ತುಕ್ಕು ಹಿಡಿಯದ ಸ್ಟೈನ್ ಲೆಸ್ ಸ್ಟೀಲ್ ಆಗಿದ್ದವರು ಜ್ಯೋತಿ ಜಗ್ಗಣ್ಣ : ಎಂ ಬಿ ಸದಾಶಿವ
“ಜ್ಯೋತಿ ಇಂಡಸ್ಟ್ರೀಸ್ ಮಾಲಕರಾದ, ಸುಳ್ಯ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕನ್ನೆಜಾಲು ಜಗನ್ನಾಥ ರೈ ಯವರು ಸ್ಟೀಲ್ ಇಂಡಸ್ಟ್ರೀಸ್ ನಡೆಸುತ್ತಿದ್ದವರು. ಅವರ ವ್ಯಕ್ತಿತ್ವ ಇಂದು ತುಕ್ಕು ಹಿಡಿಯದ ಸ್ಟೈನ್ ಲೆಸ್ ಸ್ಟೀಲ್ ಆಗಿತ್ತು” ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ ಬಿ ಸದಾಶಿವ ನುಡಿದರು.
ಜು. 18ರಂದು ಹೃದಯಾಘಾತದಿಂದ ನಿಧನರಾದ ಕನ್ನೆಜಾಲು ಜಗನ್ನಾಥ ರೈಯವರಿಗೆ ಲಯನ್ಸ್ ಕ್ಲಬ್ ಸುಳ್ಯ ನೇತೃತ್ವದಲ್ಲಿ ವರ್ತಕರ ಸಂಘ ಸುಳ್ಯ, ಗ್ಯಾರೇಜು ಮಾಲಕರ ಸಂಘ ಸುಳ್ಯ, ಕೆವಿಜಿ ಸುಳ್ಯ ಹಬ್ಬ ಸೇವಾ ಸಮಿತಿ ಸುಳ್ಯ, ರೋಟರಿ ಕ್ಲಬ್ ಸುಳ್ಯ ಮತ್ತು ರೋಟರಿ ಕ್ಲಬ್ ಸುಳ್ಯ ಸಿಟಿಗಳ ಸಹಯೋಗದೊಂದಿಗೆ ಜುಲೈ 21ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಜ್ಯೋತಿ ಇಂಡಸ್ಟ್ರೀಸ್ ಜಗನ್ನಾಥ ರೈ ಯವರ ಗುಣಗಾನಗೈದು ಮಾತನಾಡುತ್ತಿದ್ದರು.
ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ಮಾತನಾಡಿ, “ನಿಯತ್ತಿನಿಂದ ಬದುಕಿದರೆ ಏನಾಗಬಹುದು ಎಂಬುದಕ್ಕೆ ಜಗ್ಗಣ್ಣ ಪ್ರತ್ಯಕ್ಷ ಸಾಕ್ಷಿ” ಎಂದರೆ, “ಜಗನ್ನಾಥ ರೈ ಯವರು ನಿಜವಾದ ಅರ್ಥದಲ್ಲಿ ಅಜಾತಶತ್ರುವಾಗಿದ್ದರು. ಅವರು ಒಬ್ಬನೇ ಒಬ್ಬನ ಬಗ್ಗೆ ಕೆಟ್ಟ ಅಭಿಪ್ರಾಯದ ಮಾತು ಆಡಿದವರಲ್ಲ” ಎಂದು ರೋಟರಿ ಅಧ್ಯಕ್ಷ ಹಾಗೂ ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಹೇಳಿದರು.
ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ. ಎನ್.ಎ. ಜ್ಞಾನೇಶ್ ರೋಟರಿ ಸಿಲ್ಕ್ ಸಿಟಿ ನಿಯೋಜಿತ ಅಧ್ಯಕ್ಷ ಮುರಳೀಧರ ರೈ, ಹಿರಿಯ ಸಾಮಾಜಿಕ ಕಾರ್ಯಕರ್ತ ರೊ. ಬಾಪೂ ಸಾಹೇಬ್, ಕೆವಿಜಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಮಾತನಾಡಿ, ಜಗನ್ನಾಥ ರೈಯವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ರೂಪಶ್ರೀ ಜೆ. ರೈ ಸ್ವಾಗತಿಸಿ, ಖಜಾಂಚಿ ಡಾ. ಲಕ್ಷ್ಮೀಶ್ ವಂದಿಸಿದರು. ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ ಕಾರ್ಯಕ್ರಮ ನಿರೂಪಿಸಿದರು.