ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ನಾರಾಯಣ ಪಿ ಯವರು ಜು. 31ರಂದು ನಿವೃತ್ತಿ ಹೊಂದಲಿದ್ದಾರೆ.
ಅಜ್ಜಾವರ ಗ್ರಾಮದ ಕಾಂತಮಂಗಲದ ಪುತ್ತಿಲ ದಿ. ರಾಮಯ್ಯ ಗೌಡ ಮತ್ತು ದಿ. ಅಕ್ಕಯ್ಯ ದಂಪತಿಯ ಪುತ್ರರಾಗಿ 1962 ರ ಆ. 1ರಂದು ಜನಿಸಿದ ನಾರಾಯಣ ಪಿ ಯವರು ಸ.ಹಿ.ಪ್ರಾ. ಶಾಲೆ ಕಾಂತಮಂಗಲದಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದರು. ಬಳಿಕ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದರು. ವಿದ್ಯಾಭ್ಯಾಸದ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕ್ಲರ್ಕ್ ಕಂ ಟೈಪಿಸ್ಟ್ ಆಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ 1993 ನವೆಂಬರ್ ನಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿ ಕಾರವಾರ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾದರು. 2000ನೇ ಇಸವಿಯ ಜೂನ್ ತಿಂಗಳಲ್ಲಿ ಮೂಲ್ಕಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು. ಈ ಸಮಯದಲ್ಲಿ ೨ ವರ್ಷಗಳ ಕಾಲ ಮಂಗಳೂರು ರೌಡಿ ನಿಗ್ರಹ ದಳದಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ 2004ರಲ್ಲಿ ಮೂಲ್ಕಿಯಿಂದ ಪುತ್ತೂರು ಗ್ರಾಮಾಂತರ ಠಾಣೆಗೆ, 2011ರಲ್ಲಿ ವಿಟ್ಲ ಠಾಣೆಗೆ ವರ್ಗಾವಣೆಗೊಂಡರು. ಬಳಿಕ 2012ರ ಸೆಪ್ಟೆಂಬರ್ ನಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಮುಂಬಡ್ತಿಗೊಂಡು ಪುತ್ತೂರು ನಗರ ಠಾಣೆಗೆ ವರ್ಗಾವಣೆಗೊಂಡರು. 2020ರ ಸೆಪ್ಟೆಂಬರ್ ನಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಭಡ್ತಿ ಪಡೆದು ಬೆಳ್ಳಾರೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು. ಒಟ್ಟು 28 ವರ್ಷ 9 ತಿಂಗಳುಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಜು. 31ರಂದು ನಿವೃತ್ತಿ ಹೊಂದಲಿದ್ದಾರೆ.
ನಾರಾಯಣ ಪಿ.ಯವರು 2003ರಲ್ಲಿ ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಆನೆಗುಂಡಿ ಅಣ್ಣು ಗೌಡ ಮತ್ತು ಶ್ರೀಮತಿ ವಾರಿಜ ದಂಪತಿಯ ಪುತ್ರಿ ಪ್ರಮೀಳಾರೊಂದಿಗೆ ವಿವಾಹವಾಗಿ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಶ್ರೀಮತಿ ಪ್ರಮೀಳಾರವರು ಸುಳ್ಯ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುತ್ರ ಧ್ಯಾನ್ ದೀಪ್ ಸುಳ್ಯ ಎನ್.ಎಂ.ಸಿ. ಯಲ್ಲಿ ಪಿ.ಯು. ವಿದ್ಯಾಭ್ಯಾಸ ಪಡೆದರೆ ಪುತ್ರಿ ಕು. ಸಿಂಚನಾ ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.