ಕಸ್ತೂರಿ ರಂಗನ್ ವರದಿಯನ್ನು ಸಾರಸಾಗಟವಾಗಿ ತಿರಸ್ಕರಿಸಲು ಸಾಧ್ಯವಿಲ್ಲ.ಅದರ ಬದಲಾಗಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡುವುದರಿಂದ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಸೇರಿಸಿ ಸ್ಪಷ್ಟವಾದ ನೀಲಿ ನಕಾಶೆ ತಯಾರಿಸಿ ಮರು ಪರಿಶೀಲನಾ ಅರ್ಜಿಯನ್ನು ಹಸಿರು ಪೀಠಕ್ಕೆ ಮತ್ತು ಕೇಂದ್ರ ಪರಿಸರ ಸಚಿವಾಲಯಕ್ಕೆ ಸಮರ್ಪಿಸುವ ಕೆಲಸ ರಾಜ್ಯ ಸರಕಾರ ಮಾಡಬೇಕು ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಮತ್ತು ರೈತ ಹಿತ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಜು.23 ರಂದು ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲೆನಾಡು ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಲ್.ಪ್ರದೀಪ್ ಕುಮಾರ್ ಕಳೆದ ಒಂದು ದಶಕದಿಂದ ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ಧ ಜನರು ಹೋರಾಟ ನಡೆಸುತ್ತಾ ಬಂದರೂ ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸಮರ್ಪಕವಾದ ನೀಲಿ ನಕಾಶೆ ತಯಾರಿಸಿ ಸಮರ್ಪಿಸಿಲ್ಲ. ಕೇರಳ ರಾಜ್ಯ ಮಾತ್ರ ಆ ರೀತಿಯ ಬ್ಲೂ ಪ್ರಿಂಟ್ ತಯಾರಿಸಿ ಸಮರ್ಪಣೆ ಮಾಡಿದೆ. ಅದೇ ಮಾದರಿಯ ಬ್ಲೂ ಪ್ರಿಂಟ್ ತಯಾರಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಪರಿಸರ ಮತ್ತು ವನ್ಯ ಜೀವಿಗಳ ಸಂರಕ್ಷಣೆಗೆ ಪರಿಸರ ಸಂರಕ್ಷಣೆಯ ಕಾನೂನು ಅಗತ್ಯ. ಆದರೆ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಬರುವ 4165 ಹಳ್ಳಿಗಳ ಅರಣ್ಯದ ಅಂಚಿನಲ್ಲಿ ಬದುಕುವ ಜನರ ಹಿತವನ್ನೂ, ಹಕ್ಕನ್ನೂ ಕಾಪಾಡಿಕೊಳ್ಳುವಂತಾಗಬೇಕು ಎಂದು ಹೇಳಿದರು. ಅದಕ್ಕಾಗಿ ಕಂದಾಯ ಗ್ರಾಮಗಳನ್ನು, ಸಾಂಸ್ಕೃತಿಕ, ನೈಸರ್ಗಿಕ, ಸ್ವಾಯತ್ತತೆ ಹಾಗು
ಗುಡ್ಡಗಾಡು ಜನಾಂಗಗಳ ರಕ್ಷಣೆ ಕಾಯ್ದೆಯನ್ನು ಕಸ್ತೂರಿ ರಂಗನ್ ವರದಿಯಲ್ಲಿ ಅಳವಡಿಸಬೇಕು.
