ನಡು ರಸ್ತೆಯಲ್ಲಿ ಟಯರ್ ಉರಿಸಿ ಆಕ್ರೋಶ
ಆರೋಪಿಗಳ ಬಂಧನಕ್ಕೆ ಆಗ್ರಹ : ಎಸ್ಐಯೊಂದಿಗೆ ಚಕಮಕಿ
ನಿನ್ನೆ ರಾತ್ರಿ ಬೆಳ್ಳಾರೆಯಲ್ಲಿ ಹತ್ಯೆಗೀಡಾಗಿರುವ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ರವರ ಹತ್ಯೆಗೆ ಕಾರಣರಾಗಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹಾಗೂ ನಿನ್ನೆಯ ಘಟನೆಯನ್ನು ಖಂಡಿಸಿ, ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸುಳ್ಯ ಪೇಟೆಯ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ. ಹತ್ಯೆಯನ್ನು ಖಂಡಿಸಿ ಇಂದು ಬೆಳಿಗ್ಗೆಯಿಂದ ಸುಳ್ಯ ನಗರದ ಕೆಲವು ಅಂಗಡಿಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದರು. ಇಂದು ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ಭಜರಂಗದಳದ ಲತೀಶ್ ಗುಂಡ್ಯ, ಹಿಂದೂ ಜಾಗರಣ ವೇದಿಕೆಯ ತಾಲೂಕು ಮಹೇಶ್ ಉಗ್ರಾಣಿಮನೆ, ವಿಶ್ವ ಹಿಂದೂ ಪರಿಷತ್ನ ಸಂಚಾಲಕ ಸೋಮಶೇಖರ್ ಪೈಕರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸುಳ್ಯ ಪೇಟೆಯಲ್ಲಿ ಮೆರವಣಿಗೆ ಹೋದರು. ಈ ವೇಳೆ ತೆರೆದಿದ್ದ ಅಂಗಡಿ, ಹೋಟೆಲ್ಗಳಿಗೆ ಕಾರ್ಯಕರ್ತರ ಗುಂಪು ಹೋಗಿ ಬಲಾತ್ಕಾರವಾಗಿ ಶಟರ್ಗಳನ್ನು ಎಳೆದ ಘಟನೆಯೂ ನಡೆಯಿತು. ಸುಳ್ಯದ ಬಸ್ ನಿಲ್ದಾಣದ ಬಳಿಯ ಸುದ್ದಿ ಪತ್ರಿಕಾ ವಿತರಣಾ ಕೇಂದ್ರವನ್ನು ಮುಚ್ಚಿಸಲಾಯಿತು.
ನಡು ರಸ್ತೆಯಲ್ಲಿ ಟಯರ್ಗೆ ಬೆಂಕಿ
ಖಾಸಗಿ ಬಸ್ ನಿಲ್ದಾಣದಿಂದ ಮುಖ್ಯ ರಸ್ತೆಗೆ ಬಂದ ಪ್ರತಿಭಟನಾಕಾರರು ಎದುರಿನ ರಸ್ತೆಯಲ್ಲಿ ಟಯರ್ಗಳನ್ನು ಹಾಕಿ ಬೆಂಕಿ ಇಟ್ಟರು. ಟಯರ್ ಭಗಭಗನೆ ಉರಿಯುತ್ತಿತ್ತು. ರಸ್ತೆಗೆ ಸುತ್ತುವರಿದು ಘೋಷಣೆ ಕೂಗಿದರು. ರಸ್ತೆಯಲ್ಲಿ ಟಯರ್ ಉರಿಸುತ್ತಿರುವುದನ್ನು ಕಂಡ ಸುಳ್ಯ ಎಸ್ಐ ದಿಲೀಪ್ರವರು ಬಂದು ಲಾಠಿಯಿಂದ ಟಯರ್ನ್ನು ರಸ್ತೆಯ ಬದಿಗೆ ಸರಿಸಿದರು.
