ಸುಳ್ಯ-ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆಯ ಕೊಡಿಯಾಲಬೈಲ್ ಎಂಬಲ್ಲಿರುವ ಸೇತುವೆಯು ತಡೆಗೋಡೆ ಇಲ್ಲದೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಸೇತುವೆಯೂ ಕಿರಿದಾಗಿದ್ದು,ಸುಳ್ಯದಿಂದ ಹೋಗುವಾಗ ಸೇತುವೆಯ ಒಂದು ಕಡೆ ಎಡ ಬದಿಯ ತಡೆಗೋಡೆ ಇಲ್ಲದೆ ಭಾರೀ ಅಪಾಯವನ್ನು ಎದುರಿಸುವಂತಾಗಿದೆ. ಈ ರಸ್ತೆಯಾಗಿ ದಿನನಿತ್ಯ ಸಾವಿರಾರು ಮಂದಿ ಸಂಚರಿಸುತ್ತಿದ್ದಾರೆ. ಸರಕಾರಿ ಪದವಿ ಕಾಲೇಜು, ಮಲ್ನಾಡ್ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಸೇರಿದಂತೆ, ಸ್ಕೂಲ್ ವ್ಯಾನ್,ಖಾಸಗಿ ಬಸ್,ಹಲವಾರು ವಾಹನಗಳು ಸಂಚರಿಸುತ್ತದೆ.
ಇಳಿಜಾರಾದ ತಿರುವು ಕೂಡ ಇರುವುದರಿಂದ ವಾಹನಗಳು ನಿಯಂತ್ರಣ ಕಳೆದುಕೊಂಡು ಹೊಳೆಗೆ ಬೀಳುವ ಸಂಭವವಿರುವುದರಿಂದ ಸಂಬಂಧಪಟ್ಟವರು ಶೀಘ್ರವಾಗಿ ದುರಸ್ತಿ ಪಡಿಸಿ ಸಂಭಾವ್ಯ ಅಪಾಯಗಳನ್ನು ತಪ್ಪಿಸಬೇಕಾಗಿದೆ.
ಈ ಸೇತುವೆಯನ್ನು ಕೆಡವಿ ನೂತನ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಹೋಗಿ ಸುಮಾರು ಹನ್ನೊಂದು ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುವುದಾಗಿ ಹೇಳಲಾಗುತ್ತಿದೆಯಾದರೂ ಅಲ್ಲಿಯವರೆಗೆ ಈ ಸೇತುವೆಯನ್ನು ದುರಸ್ತಿ ಪಡಿಸಿ ಅಪಾಯವನ್ನು ತಪ್ಪಿಸಬೇಕಾಗಿ ನಾಗರಿಕರ ಆಗ್ರಹವಾಗಿದೆ.