ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಳ್ಯ ಉತ್ತರ ಬೀರಮಂಗಲ ನಿವಾಸಿ ಭಾಸ್ಕರ ಅಡ್ಕಾರು ಜು. ೩೧ರಂದು ವಯೋ ನಿವೃತ್ತಿ ಹೊಂದಲಿದ್ದಾರೆ.
೧೯೬೩ ಫೆ. ೭ರಂದು ದಿ. ರಾಮ ಅಡ್ಕಾರು ಮತ್ತು ದಿ. ಕುಂಞಮ್ಮ ಅಡ್ಕಾರುರವರ ಪುತ್ರರಾಗಿ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಜನಿಸಿದ ಭಾಸ್ಕರ ಅಡ್ಕಾರುರವರು ಅಡ್ಕಾರು ಸ.ಹಿ.ಪ್ರಾ. ಶಾಲೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಬಳಿಕ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ೧೯೯೨ ಜೂ. ೧೯ರಂದು ಪೊಲೀಸ್ ಹುದ್ದೆಗೆ ನೇಮಕಾತಿಗೊಂಡು ಉಡುಪಿ ಜಿಲ್ಲೆಯ ಕೋಟ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ಆರಂಭಿಸಿದರು. ತದನಂತರ ೧೯೯೩-೯೪ರಲ್ಲಿ ಮಂಗಳೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ ಪ್ರಥಮ ಬ್ಯಾಚ್ ನಲ್ಲಿ ತರಬೇತಿ ಪಡೆದರು. ೧೯೯೭ರಲ್ಲಿ ಉಡುಪಿಯಿಂದ ಮಂಗಳೂರು ಉತ್ತರ ಪೊಲೀಸ್ ಠಾಣೆ, ೨೦೦೦ ನೇ ಇಸವಿಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಗ್ರಾಮಾಂತರ ಠಾಣೆ, ಪುತ್ತೂರು ಸಂಚಾರಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ೨೦೧೬ರ ಆ. ೧೫ರಂದು ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಭಡ್ತಿಪಡೆದು ನೂತನವಾಗಿ ಆರಂಭಗೊಂಡ ಬೆಳ್ಳಾರೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು. ಒಟ್ಟು ೩೦ ವರ್ಷ, ಒಂದು ತಿಂಗಳು, ೧೨ ದಿವಸಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಜು. ೩೧ರಂದು ನಿವೃತ್ತಿಯಾಗಲಿದ್ದಾರೆ. ಇವರು ತಮ್ಮ ಸೇವಾ ಅವಧಿಯಲ್ಲಿ ಹಲವಾರು ದರೋಡೆ, ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಮೇಲಾಧಿಕಾರಿಗಳ ಜೊತೆ ಸಹಕಾರ ನೀಡಿರುತ್ತಾರೆ. ಇವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಯಂ. ಎಂ.ಎ. ಬಿ.ಎಡ್ ಪದವೀಧರರಾಗಿದ್ದು, ಪ್ರಸ್ತುತ ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುತ್ರ ಜೀವಿತ್ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಸಿ.ಎ. ವಿದ್ಯಾರ್ಥಿಯಾಗಿದ್ದಾರೆ. ಓರ್ವ ಸಹೋದರ ಗೋಪಾಲ ಅಡ್ಕಾರು ಸೆಂಟ್ರಲ್ ಕಸ್ಟಮ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದರೆ ಇನ್ನೋರ್ವ ಸಹೋದರ ಬಾಲಕೃಷ್ಣ ಅಡ್ಕಾರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹೋದರಿ ಶ್ರೀಮತಿ ಕುಸುಮ ಯೋಗೀಶ್ವರ್ ಆನ್ಯಾಳ ಚೆಂಬು ಗ್ರಾ.ಪಂ. ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.