ಚಕಮಕಿ
ಎಸ್ಐಯವರು ರಸ್ತೆಯ ಮಧ್ಯದಲ್ಲಿದ್ದ ಟಯರ್ನ್ನು ಬದಿಗೆ ಸರಿಸುತ್ತಿದ್ದಾಗ ಆಕ್ರೋಶಿತರಾದ ಪ್ರತಿಭಟನಾಕಾರರು ಎಸ್ಐಯವರೊಂದಿಗೆ ಮಾತಿಗಿಳಿದರು. ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಬೇಕು. ಈ ಪತ್ರಿಭಟನೆ ನಮ್ಮ ಕಾರ್ಯಕರ್ತರ ನೋವಿನ ಪ್ರತೀಕ ಎಂದು ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ಎಸ್ ಐಯವರಿಗೆ ಹೇಳಿದಾಗ ಆರೋಪಿಗಳನ್ನು ಬಂಧಿಸಿಯೇ ಬಂಧಿಸುತ್ತೇವೆ. ನಿಮ್ಮ ಸಹಕಾರ ಬೇಕು. ನೀವು ಹೀಗೆಲ್ಲಾ ಮಾಡುತ್ತಿದ್ದರೆ ನಾವು ಜೊತೆ ಬರುವದೋ, ಆರೋಪಿಗಳನ್ನು ಹುಡುಕುವುದೋ ಎಂದು ಪ್ರಶ್ನಿಸಿದರು. ನಮ್ಮ ಸಹಕಾರ ನಿಮಗೆ ಇದೆ. ಆರೋಪಿಗಳನ್ನು ಬಂಧಿಸಿ ಎಂದು ಹರೀಶ್ ಕಂಜಿಪಿಲಿ ಹೇಳಿದರು. ನಾನು ನಿನ್ನೆ ರಾತ್ರಿ ಬೆಳ್ಳಾರೆಗೆ ಹೋದವರು ಈಗ ಬಂದಿರುವುದು. ಮತ್ತೆ ಈಗ ವಾಪಾಸ್ ಹೋಗಬೇಕು. ನೀವು ಶಾಂತವಾಗಿದ್ದು ನಮ್ಮೊಡನೆ ಸಹಕರಿಸಿ ಎಂದು ಎಸ್ಐಯವರು ಹೇಳಿದರು. ಹರೀಶ್ ಕಂಜಿಪಿಲಿಯವರು ಕಾರ್ಯಕರ್ತರನ್ನು ಕರೆದು ಕೆಳಗೆ ಬಂದರು.
ಬಿಜೆಪಿ ಕಚೇರಿಯ ಎದುರಿನ ರಸ್ತೆಯವರೆಗೆ ಬಂದ ಮೆರವಣಿಗೆ ಅಲ್ಲಿ ನಿಂತಿತು. ನಾವಿನ್ನು ಬೆಳ್ಳಾರೆಗೆ ಹೋಗೋಣ. ಪ್ರವೀಣ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸೋಣ ಎಂದು ಹೇಳಿ ಹರೀಶ್ ಕಂಜಿಪಿಲಿ ಸಹಿತ ಕೆಲವು ನಾಯಕರು ಕಾರು ಹತ್ತಿ ಹೋದರು. ಈ ವೇಳೆ ಅಲ್ಲಿ ಸೇರಿದ್ದ ಕಾರ್ಯಕರ್ತರ ಜೊತೆ ಮಾತನಾಡಿದ ಭಜರಂಗದಳದ ಮುಖಂಡ ಲತೀಶ್ ಗುಂಡ್ಯ ಸುಳ್ಯ ಪೇಟೆ ಬಂದ್ ಆಗಿದೆ. ನಾವೆಲ್ಲಾ ಕಾರ್ಯಕರ್ತರು ತಮ್ಮ ವಾಹನದಲ್ಲೇ ಬೆಳ್ಳಾರೆಗೆ ಹೋಗೋಣ ಎಂದು ಹೇಳಿದರು.