ಸಾಂಸ್ಕೃತಿಕ ಮತ್ತು ನೈಸರ್ಗಿಕ ಪ್ರದೇಶಗಳ ವಿಂಗಡಣೆ ಆಗಬೇಕು.ಗ್ರಾಮ ಪಂಚಾಯತ್ಗಳಿಗೆ ಸ್ವಾಯತ್ತತೆ ನೀಡಬೇಕು. ದೂರು ದುಮ್ಮಾನಗಳ ಪರಿಹಾರಕ್ಕೆ ಪಂಚಾಯತ್ಗೆ ಅಧಿಕಾರ ನೀಡಬೇಕು. ಪರಿಸರ ಸಂರಕ್ಷಣೆ ವರದಿಯು ವಸ್ತುನಿಷ್ಠವಾಗಿ 1908 ಮತ್ತು 1964 ರ ಸೆಟ್ಸ್ಮೆಂಟ್ ಕಾಯಿದೆಯ ಅನುಗುಣವಾಗಿ ಜಾರಿಗೆ ತರಬೇಕು. ಪರಿಸರ ಪ್ರದೇಶ ಮತ್ತು ಸಾಂಸ್ಕೃತಿಕ ಕಂದಾಯ ಗಾಮ ಹಾಗೂ ಭೂಮಿಗಳು ಮೊದಲು ವಿಭಜನೆ ಆಗುವುದು ಅತೀ ಅಗತ್ಯ. ಕಸ್ತೂರಿ ರಂಗನ್ ವರದಿಯಲ್ಲಿ ಗಡಿ ಗುರುತು ವೈಮಾನಿಕ 10 ಕಿ.ಮೀ. ಎಂಬುದನ್ನು ಸಡಿಲಿಕೆ ಮಾಡಿ 0-100 ಮೀಟರ್ ರೇಡಿಯಸ್ನಲ್ಲಿ ಇರಬೇಕು . ಪರಿಸರ ಸಂರಕ್ಷಣೆ ಮತ್ತು ಸಾಂಸ್ಕೃತಿಕ ವಲಯ ರಕ್ಷಣೆ ಮಾಡಬೇಕು. ಮಾನವನ ಹಾಗೂ ಪ್ರಾಣಿ ಸಂಕುಲದ ಬದುಕಿಗೆ ಚ್ಯುತಿ ಬರಬಾರದು . ಕೃಷಿಗೆ ಪೂರಕವಾದ ಕೀಟನಾಶಕ ಗೊಬ್ಬರಗಳಿಗೆ ನಿರ್ಬಂಧವನ್ನು ಕಾಲ ಕ್ರಮೇಣ ಸಡಿಲಿಕೆ ತರಬೇಕು. ಕೋವಿ ಪರವಾನಗಿ ನವೀಕರಣ ಆ ಪ್ರದೇಶದ ಮೂಲ ನಿವಾಸಿಗಳಿಗೆ ರಕ್ಷಣೆ ಹಕ್ಕು ಊರ್ಜಿತದಲ್ಲಿರಬೇಕು. ಆದುದರಿಂದ ಈ ಎಲ್ಲಾ ವಿಷಯಗಳನ್ನು ಒಳಗೊಂಡ ನೀಲಿ ನಕಾಶೆ ತಯಾರಿಸಿ ಹಸಿರು ಪೀಠದಲ್ಲಿ ಮತ್ತು ಪರಿಸರ ಸಚಿವಾಲಯಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಪ್ರದೀಪ್ ಕುಮಾರ್ ಆಗ್ರಹಿಸಿದರು.
ಕೊಲ್ಲಮೊಗ್ರ ರೈತ ಹಿತರಕ್ಷಣಾ ವೇದಿಕೆಯ ಹಮೀದ್ ಮಾತನಾಡಿ ಕಸ್ತೂರಿ ರಂಗನ್ ವರದಿ ಈಗಿನ ರೀತಿಯಲ್ಲಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಅದು ಸಮರ್ಪಕವಾದ ಮಾರ್ಪಾಡು ಆಗುವ ತನಕ ಹೋರಾಟ ಅಗತ್ಯ. ಜನರು ಮೌನವಾಗಿ ಕುಳಿತರೆ ಅದನ್ನು ಜನರು ಒಪ್ಪಿಕೊಂಡಿದ್ದಾರೆ ಎಂದು ಸರಕಾರ ಅನುಷ್ಠಾನ ಮಾಡಲು ಮುಂದಾಗುತ್ತಾರೆ. ಅದುದರಿಂದ ಜನರ ಪ್ರತಿರೋಧ ಅಗತ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಲ್ಲಮೊಗ್ರ ರೈತ ಹಿತರಕ್ಷಣಾ ವೇದಿಕೆಯ ಮಹಾಲಿಂಗೇಶ್ವರ ಶರ್ಮಾ, ಸಾಮಾಜಿಕ ಹೋರಾಟಗಾರ ಚಂದ್ರಶೇಖರ ಕೋನಡ್ಕ ಉಪಸ್ಥಿತರಿದ್ದರು.