಅನುಚಿತ ವರ್ತನೆಯಾಗದಿರುವುದು ಪತ್ತೆ
ತರಕಾರಿ ಅಂಗಡಿಯ ಸಿಬ್ಬಂದಿಯೊಬ್ಬರು ಅಂಗಡಿಗೆ ಗ್ರಾಹಕರಾಗಿ ಬಂದ ಮಹಿಳೆಯೊಬ್ಬರೊಡನೆ ಅನುಚಿತ ವರ್ತನೆ ತೋರಿದರೆಂಬ ಆರೋಪ ಬಂದು, ಪೋಲೀಸರು ವಿಚಾರಣೆ ಆರಂಭಿಸಿ, ಸಿ.ಸಿ.ಟಿ.ವಿ. ಫೂಟೇಜ್ ಪರಿಶೀಲಿಸಿದಾಗ ಅಂತಹ ವರ್ತನೆ ನಡೆಯದಿರುವುದು ಕಂಡುಬಂದುದರಿಂದ ಮಹಿಳೆ ಪೋಲೀಸ್ ದೂರು ನೀಡದೆ ಹಿಂತಿರುಗಿದ ಘಟನೆ ವರದಿಯಾಗಿದೆ.
ಸುಳ್ಯ ಪೋಸ್ಟ್ ಆಫೀಸ್ ಬಳಿಯ ತರಕಾರಿ ಅಂಗಡಿಯ ಸಿಬ್ಬಂದಿಯೋರ್ವರು ಜುಲೈ 20ರಂದು ಸಂಜೆ 4 ಗಂಟೆಗೆ ತಾನು ತರಕಾರಿ ಖರೀದಿಸಲು ಹೋಗಿದ್ದಾಗ ಮೈ ಮುಟ್ಟಿ ಅನುಚಿತ ವರ್ತನೆ ತೋರಿದ್ದಾರೆಂದು ಮಹಿಳೆಯೊಬ್ಬರು ಸುಳ್ಯ ಪೋಲೀಸ್ ಠಾಣೆಗೆ ಬಂದು ಹೇಳಿದ್ದರು. ಪೋಲೀಸರು ವಿಚಾರಣೆ ಆರಂಭಿಸಿದರು.
ವಿಚಾರಣೆ ವೇಳೆ ತರಕಾರಿ ಅಂಗಡಿಯ ಸಿ.ಸಿ. ಕ್ಯಾಮರಾ ಪರಿಶೀಲಿಸಿದಾಗ ಅಂಗಡಿಯ ಯುವಕ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುವುದು ಕಂಡು ಬರಲಿಲ್ಲವೆನ್ನಲಾಗಿದೆ.
ಆ ಬಳಿಕ ಪೊಲೀಸರು ಮಹಿಳೆಯ ಬಳಿ ” ಇದರ ಕುರಿತು ತನಿಖೆ ನಡೆಸಲು ದೂರು ನೀಡುವುದಾದರೆ ನಾವು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸುತ್ತೇವೆ ” ಎಂದು ಹೇಳಿದ್ದಾರೆನ್ನಲಾಗಿದೆ.
ಆದರೆ ಮಹಿಳೆ ದೂರು ನೀಡಲು ಮುಂದಾಗದೆ ಠಾಣೆಯಿಂದ ಹೊರ ಹೋದರೆಂದು ತಿಳಿದುಬಂದಿದೆ.
ಈ ಕುರಿತು ಸುದ್ದಿಯೊಂದಿಗೆ ಮಾತನಾಡಿರುವ ತರಕಾರಿ ಅಂಗಡಿಯ ಮಾಲಕರು ” ಕಳೆದ ಕೆಲವು ದಿನಗಳಿಂದ ಕರೆಂಟ್ ಸಮಸ್ಯೆ ಇದ್ದು ಸಿಸಿಟಿವಿಯನ್ನು ಬೆಳಗಿನ ಸಂದರ್ಭ ಆಫ್ ಮಾಡಲಾಗುತ್ತಿತ್ತು.
ಏನೋ ಪುಣ್ಯಕ್ಕೆ ಘಟನೆ ನಡೆದ ದಿನ ಸಿಸಿಟಿವಿಯನ್ನು ಆನ್ ಇರಿಸಿದ್ದರಿಂದ ನಿಜ ವಿಷಯ ಗೊತ್ತಾಗಿ ದೊಡ್ಡದೊಂದು ಅನಾಹುತ ತಪ್ಪಿದಂತಾಗಿದೆ” ಎಂದು ಹೇಳಿದ್ದಾರೆ.